ನವಿ ಮುಂಬೈನಲ್ಲಿ ಜವಾಹರಲಾಲ್ ನೆಹರು ಬಂದರು ಪ್ರಾಧಿಕಾರದ (ಜೆಎನ್‌ಪಿಎ) ಕಂಟೇನರ್ ಟರ್ಮಿನಲ್ ನವೀಕರಿಸುವ ಸಂಬಂಧದ ಹರಾಜು ಪ್ರಕ್ರಿಯೆಯಲ್ಲಿ ತನ್ನ ಬಿಡ್ ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿ ₹ 5 ಲಕ್ಷ ದಂಡ ವಿಧಿಸಿದ್ದ ಬಾಂಬೆ ಹೈಕೋರ್ಟ್ ತೀರ್ಪಿನ ವಿರುದ್ಧ ಅದಾನಿ ಪೋರ್ಟ್ಸ್ ವಿಶೇಷ ಆರ್ಥಿಕ ವಲಯ ಲಿಮಿಟೆಡ್ (ಅದಾನಿ), ಸುಪ್ರೀಂ ಕೋರ್ಟ್ ಮೊರೆ ಹೋಗಿದೆ [ಅದಾನಿ ಪೋರ್ಟ್ಸ್ ಮತ್ತು ವಿಶೇಷ ಆರ್ಥಿಕ ವಲಯ ಲಿಮಿಟೆಡ್ ಹಾಗೂ ಜವಾಹರಲಾಲ್ ನೆಹರು ಬಂದರು ಪ್ರಾಧಿಕಾರ ಮತ್ತು ಸಂಸ್ಥೆಗಳ ಟ್ರಸ್ಟಿಗಳ ಮಂಡಳಿ ನಡುವಣ ಪ್ರಕರಣ].
ಪ್ರಕರಣವನ್ನು ತುರ್ತಾಗಿ ಆಲಿಸಬೇಕೆಂದು ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ಅವರು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆ ಬಿ ಪರ್ದಿವಾಲಾ ಅವರಿದ್ದ ರಜಾಕಾಲೀನ ಪೀಠವನ್ನು ಕೋರಿದರು. ಆದರೆ ನ್ಯಾಯಾಲಯದ ರಿಜಿಸ್ಟ್ರಿ ಮುಂದೆ ಪ್ರಕರಣ ಪ್ರಸ್ತಾಪಿಸುವಂತೆ ನ್ಯಾಯಾಲಯ ಸೂಚಿಸಿತು.
30 ವರ್ಷಗಳ ಅವಧಿಗೆ ತಮ್ಮ ಕಂಟೈನರ್ ಟರ್ಮಿನಲ್‌ನ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಾಗಿ (ಜೆಎನ್‌ಪಿಎ) ಜಾಗತಿಕ ಮಟ್ಟದಲ್ಲಿ ಹರಾಜು ಕರೆದಿತ್ತು. ವಿಶಾಖಪಟ್ಟಣಂ ಬಂದರು ಟ್ರಸ್ಟ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಆಂಧ್ರ ಪ್ರದೇಶ ಹೈಕೋರ್ಟ್ ನೀಡಿದ್ದ ತೀರ್ಪನ್ನು ಆಧರಿಸಿ ಟೆಂಡರ್‌ನಿಂದ ಏಕೆ ಅದಾನಿ ಪೋರ್ಟ್ಸ್‌ನ್ನು ಅನರ್ಹಗೊಳಿಸಬಾರದು ಎಂದು ಪ್ರಶ್ನಿಸಿತ್ತು.
ನೋಟಿಸ್‌ಗೆ ಪ್ರತಿಕ್ರಿಯಿಸಿದ್ದ ಅದಾನಿ ಪೋರ್ಟ್ಸ್, ಬಿಡ್‌ನಲ್ಲಿ ಪೂರ್ವಾಗ್ರಹವಿಲ್ಲದೆ ಭಾಗವಹಿಸಲು ಅವಕಾಶ ನೀಡಬೇಕೆಂದು ಕೋರಿದ್ದರು. ಆದರೆ ಹೈಕೋರ್ಟ್ ಆದೇಶ ಉಲ್ಲೇಖಿಸಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಕಂಪೆನಿಯನ್ನು ಜೆಎನ್‌ಪಿಎ ಅನರ್ಹಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅದಾನಿ ಪೋರ್ಟ್ಸ್ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿತ್ತು.