ನ್ಯಾಯಬೆಲೆ ಅಂಗಡಿಗಳ ಹಂಚಿಕೆಯಲ್ಲಿ ನಿಯಮ ಪಾಲನೆ ಕಡ್ಡಾಯ: ಆಹಾರ ಇಲಾಖೆಗೆ ಹೈಕೋರ್ಟ್‌ ನಿರ್ದೇಶನ

ನಿಯಮ 11ರ ಪ್ರಕಾರ, ನ್ಯಾಯಬೆಲೆ ಅಂಗಡಿಗಳನ್ನು ಹಂಚಿಕೆ ಮಾಡುವಾಗ ನಗರ ಪ್ರದೇಶದಲ್ಲಾದರೆ 500 ಕಾರ್ಡ್‌ಗಳಿಗೆ ಒಂದರಂತೆ ಮತ್ತು ಗ್ರಾಮೀಣ ಪ್ರದೇಶದಲ್ಲಾದರೆ 800 ಕಾರ್ಡ್‌ಗಳಿಗೆ ಒಂದರಂತೆ ಅಂಗಡಿಗಳನ್ನು ಹಂಚಿಕೆ ಮಾಡಬೇಕು ಎಂದ ನ್ಯಾಯಾಲಯ.
Karnataka High Court
Karnataka High Court

ಸಾರ್ವಜನಿಕ ಪಡಿತರ ವಿತರಣೆಗೆ ನ್ಯಾಯಬೆಲೆ ಅಂಗಡಿಗಳ ಹಂಚಿಕೆಯಲ್ಲಿ ತಾರತಮ್ಯ ಮತ್ತು ನಿಯಮಗಳ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್, ಅಂಗಡಿಗಳ ಹಂಚಿಕೆಯಲ್ಲಿ ಕಡ್ಡಾಯವಾಗಿ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಈಚೆಗೆ ಆದೇಶ ಮಾಡಿದೆ.

ತನಗೆ ಹಂಚಿಕೆಯಾಗಿದ್ದ ನ್ಯಾಯಬೆಲೆ ಅಂಗಡಿಗಳನ್ನು ರದ್ದು ಮಾಡಿದ್ದನ್ನು ಪ್ರಶ್ನಿಸಿ ದೊಡ್ಡ ಬಿದರಕಲ್ಲು ನಿವಾಸಿಯಾದ ಬಿ ಮಂಜುನಾಥ್ ಎಂಬ ವಿಕಲಚೇತನರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.

‘‘ಇತ್ತೀಚಿನ ದಿನಗಳಲ್ಲಿ ನ್ಯಾಯಬೆಲೆ ಅಂಗಡಿಗಳ ಹಂಚಿಕೆಯ ಕುರಿತು ವ್ಯಾಜ್ಯಗಳ ಮಹಾಪೂರವೇ ನ್ಯಾಯಾಲಯಕ್ಕೆ ಹರಿದು ಬರುತ್ತಿದೆ. ಹೀಗಾಗಿ, ಇಂತಹ ವ್ಯಾಜ್ಯಗಳನ್ನು ಬಗೆಹರಿಸಲು ಮತ್ತು ಕರ್ನಾಟಕ ಅಗತ್ಯ ವಸ್ತುಗಳ ಸಾಮಾಜಿಕ ಪಡಿತರ ವಿತರಣಾ ವ್ಯವಸ್ಥೆ ನಿಯಮ-2006 ಪಾಲನೆಯನ್ನು ಕಡ್ಡಾಯವಾಗಿ ಮಾಡಲು ಕ್ರಮ ಕೈಗೊಳ್ಳಬೇಕು” ಎಂದು ಪೀಠವು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಆಯುಕ್ತರಿಗೆ ನಿರ್ದೇಶನ ನೀಡಿದೆ.

“ನ್ಯಾಯಬೆಲೆ ಅಂಗಡಿಗಳ ಹಂಚಿಕೆಯಲ್ಲಿ ಭಾರಿ ತಾರತಮ್ಯ ಮತ್ತು ಭಾರಿ ಪ್ರಮಾಣದಲ್ಲಿ ಪಡಿತರ ಚೀಟಿಗಳ ವಿತರಣೆಯಿಂದ ಸಮಸ್ಯೆಗಳಾಗುತ್ತಿವೆ. ಅಧಿಕಾರಿಗಳು ನಿಯಮ 11ರ ಪ್ರಕಾರ, ನ್ಯಾಯಬೆಲೆ ಅಂಗಡಿಗಳನ್ನು ಹಂಚಿಕೆ ಮಾಡುವಾಗ ನಗರ ಪ್ರದೇಶದಲ್ಲಾದರೆ 500 ಕಾರ್ಡ್‌ಗಳಿಗೆ ಒಂದರಂತೆ ಮತ್ತು ಗ್ರಾಮೀಣ ಪ್ರದೇಶದಲ್ಲಾದರೆ 800 ಕಾರ್ಡ್‌ಗಳಿಗೆ ಒಂದರಂತೆ ಅಂಗಡಿಗಳನ್ನು ಹಂಚಿಕೆ ಮಾಡಬೇಕು. ಅದನ್ನು ಪಾಲನೆ ಮಾಡದಿರುವುದೇ ವ್ಯಾಜ್ಯಗಳಿಗೆ ಕಾರಣವಾಗುತ್ತಿದೆ” ಎಂದು ಪೀಠ ಅಭಿಪ್ರಾಯಪಟ್ಟಿದೆ.

