

ಪ್ರಕರಣ ಮುಂದೂಡಿಕೆ ಮತ್ತು ಪಾಸ್ ಓವರ್ (ನ್ಯಾಯಾಲಯ ಕಲಾಪದ ಬೇರೆ ಅವಧಿಯಲ್ಲಿ ವಿಚಾರಣೆಗೆ ಕೋರುವುದು) ಎಂಬುದು ವಕೀಲರನ್ನು ಸರಿಹೊಂದಿಸಲು ನ್ಯಾಯಾಲಯಗಳು ತೋರುವ ಸೌಜನ್ಯವಾಗಿದ್ದು ಅದನ್ನು ಪ್ರತಿವಾದಿಗಳನ್ನು ನೋಯಿಸಲು ಬಳಸಬಾರದು ಎಂದು ದೆಹಲಿ ಹೈಕೋರ್ಟ್ ಈಚೆಗೆ ಬುದ್ಧಿವಾದ ಹೇಳಿದೆ [ಇ ಸಿ ಕನ್‌ಸ್ಟ್ರಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ನೀರಜ್ ಜುಟ್ಶಿ ಇನ್ನಿತರರ ನಡುವಣ ಪ್ರಕರಣ].
2006ರ ಮೊಕದ್ದಮೆಗೆ ಸಂಬಂಧಿಸಿದಂತೆ ಹಿಂದಿನ ಮುಂದೂಡಿಕೆಗೆ ವಿಧಿಸಿದ್ದ ದಂಡ ಪಾವತಿಸದ ಹಿನ್ನೆಲೆಯಲ್ಲಿ ಪ್ರತಿವಾದಿ ಸಾಕ್ಷಿಯನ್ನು ಪಾಟಿ ಸವಾಲಿಗೆ ಒಳಪಡಿಸಲು ಅರ್ಜಿದಾರ ಮಾಡಿದ್ದ ಮನವಿಯನ್ನು ವಿಚಾರಣಾ ನ್ಯಾಯಾಲಯ ಪುರಸ್ಕರಿಸಿರಲಿಲ್ಲ. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.
ಅರ್ಜಿದಾರರ ಪರ ವಕೀಲರು ಬೆಳಿಗ್ಗೆ ಬದಲು ಮಧ್ಯಾಹ್ನ ವಿಚಾರಣೆ ನಡೆಸುವಂತೆ ಕೋರಿದ್ದಾರೆಯೇ ವಿನಾ ವಿಚಾರಣೆ ಮುಂದೂಡಲು ಅಲ್ಲ ಎಂಬ ವಾದವನ್ನು ನ್ಯಾಯಮೂರ್ತಿ ಗಿರೀಶ್ ಕಠ್ಪಾಲಿಯಾ ತಿರಸ್ಕರಿಸಿದರು.
ಮುಖ್ಯ ವಕೀಲರು ಅನಾರೋಗ್ಯದ ಕಾರಣಕ್ಕೆ ಪ್ರಕರಣ ಮುಂದೂಡುವಂತೆ ಕೋರಿದ್ದರು. ಆದರೆ ಅವರ ತಂಡ ಕೌಟುಂಬಿಕ ಅಗತ್ಯದಿಂದಾಗಿ ಅವರು ಲಭ್ಯವಿಲ್ಲ ಎಂದು ಹೇಳಿತು. ಇದನ್ನು ಗಮನಿಸಿದ ನ್ಯಾಯಾಲಯ ಸುಳ್ಳಾಡುವುದಕ್ಕೆ ಸಮ್ಮತಿ ಇಲ್ಲ ಎಂದಿತು.
ಬಹುತೇಕ ಎಲ್ಲಾ ದಿನ ಮುಂದೂಡಿಕೆ ಅಥವಾ ಬೇರೆ ಅವಧಿಯಲ್ಲಿ ವಿಚಾರಣೆಗೆ ಕೋರಲಾಗಿದೆ. ಅರ್ಜಿದಾರರ ಪರ ವಕೀಲರು ಇಂತಹ ಕೋರಿಕೆಯನ್ನು ತಮ್ಮ ಹಕ್ಕು ಎಂಬ ತಪ್ಪು ಕಲ್ಪನೆಯಲ್ಲಿದ್ದಾರೆ ಎಂದು ತೋರುತ್ತದೆ ಎಂಬುದಾಗಿ ಪೀಠ ಅಸಮಾಧಾನ ವ್ಯಕ್ತಪಡಿಸಿತು.
