ಪ್ರವೇಶ ನೋಂದಣಿ ತಿರುಚಿದ ಪ್ರಕರಣ: 10 ವಿದ್ಯಾರ್ಥಿಗಳಿಗೆ ತಲಾ ₹10 ಲಕ್ಷ ಪರಿಹಾರ ನೀಡಲು ಕಾಲೇಜಿಗೆ ಹೈಕೋರ್ಟ್‌ ಆದೇಶ

ಕಾಲೇಜಿನ ನಡೆಯ ಕುರಿತು ಸಕ್ಷಮ ಪ್ರಾಧಿಕಾರವು ತನಿಖೆ ನಡೆಸಬೇಕು. ಇದರ ಜೊತೆಗೆ ಪೊಲೀಸರು ಕಾಲೇಜಿನ ವಂಚನೆಗೆ ಸಂಬಂಧಿಸಿದಂತೆ ಕ್ರಿಮಿನಲ್‌ ಪ್ರಕರಣ ದಾಖಲು ಸೇರಿದಂತೆ ಅಗತ್ಯವಾದ ಎಲ್ಲಾ ಕ್ರಮಕೈಗೊಳ್ಳಬೇಕು ಎಂದ ನ್ಯಾಯಾಲಯ.
Justice Suraj Govindaraj and Karnataka HC, Kalburgi bench
Justice Suraj Govindaraj and Karnataka HC, Kalburgi bench
Published on

ಪ್ರವೇಶ ನೋಂದಣಿ (ರಿಜಿಸ್ಟರ್‌) ತಿರುಚಿದ ಆರೋಪದ ಹಿನ್ನೆಲೆಯಲ್ಲಿ 10 ವಿದ್ಯಾರ್ಥಿಗಳಿಗೆ ತಲಾ ₹10 ಲಕ್ಷ ರೂಪಾಯಿ ಪರಿಹಾರ ಪಾವತಿಸಲು ಕಲಬುರ್ಗಿಯ ಮದರ್‌ ಮೇರಿ ಕಾಲೇಜ್‌ ಆಫ್‌ ನರ್ಸಿಂಗ್‌ಗೆ ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಈಚೆಗೆ ಆದೇಶಿಸಿದೆ.

ವಿದ್ಯಾರ್ಥಿಗಳ ಮಾಹಿತಿ ಅಪ್‌ಲೋಡ್‌ ಮಾಡಲು ಮತ್ತು ಅವರಿಗೆ ಪ್ರವೇಶ ನೋಂದಣಿ ಸಂಖ್ಯೆ ನೀಡಲು ವೆಬ್‌ ಪೋರ್ಟಲ್‌ನಲ್ಲಿ ಅನುವು ಮಾಡಲು ವೈದ್ಯಕೀಯ ಶಿಕ್ಷಣ ಇಲಾಖೆಗೆ ನಿರ್ದೇಶಿಸುವಂತೆ ಕೋರಿ ಮದರ್‌ ಮೇರಿ ಕಾಲೇಜ್‌ ಆಫ್‌ ನರ್ಸಿಂಗ್‌ ಮತ್ತು 10 ಬಿಎಸ್‌ಸಿ ನರ್ಸಿಂಗ್‌ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋಂವಿದರಾಜ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ. 2021-22ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತವು ಪ್ರಥಮ ವರ್ಷದ ಬಿಎಸ್‌ಸಿ (ನರ್ಸಿಂಗ್‌)ಗೆ ಪ್ರವೇಶ ನೀಡಿದ್ದು, ಬಿಎಸ್‌ಸಿ ಮೊದಲನೇ ವರ್ಷದ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಅನುಮತಿಸಬೇಕು ಎಂದೂ ಕೋರಲಾಗಿತ್ತು. ಇದನ್ನೂ ನ್ಯಾಯಾಲಯ ಪುರಸ್ಕರಿಸಿಲ್ಲ.

“ನೋಂದಣಿಯನ್ನು ಸುಮ್ಮನೆ ಪರಿಶೀಲಿಸಿದರೆ ಕಾಲೇಜಿನ ಆಘಾತಕಾರಿ ಮತ್ತು ದಯನೀಯ ಸ್ಥಿತಿಯ ಬಗ್ಗೆ ಅನುಮಾನಗಳು ಉದ್ಭವಿಸುತ್ತವೆ. ಪ್ರವೇಶ ನೋಂದಣಿಯನ್ನು ಕಾಲೇಜು ತಿರುಚಿದೆ ಎಂಬುದು ಲಭ್ಯವಿರುವ ದಾಖಲೆಗಳನ್ನು ನೋಡಿದರೆ ಖಾತರಿಯಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.

