ತಾತ್ಕಾಲಿಕ ಉದ್ಯೋಗಿ ಬದಲಿಗೆ ಸಾಮಾನ್ಯ ಉದ್ಯೋಗಿ ನೇಮಿಸಬಹುದೇ ವಿನಾ ಬೇರೊಬ್ಬ ತಾತ್ಕಾಲಿಕ ಉದ್ಯೋಗಿಯನ್ನಲ್ಲ: ಸುಪ್ರೀಂ

ಅತಿಥಿ ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದಂತೆ ಮಧ್ಯಪ್ರದೇಶ ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ಪೀಠದಲ್ಲಿ ನಡೆಯಿತು.
Justice L Nageswara Rao, Justice BR Gavai and Supreme court
Justice L Nageswara Rao, Justice BR Gavai and Supreme court A1
Published on

ನಿಗದಿಪಡಿಸಿದ ಕಾರ್ಯವಿಧಾನ ಅನುಸರಿಸಿ ತಾತ್ಕಾಲಿಕ ನೌಕರನ ಬದಲಿಗೆ ಸಾಮಾನ್ಯ ಉದ್ಯೋಗಿಯನ್ನು ನೇಮಿಸಬಹುದೇ ವಿನಾ ಮತ್ತೊಬ್ಬ ತಾತ್ಕಾಲಿಕ ಉದ್ಯೋಗಿಯನ್ನಲ್ಲ ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಹೇಳಿದೆ. [ಮನೀಷ್ ಗುಪ್ತಾ ಮತ್ತು ಜನ ಭಾಗಿದರಿ ಸಮಿತಿ ಅಧ್ಯಕ್ಷ ಹಾಗೂ ಇನ್ನಿತರರ ನಡುವಣ ಪ್ರಕರಣ].

ಅತಿಥಿ ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದಂತೆ ಮಧ್ಯಪ್ರದೇಶ ಹೈಕೋರ್ಟ್‌ ನೀಡಿದ್ದ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ಮತ್ತು ಬಿ ಆರ್‌ ಗವಾಯಿ ಅವರಿದ್ದ ಪೀಠದಲ್ಲಿ ನಡೆಯಿತು.

ಮಧ್ಯಪ್ರದೇಶ ರಾಜ್ಯದ 'ಜನ್ ಭಾಗೀದಾರಿ ಯೋಜನೆ' ಅಡಿ ಗುತ್ತಿಗೆ ಆಧಾರದ ಮೇಲೆ ಸರ್ಕಾರಿ ಕಾಲೇಜುಗಳಲ್ಲಿ ಪ್ರಕರಣದ ಮೇಲ್ಮನವಿದಾರರನ್ನು ಅತಿಥಿ ಉಪನ್ಯಾಸಕರನ್ನಾಗಿ ನೇಮಿಸಲಾಗಿತ್ತು. ಶೈಕ್ಷಣಿಕ ವರ್ಷ ಮುಗಿದ ನಂತರ, ಅರ್ಜಿದಾರರ ಸೇವೆಯನ್ನು ಸ್ಥಗಿತಗೊಳಿಸಿ ಆ ಹುದ್ದೆಗೆ ಹೊಸ ಜಾಹೀರಾತು ನೀಡಲಾಯಿತು.

ಈ ಹಿನ್ನೆಲೆಯಲ್ಲಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದರು. ಅವರ ಮನವಿಯನ್ನು ಉಚ್ಚನ್ಯಾಯಾಲಯದ ಏಕ ಸದಸ್ಯ ಪೀಠ ಅಂಗೀಕರಿಸಿತ್ತು. ಸಾಮಾನ್ಯ ನೇಮಕಾತಿ ಮಾಡುವವರೆಗೆ ಮೇಲ್ಮನವಿದಾರರು ತಮ್ಮ ಹುದ್ದೆ ಮುಂದುವರೆಯಲು ಅವಕಾಶ ನೀಡಬೇಕು ಎಂದು ಪ್ರತಿವಾದಿ ಅಧಿಕಾರಿಗಳಿಗೆ ಸೂಚಿಸಿತು. ಇದನ್ನು ಪ್ರಶ್ನಿಸಿ ಅಧಿಕಾರಿಗಳು ಹೈಕೋರ್ಟ್‌ ವಿಭಾಗೀಯ ಪೀಠದ ಮೊರೆ ಹೋದರು. ಪರಿಣಾಮ ಏಕಸದಸ್ಯ ಪೀಠದ ಆದೇಶವನ್ನು ವಿಭಾಗೀಯ ಪೀಠ ರದ್ದುಗೊಳಿಸಿತು. ಇದನ್ನು ಪ್ರಶ್ನಿಸಿ ಅತಿಥಿ ಉಪನ್ಯಾಸ ಹುದ್ದೆ ಆಕಕಾಂಕ್ಷಿಗಳು ಸುಪ್ರೀಂ ಕೋರ್ಟ್‌ಗೆ ಪ್ರಸ್ತುತ ಮೇಲ್ಮನವಿ ಸಲ್ಲಿಸಿದರು.

“ಮೇಲ್ಮನವಿದಾರರನ್ನು ಅತಿಥಿ ಉಪನ್ಯಾಸಕರನ್ನಾಗಿ ನೇಮಿಸಿಕೊಳ್ಳಲಾಗಿತ್ತೇ ವಿನಾ ತಾತ್ಕಾಲಿಕ ಉದ್ಯೋಗಿಗಳನ್ನಾಗಿಯಲ್ಲ ಎಂದು ಪ್ರತಿವಾದಿಗಳು ಪ್ರತಿಪಾದಿಸಿದರೂ ಅವರು ನೀಡಿದ ಜಾಹೀರಾತುಗಳು ತಾತ್ಕಾಲಿಕ ಆಧಾರದಲ್ಲೇ ಅವರನ್ನು ನೇಮಿಸಿಕೊಳ್ಳಲಾಗಿತ್ತು ಎಂಬುದನ್ನು ಸಾರುತ್ತವೆ” ಎಂದ ಪೀಠ ಏಕಸದಸ್ಯ ಪೀಠದ ಆದೇಶದಲ್ಲಿ ಯಾವುದೇ ದೋಷವಿಲ್ಲ ಎಂಬುದಾಗಿ ತಿಳಿಸಿತು.

ಆದರೂ ಆಯ್ಕೆಯಾದ ಅಭ್ಯರ್ಥಿಗಳಿಗೆ ಗೌರವಧನ ಪಾವತಿಸಲಾಗುವುದು ಎಂದು ಜಾಹೀರಾತು ನೀಡಿರುವುದರಿಂದ ಯುಜಿಸಿ ಸುತ್ತೋಲೆಗೆ ಅನುಗುಣವಾಗಿ ವೇತನ ಪಡೆಯಲು ಅರ್ಜಿದಾರರು ಅರ್ಹರು ಎಂಬ ಏಕಸದಸ್ಯ ಪೀಠದ ನಿರ್ದೇಶನ ಸಮರ್ಥನೀಯವಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿ ಮನವಿಯನ್ನು ಭಾಗಶಃ ಅಂಗೀಕರಿಸಿತು.

Kannada Bar & Bench
kannada.barandbench.com