ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ ಕೆಂಚಪ್ಪ ಗೌಡರ ಅಧ್ಯಕ್ಷತೆಯಲ್ಲಿ ಇದೇ 5ರಂದು ನಡೆಯಬೇಕಿದ್ದ ಸಂಘದ ಕಾರ್ಯಕಾರಿ ಸಮಿತಿ ಸಭೆಯನ್ನು ಮುಂದೂಡಲು ಆದೇಶಿಸಿರುವ ಕರ್ನಾಟಕ ಹೈಕೋರ್ಟ್, ಕೆಂಚಪ್ಪ ಗೌಡರ ನೇತೃತ್ವದ ಕಾರ್ಯಕಾರಿ ಸಮಿತಿ ಆಯ್ಕೆ ಪ್ರಶ್ನಿಸಲಾದ ಮೇಲ್ಮನವಿಯ ಕುರಿತ ಆದೇಶವನ್ನು ಮಂಗಳವಾರ ಕಾಯ್ದಿರಿಸಿದೆ.
ಸಂಘದ ಸದಸ್ಯರಾದ ಹಾಸನ ಜಿಲ್ಲೆಯ ಸಂಕ್ಲಾಪುರದ ಎಸ್ ಎಸ್ ರಘುಗೌಡ, ಸೇರಿದಂತೆ ನಾಲ್ವರು ಸದಸ್ಯರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
ಮೇಲ್ಮನವಿದಾರರ ಪರ ಹಾಜರಾಗಿದ್ದ ಹಿರಿಯ ವಕೀಲ ರಾಜಗೋಪಾಲ, ಉದಯ ಹೊಳ್ಳ ಮತ್ತು ಅಶೋಕ ಹಾರನಹಳ್ಳಿ ಅವರು “ಕೆಂಚಪ್ಪಗೌಡ ನೇತೃತ್ವದ ಸಮಿತಿ ಕರೆದಿದೆ ಎನ್ನಲಾಗುವ 2023ರ ಜುಲೈ 5ರ ಕಾರ್ಯಕಾರಿ ಸಮಿತಿಯ ಸಭೆ ಬಗ್ಗೆ ಆಡಳಿತ ಮಂಡಳಿಯ ಇತರೆ ಸದಸ್ಯರಿಗೆ ಯಾವುದೇ ಪೂರ್ವ ನೋಟಿಸ್ ನೀಡಿಲ್ಲ. ಹೀಗಾಗಿ, ಈ ಸಭೆಯನ್ನು ಮುಂದೂಡಬೇಕು” ಎಂದು ವಾದಿಸಿದರು.
ಇದಕ್ಕೆ ಪ್ರತಿಯಾಗಿ ಪ್ರತಿವಾದಿಗಳನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ, ವಿವೇಕ್ ರೆಡ್ಡಿ, ಡಿ ಆರ್ ರವಿಶಂಕರ್ ಅವರು “ಸಭೆಯನ್ನು ಮುಂದೂಡುವಂತೆ ಹೈಕೋರ್ಟ್ ಮೆಟ್ಟಿಲೇರಿರುವ ಮೇಲ್ಮನವಿದಾರರ ಮೂಲ ಉದ್ದೇಶವೇ ಬೇರೆ ಇದೆ. ಸಂಘವು ನೂರು ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿದೆ. ಹಲವಾರು ಶೈಕ್ಷಣಿಕ ವಿದ್ಯಾಸಂಸ್ಥೆಗಳು, ಸಾವಿರಾರು ನೌಕರರು ಇದ್ದಾರೆ. ಕಳೆದ ಮೂರು ತಿಂಗಳಿಂದ ಸಭೆ ನಡೆದಿಲ್ಲ. ಹೀಗಾಗಿ, ಸಂಘದ ದೈನಂದಿನ ಚಟುವಟಿಕೆಗಳ ನಿರ್ವಹಣೆಗಾಗಿ ಸಭೆ ನಡೆಸುವ ಅಗತ್ಯವಿದೆ” ಎಂದು ಸಮರ್ಥಿಸಿದರು.
ಇದಕ್ಕೆ ಪೀಠವು “ರಾಜ್ಯದ ಅತ್ಯಂತ ಹಳೆಯದಾದ ಸಂಘ ಎನಿಸಿರುವ ಒಕ್ಕಲಿಗರ ಸಂಘವು ತನ್ನ ಧ್ಯೇಯೋದ್ದೇಶ ಮತ್ತು ಆಶಯಗಳ ಈಡೇರಿಕೆಗೆ ತಕ್ಕನಾಗಿ ನಡೆದುಕೊಳ್ಳುತ್ತಿದೆಯೇ ಎಂಬುದನ್ನು ಸಂಘದ ಎಲ್ಲ 35 ಸದಸ್ಯರೂ ಆತ್ಮಾವಲೋಕನ ಮಾಡಿಕೊಳ್ಳಬೇಕು” ಎಂದಿತು. ಅಲ್ಲದೇ ಇದೇ 5ರಂದು ಕರೆಯಲಾಗಿರುವ ಕಾರ್ಯಕಾರಿ ಸಮಿತಿಯ ಸಭೆಯನ್ನು ಮುಂದೂಡಿ ಅಂತಿಮ ಆದೇಶವನ್ನು ಕಾಯ್ದಿರಿಸಿತು.
