ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ನಟ ದರ್ಶನ್ ಆರೋಗ್ಯಕ್ಕೆ ಸಂಬಂಧಿಸಿದ ವೈದ್ಯಕೀಯ ವರದಿಯನ್ನು ಅವರ ವಕೀಲರು ಬುಧವಾರ ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ.
ದರ್ಶನ್‌ಗೆ ಇತ್ತೀಚೆಗಷ್ಟೇ ಆರು ವಾರಗಳ ವೈದ್ಯಕೀಯ ಜಾಮೀನು ನೀಡಿದ್ದ ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠವು “ಯಾವಾಗ ಶಸ್ತ್ರಚಿಕಿತ್ಸೆ, ಎಷ್ಟು ದಿನ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ. ತದನಂತರ ಚಿಕಿತ್ಸೆ ಏನಾದರೂ ಇರಲಿದೆಯೇ ಎಂಬ ವಿವರಗಳನ್ನು ಜೈಲಿನಿಂದ ಬಿಡುಗಡೆಯಾದ ಒಂದು ವಾರದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು” ಎಂಬ ಷರತ್ತು ವಿಧಿಸಿತ್ತು.
ಈ ಆದೇಶದ ಅಡಿಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಆರು ವಾರಗಳ ಷರತ್ತುಬದ್ಧ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರಬಂದಿರುವ ದರ್ಶನ್, ಸದ್ಯ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ವರದಿಯ ಮುಖ್ಯಾಂಶಗಳ ಬಗ್ಗೆ ವಿವರಿಸಿರುವ ಮೂಲಗಳು, ‘ದರ್ಶನ್ ಆಪರೇಷನ್ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಸದ್ಯ ಅವರಿಗೆ ಫಿಸಿಯೋಥೆರಪಿ ನೀಡಲಾಗುತ್ತಿದೆ. ಆದರೆ, ಫಿಸಿಯೋಥೆರಪಿಯೇ ಅಂತಿಮ ಅಲ್ಲ ಎನಿಸುತ್ತಿದೆ. ಆದಾಗ್ಯೂ, ಸದ್ಯದ ನೋವಿನಿಂದ ಅವರು ಚೇತರಿಕೆ ಕಾಣದೇ ಇದ್ದಲ್ಲಿ ಶಸ್ತ್ರಚಿಕಿತ್ಸೆ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿದೆ” ಎಂದು ಹೇಳಿವೆ.
“ಈಗಾಗಲೇ ದರ್ಶನ್‌ಗೆ ಶಸ್ತ್ರಚಿಕಿತ್ಸೆ ವಿಧಾನಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೆ, ಅವರಿನ್ನೂ ಶಸ್ತ್ರಚಿಕಿತ್ಸೆಗೆ ಒಪ್ಪಿಗೆ ಸೂಚಿಸಿಲ್ಲ. ರೋಗಿ ಒಪ್ಪಿದ ನಂತರವೇ ಶಸ್ತ್ರಚಿಕಿತ್ಸೆಯ ದಿನಾಂಕದ ಬಗ್ಗೆ ಅಂತಿಮ ನಿರ್ಧಾರ ಮಾಡಲಾಗುವುದು ಎಂದು ಬಿಜಿಎಸ್ ಆಸ್ಪತ್ರೆಯ ಡಾ.ನವೀನ್ ನೀಡಿರುವ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ” ಎಂದು ಮೂಲಗಳು ಹೇಳಿವೆ.
ಪವಿತ್ರಾಗೌಡ ಜಾಮೀನು ವಿಚಾರಣೆ: ಇದೇ ಪ್ರಕರಣದ ಮೊದಲ ಆರೋಪಿ ಪವಿತ್ರಾಗೌಡ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ನ್ಯಾಯಪೀಠದಲ್ಲಿ ಗುರುವಾರ (ನ.7) ವಿಚಾರಣೆಗೆ ನಿಗದಿಯಾಗಿದೆ.