[ರೇಣುಕಾಸ್ವಾಮಿ ಕೊಲೆ] ಸುದ್ದಿ ವಾಹಿನಿಗಳ ವಿರುದ್ಧ ಕ್ರಮಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ಕೋರಿದ ನಟ ದರ್ಶನ್

2026ರ ಜ.16ರಂದು ಕಾರ್ಯಕ್ರಮ ಸಂಹಿತೆ ನಿಯಮ 6(ಡಿ) (ಎಫ್‌) & (i) ಉಲ್ಲಂಘಿಸಿರುವ 1000 ಯೂಟ್ಯೂಬ್‌ ಲಿಂಕ್‌ಗಳನ್ನು ಕೇಂದ್ರ ಮಾಹಿತಿ ‍‍& ಪ್ರಸಾರ ಇಲಾಖೆಗೆ ಸಲ್ಲಿಸಲಾಗಿದೆ. ಆದರೆ, ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆಕ್ಷೇಪಿಸಿರುವ ದರ್ಶನ್‌.
Karnataka HC, Darshan and Media channels
Karnataka HC, Darshan and Media channels
Published on

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿವರಗಳನ್ನು ಪ್ರಸಾರ ಮಾಡದಂತೆ ನ್ಯಾಯಾಲಯದ ನಿರ್ಬಂಧ ಆದೇಶವನ್ನು ಉಲ್ಲಂಘಿಸುತ್ತಿರುವ ಸುದ್ದಿ ವಾಹಿನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ನಟ ದರ್ಶನ್ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್‌ ಅವರ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಈ ಬಗ್ಗೆ ನಿಲುವು ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಪೀಠ ಸೂಚಿಸಿತು. ಅದಕ್ಕೆ ಕೇಂದ್ರ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಅರವಿಂದ ಕಾಮತ್ ಪ್ರತಿಕ್ರಿಯಿಸಿ ಅರ್ಜಿಯಲ್ಲಿ ಕೋರಲಾದ ಮನವಿ ಕುರಿತು ಯಾವ ಕ್ರಮ ಕೈಗೊಳಲಾಗುವುದು ಎಂಬ ಬಗ್ಗೆ ಸೋಮವಾರದೊಳಗೆ ತಿಳಿಸಲಾಗುವುದು ಎಂದರು. ಇದನ್ನು ಪರಿಗಣಿಸಿದ ನ್ಯಾಯಪೀಠ ವಿಚಾರಣೆಯನ್ನು ಏಪ್ರಿಲ್ 6ಕ್ಕೆ ಮುಂದೂಡಿತು.