ಮೇಲ್ಮನವಿದಾರರ ಪರ ವಕೀಲರಾದ ಮಧುಕರ ದೇಶಪಾಂಡೆ ಮತ್ತು ಬಸವರಾಜು ವಕಾಲತ್ತು ಹಾಕಿದ್ದಾರೆ.
ಪ್ರಕರಣದ ಹಿನ್ನೆಲೆ: ಸಂಘದ ಹಿಂದಿನ ಅಧ್ಯಕ್ಷರಾದ ಶಾಸಕ ಸಿ ಎನ್ ಬಾಲಕೃಷ್ಣ ಮತ್ತು ಕಾರ್ಯದರ್ಶಿ ಕೋನಪ್ಪ ರೆಡ್ಡಿ ನೇತೃತ್ವದ ಕಾರ್ಯಕಾರಿ ಸಮಿತಿಯ ವಿರುದ್ಧ ಬಿ ಕೆಂಚಪ್ಪಗೌಡರ ಗುಂಪು 2023ರ ಮೇ 29ರಂದು ಅವಿಶ್ವಾಸ ಗೊತ್ತುವಳಿ ಮಂಡಿಸಿತ್ತು. ಈ ಗೊತ್ತುವಳಿಯನ್ನು ಬಾಲಕೃಷ್ಣ ನೇತೃತ್ವದ ಸಮಿತಿ ಬಲವಾಗಿ ವಿರೋಧಿಸಿ, ‘ಮುಂಚಿತವಾಗಿ ನೋಟಿಸ್ ನೀಡದೇ ಕಾನೂನುಬಾಹಿರವಾಗಿ ಸಭೆ ಕರೆಯಲಾಗಿದೆ‘ ಎಂದು ಆಕ್ಷೇಪಿಸಿತ್ತು.
ಈ ವಿರೋಧದ ಮಧ್ಯದಲ್ಲೇ ಕೆಂಚಪ್ಪಗೌಡರ ಗುಂಪು ಸಭೆ ನಡೆಸಿ 2023ರ ಜೂನ್ 17ರಂದು ಚುನಾವಣೆ ನಡೆಸುವುದಾಗಿ ಘೋಷಿಸಿತು. ಆದರೆ, ಬಾಲಕೃಷ್ಣ ನೇತೃತ್ವದ ಸಮಿತಿಯು, ಚುನಾವಣೆ ನಿರ್ಧಾರವನ್ನು ಆಕ್ಷೇಪಿಸಿ 2023ರ ಜೂನ್ 12ರಂದು ಸಿವಿಲ್ ದಾವೆ ಹೂಡಿತು. ಸಿವಿಲ್ ನ್ಯಾಯಾಲಯವು ಚುನಾವಣೆಗೆ ತಡೆ ನೀಡಲಿಲ್ಲ. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಮಧ್ಯದಲ್ಲೇ 2023ರ ಜೂನ್ 17ರಂದು ಚುನಾವಣೆ ನಡೆಸಲಾಯಿತು. ಈ ಚುನಾವಣೆಯಲ್ಲಿ ಅಧ್ಯಕ್ಷರಾಗಿದ್ದ ಸಿ ಎನ್ ಬಾಲಕೃಷ್ಣ ಮತ್ತು ಅವರ ಬೆಂಬಲಿಗರ ತಂಡವನ್ನು ಕಾರ್ಯಕಾರಿ ಸಮಿತಿಯಿಂದ ಪದಚ್ಯುತಗೊಳಿಸಿ, ಬಿ ಕೆಂಚಪ್ಪಗೌಡ ಗುಂಪಿನ ಆರು ಮಂದಿ ಅವಿರೋಧ ಆಯ್ಕೆಯಾದರು.
ಈ ನೂತನ ಸಮಿತಿ 2023ರ ಜುಲೈ 5ರಂದು ಕಾರ್ಯಕಾರಿ ಸಮಿತಿಯ ಸಭೆ ಕರೆದಿತ್ತು. ಈ ಸಭೆ ನಡೆಸುವುದಕ್ಕೆ ಎಸ್ ಆರ್ ಕೃಷ್ಣಕುಮಾರ್ ಅವರ ನೇತೃತ್ವದ ಏಕಸದಸ್ಯ ಪೀಠ ಮಧ್ಯಂತರ ತಡೆ ನೀಡಿತ್ತು. ಮಂಗಳವಾರ (ಜು.4) ಈ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರ ನೇತೃತ್ವದ ಏಕಸದಸ್ಯ ಪೀಠ ಅಂತಿಮ ಆದೇಶ ಕಾಯ್ದಿರಿಸಿದೆ.