ಮುಂದೂಡಿಕೆ ಅಥವಾ ಬೇರೆ ಅವಧಿಯಲ್ಲಿ ವಿಚಾರಣೆಗೆ ಕೋರಲು ಅನುವು ಮಾಡಿಕೊಡುವುದು ನ್ಯಾಯಾಲಯ ತೋರುವ ಸೌಜನ್ಯ. ಅದನ್ನು ಪ್ರತಿವಾದಿಗಳಿಗೆ ತೊಂದರೆಯಾಗಲು ಅವಕಾಶ ನೀಡಬಾರದು. ಪ್ರತಿವಾದಿಗಳಿಗೆ ತೊಂದರೆಯಾಗದಂತೆ ವಕೀಲರು ದಿನಚರಿ ರೂಢಿಸಿಕೊಳ್ಳುವುದು ಅವರ ಕರ್ತವ್ಯ ಎಂದು ಅದು ಹೇಳಿತು.
ಅನಗತ್ಯವಾಗಿ ವಿಚಾರಣೆ ಮುಂದೂಡಿದ್ದಕ್ಕಾಗಿ ವಿಚಾರಣಾ ನ್ಯಾಯಾಲಯ ಈಗಾಗಲೇ ವಿಧಿಸಿದ್ದ ₹5,000 ದಂಡವನ್ನು ಇನ್ನೂ ಪಾವತಿಸಿಲ್ಲ. ಅದನ್ನು ಮನ್ನಾ ಮಾಡುವಂತೆಯೂ ಅರ್ಜಿ ಸಲ್ಲಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿವಾದಿ ಸಾಕ್ಷಿಯ ಮುಂದಿನ ಪಾಟಿ ಸವಾಲಿಗೆ ಅವಕಾಶ ನೀಡದ ವಿಚಾರಣಾ ನ್ಯಾಯಾಲಯದ ಕ್ರಮ ಸೂಕ್ತವಾಗಿದೆ ಎಂದು ನ್ಯಾಯಾಲಯ ತಿಳಿಸಿತು.
ಅಲ್ಲದೆ 2006ರಿಂದ ಬಾಕಿ ಉಳಿದಿರುವ ಈ ಮನವಿಯನ್ನು ಅರ್ಜಿದಾರರು ಉದ್ದೇಶಪೂರ್ವಕವಾಗಿ ವಿಳಂಬಗೊಳಿಸುತ್ತಿದ್ದಾರೆ ಎಂಬ ಪ್ರತಿವಾದಿಗಳ ವಾದ ಸರಿಯಾಗಿದೆ ಎಂದ ಅದು ಅರ್ಜಿದಾರರಿಗೆ ₹10,000 ದಂಡ ವಿಧಿಸಿ ಅವರು ಸಲ್ಲಿಸಿದ್ದ ಮನವಿ ಬದಿಗೆ ಸರಿಸಿತು.
ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶದಲ್ಲಿ ಯಾವುದೇ ತಪ್ಪು ಕಾಣುತ್ತಿಲ್ಲ. ಹಾಗಾಗಿಯೇ ಈ ಎರಡೂ ಆದೇಶಗಳನ್ನು ಎತ್ತಿಹಿಡಿಯಲಾಗಿದೆ. ಪ್ರಸ್ತುತ ಅರ್ಜಿಗೆ ಸಂಬಂಧಿಸಿದಂತೆ ₹10,000 ದಂಡ ವಿಧಿಸಿ ಅದನ್ನು ತಿರಸ್ಕರಿಸಲಾಗುತ್ತಿದೆ. ದಂಡದ ಮೊತ್ತವನ್ನು ಅರ್ಜಿದಾರರು ಎರಡು ವಾರಗಳ ಒಳಗೆ ಪ್ರತಿವಾದಿಗೆ ಪಾವತಿಸಬೇಕು ಎಂದು ಆದೇಶಿಸಿತು.
[ತೀರ್ಪಿನ ಪ್ರತಿ]