ಸುದ್ದಿ ವಾಹಿನಿಗಳು ಗ್ರಾಫಿಕ್ಸ್ ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ಅನಿಮೇಷನ್‌ಗಳನ್ನು ಬಳಸಿಕೊಂಡು ನ್ಯಾಯಾಲಯದ ಪ್ರಕ್ರಿಯೆಗಳು ಮತ್ತು ಅಪರಾಧದ ದೃಶ್ಯವನ್ನು ಮರುಸೃಷ್ಟಿಸುತ್ತಿವೆ ಮತ್ತು ವಿಚಾರಣಾಧೀನ ನ್ಯಾಯಾಲಯವು ದಾಖಲಿಸಿದ ಸಾಕ್ಷ್ಯಗಳನ್ನು ಮುಂದಿಟ್ಟುಕೊಂಡು ಚರ್ಚೆಗಳನ್ನು ನಡೆಸುತ್ತಿವೆ. ಇದು 2024ರಲ್ಲಿ ಕರ್ನಾಟಕ ಹೈಕೋರ್ಟ್ ಮತ್ತು ಸಿಟಿ ಸಿವಿಲ್ ನ್ಯಾಯಾಲಯವು ಹೊರಡಿಸಿರುವ ಪ್ರತಿಬಂಧಕಾದೇಶಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಅಲ್ಲದೇ, ಸುದ್ದಿವಾಹಿನಿಗಳು ಉದ್ದೇಶಪೂರ್ವಕವಾಗಿ ವಿಚಾರಣೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪ್ರಸಾರ ಮಾಡುತ್ತಿವೆ. ಇದು ಸಂವಿಧಾನದ 14 ಮತ್ತು 21ನೇ ವಿಧಿ ಅಡಿಯಲ್ಲಿ ಖಾತರಿಪಡಿಸಲಾದ ಹಕ್ಕುಗಳನ್ನು ಉಲ್ಲಂಘನೆಯಾಗಿದೆ. ಆದ್ದರಿಂದ, ಈ ಸಂಬಂಧ 2026ರ ಜನವರಿ 16ರಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ನೀಡಿದ ದೂರು ಪರಿಗಣಿಸಬೇಕು ಹಾಗೂ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸುತ್ತಿರುವ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ನಟ ದರ್ಶನ್ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಕೇಬಲ್‌ ಟೆಲಿವಿಷನ್‌ ನೆಟವರ್ಕ್ಸ್‌ ನಿಯಮಗಳು 1994 ಅನ್ನು ಉಲ್ಲಂಘಿಸಿದರೆ ಸುದ್ದಿ ವಾಹಿನಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ. ಈ ಸಂಬಂಧ 2026ರ ಜನವರಿ 16ರಂದು ದೂರು ನೀಡಿದ್ದು, ಅದರಲ್ಲಿ ಕಾರ್ಯಕ್ರಮ ಸಂಹಿತೆ ನಿಯಮ 6(ಡಿ) (ಎಫ್‌) & (i) ಉಲ್ಲಂಘಿಸಿರುವ 1000 ಯೂಟ್ಯೂಬ್‌ ಲಿಂಕ್‌ಗಳನ್ನು ಸಚಿವಾಲಯಕ್ಕೆ ಸಲ್ಲಿಸಲಾಗಿದೆ. ಆದರೆ, ಯಾವುದೇ ಕ್ರಮಕೈಗೊಂಡಿಲ್ಲ. ಈ ಎಲ್ಲಾ ಆಕ್ಷೇಪಾರ್ಹವಾದ ಲಿಂಕ್‌ಗಳನ್ನು ತೆರವು ಮಾಡಲು ಯೂಟ್ಯೂಬ್‌ ಮತ್ತು ಫೇಸ್‌ಬುಕ್‌/ಮೆಟಾಗೆ ನಿರ್ದೇಶಿಸುವಂತೆ ಕೋರಲಾಗಿದೆ. ಅದಾಗ್ಯೂ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಯಾವುದೇ ಕ್ರಮಕೈಗೊಂಡಿಲ್ಲ. ಮಾಧ್ಯಮಗಳು ನ್ಯಾಯಯುತ ಪತ್ರಿಕೋದ್ಯಮದ ಹೆಸರಿನಲ್ಲಿ ಮಾಧ್ಯಮ ವಿಚಾರಣೆ ನಡೆಸುವ ಮೂಲಕ ದರ್ಶನ್‌ ಅವರಿಗೆ ಹಾನಿ ಉಂಟು ಮಾಡುತ್ತಿವೆ ಎಂದು ಆಕ್ಷೇಪಿಸಲಾಗಿದೆ.

Also Read
ದರ್ಶನ್‌, ಪತ್ನಿ ವಿಜಯಲಕ್ಷ್ಮಿ ವಿರುದ್ಧ ಅವಿಶ್ವಾಸಾರ್ಹ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ

ಮಾಧ್ಯಮಗಳು ದರ್ಶನ್‌ ಅವರ ನಡೆಯನ್ನಷ್ಟೇ ಅಲ್ಲದೇ ಅವರ ಪತ್ನಿ ಮತ್ತು ಪುತ್ರನ ನಡೆಗೆ ಹಾನಿ ಉಂಟು ಮಾಡುತ್ತಿವೆ. ತಮಗೆ ಸಂಬಂಧಿಸಿದ ಕಲ್ಪಿತ, ಊಹಾತ್ಮಕ ಪತ್ರಿಕೋದ್ಯಮದ ಮೂಲಕ ಸುದ್ದಿ ವಾಹಿನಿಗಳು ಕೋಟ್ಯಂತರ ರೂಪಾಯಿ ಸಂಪಾದಿಸಿವೆ. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಗೌಪ್ಯ ಮತ್ತು ಸೂಕ್ಷ್ಮ ಮಾಹಿತಿಯನ್ನು ಪ್ರಸಾರ ಮಾಡುವ ಮೂಲಕ ನ್ಯಾಯಾಲಯದ ಆದೇಶಕ್ಕೆ ಮಾಧ್ಯಮಗಳು ಅಗೌರವ ತೋರಿವೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

Kannada Bar & Bench
kannada.barandbench.com