ಸುಪ್ರೀಂ ಮೊರೆ ಹೋದ ʼಆದಿಪುರುಷ್ʼ ತಂಡ; ʼರಾಮ್ ಸಿಯಾ…ʼ ಧಾರಾವಾಹಿ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಪಂಜಾಬ್ ಹೈಕೋರ್ಟ್

ಗಂಭೀರ ತುರ್ತು ಇರುವ ಪ್ರಕರಣ ಇದು ಎಂದು ಆದಿಪುರುಷ್ ನಿರ್ಮಾಪಕರ ಪರ ವಕೀಲರು ಸಿಜೆಐ ನೇತೃತ್ವದ ಪೀಠದೆದುರು ಪ್ರಸ್ತಾಪಿಸಿದರು. ಆಗ ಪ್ರಕರಣವನ್ನು ನಾಳೆ ಪ್ರಸ್ತಾಪಿಸುವಂತೆ ಪೀಠ ಸೂಚಿಸಿತು.
ಸುಪ್ರೀಂ ಮೊರೆ ಹೋದ ʼಆದಿಪುರುಷ್ʼ ತಂಡ; ʼರಾಮ್ ಸಿಯಾ…ʼ ಧಾರಾವಾಹಿ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಪಂಜಾಬ್ ಹೈಕೋರ್ಟ್
A1
Published on

ನ್ಯಾಯಾಲಯಕ್ಕೆ ಖುದ್ದು ಹಾಜರಾಗಬೇಕು ಎಂದು ತಮಗೆ ಅಲಾಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ʼಆದಿಪುರುಷ್‌ʼ ಚಲನಚಿತ್ರ ನಿರ್ಮಾಪಕರು ಬುಧವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಗಂಭೀರ ತುರ್ತು ಇರುವ ಪ್ರಕರಣ ಇದು ಎಂದು ಆದಿಪುರುಷ್‌ ನಿರ್ಮಾಪಕರ ಪರ ವಕೀಲರು ಸಿಜೆಐ ನೇತೃತ್ವದ ಪೀಠದೆದುರು ಪ್ರಸ್ತಾಪಿಸಿದರು. ಆಗ ಪ್ರಕರಣವನ್ನು ನಾಳೆ ಪ್ರಸ್ತಾಪಿಸುವಂತೆ ಪೀಠ ಸೂಚಿಸಿತು.

ಅಲಾಹಾಬಾದ್ ಹೈಕೋರ್ಟ್‌ ಲಖನೌ ಪೀಠ ಜೂನ್ 30ರಂದು ನೀಡಿದ್ದ ಆದೇಶವನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ. ಚಿತ್ರ ನಿಷೇಧಿಸುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ (ಪಿಐಎಲ್) ಸಂಬಂಧಿಸಿದಂತೆ ಈ ಆದೇಶ ನೀಡಲಾಗಿತ್ತು. ಅಸಭ್ಯ ಮತ್ತು ನಾಚಿಕೆಗೇಡಿನ ಪಾತ್ರ ಚಿತ್ರಣಕ್ಕಾಗಿ ನ್ಯಾಯಾಲಯ ವಿಚಾರಣೆ ವೇಳೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.

ʼರಾಮ್‌ ಸಿಯಾ...ʼ ತಂಡ ನಿರಾಳ

ಕವಿ ವಾಲ್ಮೀಕಿಯನ್ನು ತಪ್ಪಾಗಿ ಚಿತ್ರಿಸಲಾಗಿದೆ, ಇದರಿಂದ ವಾಲ್ಮೀಕಿ ಸಮುದಾಯದ ಭಾವನೆಗಳಿಗೆ ಧಕ್ಕೆಯೊದಗಿದೆ ಎಂದು ʼರಾಮ್‌ ಸಿಯಾ ಕೆ ಲವ್‌ ಕುಶ್‌ʼ ಧಾರಾವಾಹಿ ನಿರ್ಮಾಣ ತಂಡ ಹಾಗೂ ಅದನ್ನು ಪ್ರದರ್ಶಿಸಿದ್ದ ಕಲರ್ಸ್‌ ವಾಹಿನಿ ವಿರುದ್ಧ ಹೂಡಲಾಗಿದ್ದ ಎಫ್ಐಆರ್‌ ಅನ್ನು ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ ರದ್ದುಗೊಳಿಸಿದೆ.

ಧಾರಾವಾಹಿ ನಿರ್ಮಾಣ ತಂಡ ಅಗತ್ಯ ಬದಲಾವಣೆಗಳನ್ನು ಮಾಡಿದ್ದರಿಂದ ಧಾರಾವಾಹಿ ವಿರುದ್ಧ ಪಂಜಾಬ್‌ನಲ್ಲಿದ್ದ ನಿಷೇಧವನ್ನು ಹೈಕೋರ್ಟ್‌ ಈಗಾಗಲೇ ರದ್ದುಗೊಳಿಸಿದೆ ಎಂಬುದನ್ನು ಗಮನಿಸಿದ ನ್ಯಾ. ದೀಪಕ್‌ ಗುಪ್ತಾ ಅವರಿದ್ದ ಪೀಠ ಈ ಆದೇಶ ನೀಡಿತು.  

ಧಾರಾವಾಹಿ ವಿರುದ್ಧ ಆಕ್ಷೇಪಣೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅದನ್ನು ನಿಷೇಧಿಸಿದ್ದ ಪಂಜಾಬ್‌ ಸರ್ಕಾರ ಧಾರಾವಾಹಿಯಲ್ಲಿನ ತಪ್ಪುಗಳನ್ನು ಸರಿಪಡಿಸಲು ಐವರು ಸದಸ್ಯರ ಸಮಿತಿಯೊಂದನ್ನು ರಚಿಸಿತ್ತು. ಸಮಿತಿಯು ಸರಿಪಡಿಸಲು ಸೂಚಿಸಿದ ಅಂಶಗಳನ್ನು ನಿರ್ಮಾಣ ತಂಡವು ಧಾರಾವಾಹಿಯಲ್ಲಿ ಅಳವಡಿಸಿ ಸೂಕ್ತ ಬದಲಾವಣೆಗಳನ್ನು ಮಾಡಿದ್ದ ಹಿನ್ನೆಲೆಯಲ್ಲಿ ಹೈಕೋರ್ಟ್‌ ನಿಷೇಧವನ್ನು ತೆರವುಗೊಳಿಸಿತ್ತು. ಇದೀಗ ಪ್ರಕರಣದ ಸಂಬಂಧ ದಾಖಲಾಗಿಸಿದ್ದ ಎಫ್‌ಐಆರ್‌ಅನ್ನು ಸಹ ರದ್ದುಗೊಳಿಸಲಾಗಿದೆ.

Kannada Bar & Bench
kannada.barandbench.com