ಸುಶಾಂತ್ ಸಿಂಗ್ ಸಾವಿನ ಪ್ರಕರಣ: ತನ್ನ ಬಂಧನ ಕೋರಿದ್ದ ಪಿಐಎಲ್ ದಾವೆಯಲ್ಲಿ ಮಧ್ಯಪ್ರವೇಶ ಬಯಸಿ ಆದಿತ್ಯ ಠಾಕ್ರೆ ಅರ್ಜಿ

ಯಾವುದೇ ಆದೇಶ ಜಾರಿಗೆ ಮೊದಲು ತಮ್ಮ ವಾದ ಆಲಿಸಲು ಸಾಧ್ಯವಾಗುವಂತೆ ತಮ್ಮನ್ನು ಪ್ರಕರಣದಲ್ಲಿ ಪಕ್ಷಕಾರನನ್ನಾಗಿ ಮಾಡಿಕೊಳ್ಳಬೇಕೆಂದು ಹಾಲಿ ಶಾಸಕರೂ ಆದ ಆದಿತ್ಯ ಮನವಿ ಮಾಡಿದ್ದಾರೆ.
Aditya Thackeray, Bombay High Court
Aditya Thackeray, Bombay High CourtFacebook

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ಮತ್ತವರ ಮಾಜಿ ಮ್ಯಾನೇಜರ್‌ ದಿಶಾ ಸಾಲಿಯಾನ್‌ ಅವರ ಸಾವಿಗೆ ಸಂಬಂಧಿಸಿದಂತೆ ತನ್ನನ್ನು ಬಂಧಿಸಬೇಕೆಂದು ಕೋರಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ (ಪಿಐಎಲ್) ತಮ್ಮ ಮಧ್ಯಪ್ರವೇಶಕ್ಕೆ ಅನುವು ಮಾಡಿಕೊಡಬೇಕೆಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ಪುತ್ರ ಹಾಗೂ ಶಿವಸೇನೆ ಉದ್ಧವ್‌ ಬಣದ ಮುಖಂಡ ಆದಿತ್ಯ ಠಾಕ್ರೆ ಬಾಂಬೆ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಯಾವುದೇ ಆದೇಶ ಜಾರಿಗೆ ಮೊದಲು ತಮ್ಮ ವಾದ ಆಲಿಸಲು ಸಾಧ್ಯವಾಗುವಂತೆ ತಮ್ಮನ್ನು ಪ್ರಕರಣದಲ್ಲಿ ಪಕ್ಷಕಾರನನ್ನಾಗಿ ಮಾಡಿಕೊಳ್ಳಬೇಕೆಂದು ಹಾಲಿ ಶಾಸಕರೂ ಆದ ಆದಿತ್ಯ ಮನವಿ ಮಾಡಿದ್ದಾರೆ.

ವಕೀಲ ರಾಹುಲ್ ಅರೋಟೆ ಅವರ ಮೂಲಕ ಸಲ್ಲಿಸಿದ ಮಧ್ಯಪ್ರವೇಶ ಕೋರಿಕೆ ಅರ್ಜಿಯಲ್ಲಿ, ರಜಪೂತ್ ಪ್ರಕರಣದ ತನಿಖೆಯನ್ನು ಈಗಾಗಲೇ ಸಿಬಿಐ ನಡೆಸುತ್ತಿರುವುದರಿಂದ ಪಿಐಎಲ್ ನಿರ್ವಹಣಾ ಯೋಗ್ಯವಲ್ಲ  ಎಂದು ಕೂಡ ಆದಿತ್ಯ ಪ್ರತಿಪಾದಿಸಿದ್ದಾರೆ. ಅಲ್ಲದೆ ಪ್ರಕರಣ ಈಗಾಗಲೇ ಸುಪ್ರೀಂ ಕೋರ್ಟ್‌ ಅಂಗಳದಲ್ಲಿರುವುದರಿಂದ ಹೈಕೋರ್ಟ್‌ ಯಾವುದೇ ಆದೇಶ ನೀಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಠಾಕ್ರೆ ಅವರು ಮಧ್ಯಪ್ರವೇಶಿಸಲು ಕೋರಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಈ ವರ್ಷದ ಜೂನ್‌ನಲ್ಲಿ ಸಲ್ಲಿಸಲಾಗಿದ್ದು ಇನ್ನಷ್ಟೇ ವಿಚಾರಣೆ ನಡೆಯಬೇಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಕ್ರೆ ಅವರನ್ನು ಪೊಲೀಸ್‌ ವಶಕ್ಕೆ ಪಡೆದು ವಿಚಾರಣೆ ನಡೆಸಬೇಕು ಮತ್ತು ತನಿಖೆಯ ಸಮಗ್ರ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಲು ಸಿಬಿಐಗೆ ನಿರ್ದೇಶಿಸಬೇಕು ಎಂದು ಪಿಐಎಲ್‌ನಲ್ಲಿ ಕೋರಲಾಗಿತ್ತು.

ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ನಿರ್ದಿಷ್ಟ ನಿರ್ದೇಶನಗಳನ್ನು ನಿರ್ಲಕ್ಷಿಸಿದ ಸಿಬಿಐ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಲು ರಾಜ್ಯದ ಕಾನೂನು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಕೂಡ  ಮನವಿಯಲ್ಲಿ ಒತ್ತಾಯಿಸಲಾಗಿತ್ತು.

Related Stories

No stories found.
Kannada Bar & Bench
kannada.barandbench.com