ನೀಲಗಿರಿ ನ್ಯಾಯಾಲಯ ಸಂಕೀರ್ಣದಲ್ಲಿ ಮಹಿಳಾ ಶೌಚಾಲಯ ಸಮಸ್ಯೆ: ಮದ್ರಾಸ್ ಹೈಕೋರ್ಟ್‌ಗೆ ರಾಷ್ಟ್ರೀಯ ಮಹಿಳಾ ಆಯೋಗ ಪತ್ರ

ಸುಮಾರು ಮೂರು ದಶಕಗಳಿಂದ ನೀಲಗಿರಿ ನ್ಯಾಯಾಲಯ ಸಂಕೀರ್ಣದಲ್ಲಿ ಶೌಚಾಲಯಕ್ಕಾಗಿ ಹೋರಾಟ ನಡೆಸುತ್ತಿರುವ ವಕೀಲೆಯರ ಸಂಕಷ್ಟ ಕುರಿತು ʼಬಾರ್ & ಬೆಂಚ್ʼ ಆಂಗ್ಲ ಆವೃತ್ತಿಯ ಅಂಕಣದಲ್ಲಿ ಪ್ರಸ್ತಾಪವಾಗಿತ್ತು.
National Commission for Women
National Commission for Women

ತಮಿಳುನಾಡಿನ ಊಟಿಯಲ್ಲಿರುವ ನೀಲಗಿರಿ ನ್ಯಾಯಾಲಯ ಸಂಕೀರ್ಣದಲ್ಲಿ ವಕೀಲೆಯರ ಶೌಚಾಲಯ ಸಮಸ್ಯೆ ಬಗೆಹರಿಸುವಂತೆ ಕೋರಿ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ಮದ್ರಾಸ್ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರಿಗೆ ಪತ್ರ ಬರೆದಿದ್ದಾರೆ.

ಇಂದು (ಬುಧವಾರ, ಜೂನ್‌  7 ) ಬರೆದಿರುವ ಪತ್ರದಲ್ಲಿ ಮಹಿಳಾ ವಕೀಲರಿಗೆ ಪ್ರತ್ಯೇಕ ಮತ್ತು ಸಂಪೂರ್ಣ ಕಾರ್ಯನಿರ್ವಹಣಾ ಶೌಚಾಲಯ ಸೌಲಭ್ಯ ಒದಗಿಸುವುದು ಲಿಂಗ ಸಮಾನತೆ ಮತ್ತು ಘನತೆಯ ವಿಷಯವಷ್ಟೇ ಅಲ್ಲದೆ ಸರ್ವ ಕಾನೂನು ವೃತ್ತಿಪರರನ್ನು ಒಳಗೊಳ್ಳುವ ಮತ್ತು ಅನುಕೂಲಕರ ವಾತಾವರಣ ಸೃಷ್ಟಿಸುವ ಅತ್ಯಗತ್ಯ ಹೆಜ್ಜೆಯಾಗಿದೆ ಎಂದು ರೇಖಾ ಹೇಳಿದ್ದಾರೆ.

"ಆದ್ದರಿಂದ, ಈ ವಿಷಯದ ಬಗ್ಗೆ ತಕ್ಷಣದ ಗಮನ ಹರಿಸುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ ಮತ್ತು ಈ ತುರ್ತು ಸಮಸ್ಯೆ ಪರಿಹರಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವುದಕ್ಕಾಗಿ  ಮಧ್ಯಪ್ರವೇಶಿಸುತ್ತಿದ್ದೇನೆ" ಎಂದು ರೇಖಾ ಶರ್ಮಾ ತಿಳಿಸಿದ್ದಾರೆ.

ಅಲ್ಲದೆ ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆ ಮೂರು ವಾರದೊಳಗೆ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ವರದಿ ನೀಡಬೇಕು ಎಂದು ಕೂಡ ಆಯೋಗ ತಿಳಿಸಿದೆ.

ಸುಮಾರು ಮೂರು ದಶಕಗಳಿಂದ ನೀಲಗಿರಿ ನ್ಯಾಯಾಲಯ ಸಂಕೀರ್ಣದಲ್ಲಿ ಶೌಚಾಲಯಕ್ಕಾಗಿ ಹೋರಾಟ ನಡೆಸುತ್ತಿರುವ ವಕೀಲೆಯರ ಸಂಕಷ್ಟ ಕುರಿತು ʼಬಾರ್ & ಬೆಂಚ್ʼ ಆಂಗ್ಲ ಆವೃತ್ತಿಯ ಅಂಕಣದಲ್ಲಿ ಪ್ರಸ್ತಾಪವಾಗಿತ್ತು. ಈ ಹಿನ್ನೆಲೆಯಲ್ಲಿ ಆಯೋಗ ಪತ್ರ ಬರೆದಿದೆ.

Related Stories

No stories found.
Kannada Bar & Bench
kannada.barandbench.com