ಆದಿಪುರುಷ್ ಚಿತ್ರದಲ್ಲಿ ಕೆಲ ಪಾತ್ರಗಳನ್ನು ನಾಚಿಕೆಯಿಲ್ಲದೆ, ಅಸಭ್ಯವಾಗಿ ಚಿತ್ರಿಸಿರುವುದಕ್ಕೆ ಅಲಾಹಾಬಾದ್ ಹೈಕೋರ್ಟ್ ಶುಕ್ರವಾರ ಚಿತ್ರತಂಡವನ್ನು ತರಾಟೆಗೆ ತೆಗೆದುಕೊಂಡಿದೆ [ಕುಲದೀಪ್ ತಿವಾರಿ ಮತ್ತಿತರರು ಹಾಗೂ ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಚಿತ್ರದ ನಿರ್ದೇಶಕ ಓಂ ರಾವುತ್, ನಿರ್ಮಾಪಕ ಭೂಷಣ್ ಕುಮಾರ್ ಹಾಗೂ ಸಂಭಾಷಣೆಕಾರ ಮನೋಜ್ ಮುಂತಶಿರ್ ಜುಲೈ 27ರಂದು ನ್ಯಾಯಾಲಯದೆದುರು ವೈಯಕ್ತಿಕ ಅಫಿಡವಿಟ್‌ನೊಂದಿಗೆ ಹಾಜರಾಗುವಂತೆ ಆದೇಶಿಸಲಾಗಿದೆ.
ಆದಿಪುರುಷ್ ಚಿತ್ರದ ಮುಖ್ಯ ಸ್ಫೂರ್ತಿಯ ಮೂಲ ಎನ್ನಲಾದ ರಾಮಾಯಣಕ್ಕೆ ಹತ್ತಿರವಾದದ್ದೇ ಎಂಬುದನ್ನು ಮರು ಪರಿಶೀಲಿಸಲು ತಜ್ಞರ ಸಮಿತಿಯೊಂದನ್ನು ರಚಿಸುವಂತೆಯೂ ನ್ಯಾಯಾಲಯ ಸೂಚಿಸಿದೆ.
ಚಿತ್ರ ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್) ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ರಾಜೇಶ್ ಸಿಂಗ್ ಚೌಹಾಣ್ ಮತ್ತು ಶ್ರೀ ಪ್ರಕಾಶ್ ಸಿಂಗ್ ಅವರಿದ್ದ ಪೀಠ ಈ ಆದೇಶ ನೀಡಿದೆ.
ಪಾತ್ರಗಳ ಪಾವಿತ್ರ್ಯತೆ ಬಗ್ಗೆ ಚಿತ್ರ ತಯಾರಕರು ಸಂವೇದನಾಶೀಲರಾಗಿಲ್ಲ ಎಂದ ನ್ಯಾಯಾಲಯ ಅದರ ಗುಣಮಟ್ಟವಿಲ್ಲದ ಸಂಭಾಷಣೆ ಮತ್ತು ಅಗ್ಗದ ಭಾಷೆ ಬಳಕೆಗಾಗಿ ಚಿತ್ರ ನಿರ್ಮಾಪಕರನ್ನು ಕಟುವಾಗಿ ಟೀಕಿಸಿತು.
ಬಹುಸಂಖ್ಯಾತ ಜನರ ಭಾವನೆಗಳ ಬಗ್ಗೆ ಕಾಳಜಿ ವಹಿಸದೆ ಚಿತ್ರ ತಯಾರಕರು ಮತ್ತು ಸಂಭಾಷಣೆಕಾರರು ನಾಚಿಕೆರಹಿತವಾಗಿ, ಅಸಭ್ಯವಾಗಿ ಸಿನಿಮಾ ನಿರ್ಮಿಸಿರುವುದನ್ನು ಕಂಡಾಗ ನೋವಾಗುತ್ತದೆ ಎಂದು ನ್ಯಾಯಾಲಯ ನುಡಿಯಿತು.
ಚಿತ್ರ ಬಿಡುಗಡೆಗೆ ಪ್ರಮಾಣಪತ್ರ ನೀಡುವ ಸಂದರ್ಭದಲ್ಲಿ ಸೆನ್ಸಾರ್ ಮಂಡಳಿ ತನ್ನ ನ್ಯಾಯಸಮ್ಮತ ಕರ್ತವ್ಯ ನಿರ್ವಹಿಸಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.