ಆಯುಕ್ತರು ಎಲ್ಲ ಉಪ ನಿರ್ದೇಶಕರಿಗೆ ಪತ್ರ ಬರೆದು ದಾಖಲೆಗಳ ದೃಢೀಕರಣದ ನಂತರವೇ ನ್ಯಾಯಬೆಲೆ ಅಂಗಡಿಗಳನ್ನು ಹಂಚಿಕೆ ಮಾಡುವಂತೆ ಸೂಚನೆ ನೀಡಿದ್ದಾರೆ. ಆದರೆ ಅದು ಕೇವಲ ಕಾಗದದಲ್ಲಿ ಉಳಿದಿದೆ. ಪ್ರತಿಯೊಂದು ಹಂಚಿಕೆಯ ಬಗ್ಗೆಯೂ ದೂರುಗಳು ಬರುತ್ತಿವೆ ಮತ್ತು ಆ ರೀತಿಯಲ್ಲಿ ಅನ್ಯಾಯಕ್ಕೆ ಒಳಗಾದವರು ನ್ಯಾಯಾಲಯಗಳ ಮೆಟ್ಟಿಲೇರುತ್ತಿರುವುದು ಸಾಮಾನ್ಯವಾಗಿದೆ. ಪಡಿತರ ಚೀಟಿ ವಿತರಣೆ ಉಸ್ತುವಾರಿ ನಿಭಾಯಿಸುವ ಅಧಿಕಾರಿಗಳು ಒಬ್ಬರ ಪಡಿತರ ಚೀಟಿ ತೆಗೆದು ಇನ್ನೊಬ್ಬರಿಗೆ ನೀಡುತ್ತಾರೆ. ಇದೂ ಕೂಡ ಅನಗತ್ಯ ವ್ಯಾಜ್ಯಗಳಿಗೆ ಕಾರಣವಾಗುತ್ತಿದೆ. ಇದನ್ನು ತಪ್ಪಿಸಬೇಕು” ಎಂದು ನ್ಯಾಯಾಲಯ ಹೇಳಿದೆ.

ಸರ್ಕಾರದ ಪರ ವಕೀಲ ಎಂ ವಿನೋದ್‌ ಕುಮಾರ್‌ ಅವರು “ದೇಶದೆಲ್ಲೆಡೆ ‘ಒಂದು ರಾಷ್ಟ್ರ- ಒಂದು ಪಡಿತರ ಚೀಟಿ’ ಯೋಜನೆ ಜಾರಿಯಲ್ಲಿದ್ದು, ಪಡಿತರ ಚೀಟಿ ಹೊಂದಿರುವವರು ಯಾರು ಎಲ್ಲಿ ಬೇಕಾದರೂ ಪಡಿತರವನ್ನು ಪಡೆಯಬಹುದಾಗಿದೆ. ಹೀಗಾಗಿ, ಪಡಿತರ ಚೀಟಿ ಹೊಂದಿರುವವರಿಗೆ ಏನೂ ಸಮಸ್ಯೆಯಾಗುತ್ತಿಲ್ಲ” ಎಂದರು.

ಅರ್ಜಿದಾರರಿಗೆ ನೀಡಿದ್ದ ನ್ಯಾಯಬೆಲೆ ಅಂಗಡಿಯನ್ನು ರದ್ದುಗೊಳಿಸುವಂತೆ ರಾಜಾಜಿನಗರ ಸ್ವಾಸ್ಥ್ಯ ಮಹಿಳಾ ಒಕ್ಕೂಟ ಮೇಲ್ಮನವಿ ಪ್ರಾಧಿಕಾರದ ಮುಂದೆ ಅರ್ಜಿ ಹೂಡಿತ್ತು. ಅದನ್ನು ಆಲಿಸಿದ ಪ್ರಾಧಿಕಾರವು ಅರ್ಜಿದಾರರಿಗೆ ಮಂಜೂರು ಮಾಡಿದ್ದ ನ್ಯಾಯಬೆಲೆ ಅಂಗಡಿಯ ಹಂಚಿಕೆಯನ್ನು ರದ್ದುಗೊಳಿಸಿತ್ತು. ಮೇಲ್ಮನವಿ ಪ್ರಾಧಿಕಾರದ ಆದೇಶದ ವಿರುದ್ಧ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.

Related Stories

No stories found.
Kannada Bar & Bench
kannada.barandbench.com