ಅದಾನಿ-ಹಿಂಡನ್‌ಬರ್ಗ್‌ ವಿವಾದ: ಮಾಧ್ಯಮ ವರದಿಗಳ ಆಧರಿಸಿ ನಿರ್ಧರಿಸಲು ಸೆಬಿಗೆ ಹೇಳಲಾಗದು; ಆದೇಶ ಕಾಯ್ದಿರಿಸಿದ ಸುಪ್ರೀಂ

"ಮಾಧ್ಯಮಗಳಲ್ಲಿ ಮುದ್ರಣವಾಗಿದ್ದನ್ನು ಆಧರಿಸಿ ಹಣಕಾಸು ನಿಯಂತ್ರಣ ಸಂಸ್ಥೆಯನ್ನು ಕ್ರಮಕೈಗೊಳ್ಳುವಂತೆ ಹೇಳಲಾಗದು. ಸೆಬಿ ಮಾಧ್ಯಮಗಳನ್ನು ಅನುಸರಿಸಬೇಕೆ?" ಎಂದು ವಿಚಾರಣೆಯ ವೇಳೆ ಸಿಜೆಐ ಪ್ರಶ್ನಿಸಿದರು.
Adani, Hindenburg and Supreme Court
Adani, Hindenburg and Supreme Court

ಹಿಂಡನ್‌ಬರ್ಗ್‌ ಸಂಶೋಧನಾ ವರದಿಯಲ್ಲಿ ಅದಾನಿ ಸಮೂಹದ ವಿರುದ್ಧ ಪ್ರಕಟಿಸಲಾಗಿದ್ದ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿದ ಸುಪ್ರೀಂ ಕೋರ್ಟ್‌ ಶುಕ್ರವಾರ ತೀರ್ಪು ಕಾಯ್ದಿರಿಸಿದೆ.

ಮುಖ್ಯ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್‌ ಮಿಶ್ರಾ ಅವರ ನೇತೃತ್ವದ ತ್ರಿಸದಸ್ಯ ಪೀಠವು ತೀರ್ಪು ಕಾಯ್ದಿರಿಸಿದೆ.

ಅದಾನಿ ನಡತೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಏನು ಪ್ರಕಟವಾಗಿದೆ ಎಂಬುದನ್ನು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಅನುಸರಿಸಬೇಕು ಎಂದು ನಿರೀಕ್ಷಿಸಲಾಗದು ಎಂದು ನ್ಯಾಯಾಲಯವು ಇಂದು ವಿಚಾರಣೆಯ ಸಂದರ್ಭದಲ್ಲಿ ಹೇಳಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಅವರು "ಪ್ರಕರಣದಲ್ಲಿ ಸೆಬಿ ನಡತೆಯು ವಿಶ್ವಾಸಾರ್ಹವಾಗಿಲ್ಲ. 13 ರಿಂದ 14 ಎಂಟ್ರಿಗಳು ಅದಾನಿಗೆ ಸಂಬಂಧಿಸಿವೆ ಎಂದು ಅದು ಹೇಳಿದೆ. ಆದರೆ, ಎಫ್‌ಪಿಐ ಮಾರ್ಗಸೂಚಿಗಳನ್ನು ತಿದ್ದುಪಡಿ ಮಾಡಿರುವುದರಿಂದ ಅವುಗಳನ್ನು ನೋಡಲಾಗದು ಎಂದಿದ್ದಾರೆ” ಎಂದರು.

ಸಿಜೆಐ ಚಂದ್ರಚೂಡ್‌ ಅವರು “ಭೂಷಣ್‌ ಅವರೇ ಪತ್ರಿಕೆಗಳಲ್ಲಿ ಏನು ಮುದ್ರಣವಾಗಿದೆ ಎಂಬುದನ್ನು ಆಧರಿಸಿ ಕ್ರಮಕೈಗೊಳ್ಳಬೇಕು ಎಂದು ನೀವು ನಿರೀಕ್ಷಿಸಲಾಗದು. ಸೆಬಿ ಪತ್ರಕರ್ತರನ್ನು ಪಾಲಿಸಬೇಕೆ?” ಎಂದು ಸಿಜೆಐ ಕೇಳಿದರು.

“ಈ ದಾಖಲೆಗಳು ಪತ್ರಕರ್ತರಿಗೆ ಸಿಗುವುದಾದರೆ ಇದು ಸೆಬಿಗೆ ಹೇಗೆ ಸಿಗುವುದಿಲ್ಲ? ಇದರಲ್ಲಿ ವಿನೋದ್‌ ಅದಾನಿ ಅವರು ನಿಧಿಯನ್ನು ನಿಯಂತ್ರಿಸುತ್ತಿದ್ದಾರೆ ಎಂದು ತೋರಿಸುತ್ತದೆ. ಅದಾಗ್ಯೂ, ಅವರಿಗೆ ಏಕೆ ಇಷ್ಟು ವರ್ಷಗಳ ಕಾಲ ದೊರೆತಿಲ್ಲ. ಒಸಿಸಿಆರ್‌ಪಿ, ಗಾರ್ಡಿಯನ್‌ ಇತ್ಯಾದಿಗಳು ಅದಾನಿಯ ಷೇರಿನಲ್ಲಿ ವಿನೋದ್‌ ಅದಾನಿ ನಿಯಂತ್ರಣಕ್ಕೆ ಒಳಪಟ್ಟಿರುವ ನಕಲಿ ಕಂಪೆನಿಗಳು ಹೂಡಿಕೆ ಮಾಡಿವೆ ಎಂದು ತೋರಿಸಿವೆ” ಎಂದು ಭೂಷಣ್‌ ವಾದಿಸಿದರು.

ಇದಕ್ಕೆ ಸಿಜೆಐ ಅವರು “ಸ್ವಾಭಾವಿಕ ನ್ಯಾಯದಾನ ತತ್ವದ ಪ್ರಕಾರ ಮಾಧ್ಯಮಗಳ ವರದಿಯು ಸಾಕ್ಷ್ಯ ಮೌಲ್ಯ ಹೊಂದಲು ಸಾಧ್ಯವೇ? ಇಂಥ ಪ್ರಕರಣದಲ್ಲಿ ಕಾರಣ ತೋರಿಸಲು ಸಾಧ್ಯವೇ? ಇದು ವಿಶ್ವಾಸಾರ್ಹ ಅಥವಾ ವಿಶ್ವಾಸಾರ್ಹತೆಯ ಕೊರತೆ ಎಂದು ನಾವು ಊಹಿಸಲು ಸಾಧ್ಯವಿಲ್ಲ” ಎಂದರು.

Related Stories

No stories found.
Kannada Bar & Bench
kannada.barandbench.com