“ವೆಬ್‌ಪೋರ್ಟಲ್‌ನಲ್ಲಿ ಮಾಹಿತಿ ಅಪ್‌ಲೋಡ್‌ ಮಾಡಲು ಕೊನೆಯ ದಿನಾಂಕ 2022ರ ಏಪ್ರಿಲ್‌ 7 ಆಗಿತ್ತು. ಮೊದಲನೇ ಅರ್ಜಿದಾರರಾಗಿರುವ ಕಾಲೇಜು ಆಡಳಿತವು 2023ರ ಜನವರಿ 10ರಂದು 8 ತಿಂಗಳು ಕಳೆದ ಬಳಿಕ ಮೊದಲ ಬಾರಿಗೆ ಮನವಿ ಮಾಡಿದೆ. ಅಂದರೆ 2022ರ ಏಪ್ರಿಲ್‌ 7ರವರೆಗೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಿರಲಿಲ್ಲ ಎಂದರ್ಥ. ಕಾಲೇಜು ಈ ರೀತಿ ನಡೆದುಕೊಂಡಿರುವುದನ್ನು ನೋಡಿದರೆ ಆಘಾತವಾಗುತ್ತದೆ ಎಂದು ಹೇಳುವುದೂ ಕಡಿಮೆಯೇ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

“ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ಬದುಕಿನ ಜೊತೆ ಕಾಲೇಜು ಆಟವಾಡಿದ್ದು, ಕಾಲೇಜಿನ ಕೆಟ್ಟ ನಡೆಯಿಂದ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ಸಂಸ್ಥೆಯು (ಆರ್‌ಜಿಯುಎಚ್‌ಎಸ್‌) ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ನಿರಾಕರಿಸಿರುವುದರಿಂದ ಅವರು ಈ ವರ್ಷ ಪರೀಕ್ಷೆ ಬರೆಯಲಾಗದ ಸ್ಥಿತಿ ನಿರ್ಮಾಣವಾಗಿದೆ” ಎಂದು ನ್ಯಾಯಾಲಯ ಹೇಳಿದೆ.

“ಮದರ್‌ ಮೇರಿ ನರ್ಸಿಂಗ್‌ ಕಾಲೇಜು ಮಾಡಿರುವ ಮೋಸವನ್ನು ಒಪ್ಪಿಕೊಳ್ಳುವಂತೆ ಪ್ರತಿವಾದಿ ಆರ್‌ಜಿಯುಎಚ್‌ಎಸ್‌ಗೆ ನಿರ್ದೇಶಿಸಲಾಗದು. ವಿದ್ಯಾರ್ಥಿಗಳಿಗೆ ಆಗಿರುವ ನಷ್ಟಕ್ಕಾಗಿ ಕಾಲೇಜು ಹಣಕಾಸಿನ ರೂಪದಲ್ಲಿ ಪರಿಹಾರ ಕಲ್ಪಿಸಬೇಕು. ಕಾಲೇಜಿನ ನಡೆಯ ಕುರಿತು ಸಕ್ಷಮ ಪ್ರಾಧಿಕಾರವು ತನಿಖೆ ನಡೆಸಬೇಕು. ಇದರ ಜೊತೆಗೆ ಪೊಲೀಸರು ಕಾಲೇಜಿನ ವಂಚನೆಗೆ ಸಂಬಂಧಿಸಿದಂತೆ ಕ್ರಿಮಿನಲ್‌ ಪ್ರಕರಣ ದಾಖಲು ಸೇರಿದಂತೆ ಅಗತ್ಯವಾದ ಎಲ್ಲಾ ಕ್ರಮಕೈಗೊಳ್ಳಬೇಕು. ಆಡಳಿತಾತ್ಮಕ ಕ್ರಮದ ಆಚೆಗೆ ಮದರ್‌ ಮೇರಿ ನರ್ಸಿಂಗ್‌ ಕಾಲೇಜಿನ ವಿರುದ್ಧ ಆರ್‌ಜಿಯುಎಚ್‌ಎಸ್‌ ಕ್ರಮಕೈಗೊಳ್ಳಲು ಅನುಮತಿಸಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ಮದರ್‌ ಮೇರಿ ನರ್ಸಿಂಗ್‌ ಕಾಲೇಜಿನ ಪರ ವಕೀಲರು “ತಾಂತ್ರಿಕ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳ ಅರ್ಜಿ ಮತ್ತು ಮಾಹಿತಿಯನ್ನು ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಲಾಗಿಲ್ಲ” ಎಂದು ವಾದಿಸಿದ್ದರು.

ಆರ್‌ಜಿಯುಎಚ್‌ಎಸ್‌ ಪರ ವಕೀಲರು “ಪ್ರವೇಶ ನೋಂದಣಿಯಲ್ಲಿ ಹಲವು ರೀತಿಯ ಕೈಚಳಕ ನಡೆದಿದ್ದು, ನೋಂದಣಿಯಲ್ಲಿ ಹಾಲಿ ಇರುವ ವಿದ್ಯಾರ್ಥಿಗಳ ಹೆಸರಿನ ಮೇಲೆ ಹೊಸ ವಿದ್ಯಾರ್ಥಿಗಳ ಹೆಸರನ್ನು ಅಂಟಿಸಲಾಗಿದೆ. ಪ್ರವೇಶ ಮುಕ್ತಾಯವಾದ ಮೇಲೂ ಕೆಲವು ವಿದ್ಯಾರ್ಥಿಗಳ ಹೆಸರು ಸೇರ್ಪಡೆ ಮಾಡಲಾಗಿದೆ” ಎಂದು ವಾದಿಸಿದ್ದರು.

Attachment
PDF
Mother Marry College of Nurshing Vs RGUHS.pdf
Preview
Kannada Bar & Bench
kannada.barandbench.com