ಮಕ್ಕಳ ದತ್ತು: ಮಕ್ಕಳ ಕಲ್ಯಾಣ ಸಮಿತಿ ಅನುಸರಿಸಬೇಕಾದ ನಿಯಮ ರೂಪಿಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಲಿವ್‌-ಇನ್‌ ಸಂಬಂಧ ಹೊಂದಿದ್ದ ಜೋಡಿ ತಮ್ಮ 12 ದಿನಗಳ ಹಸುಗೂಸನ್ನು ಸಿಡಬ್ಲುಸಿಗೆ ಒಪ್ಪಿಸಿದ್ದರ ಕುರಿತಾದ ಮಾಧ್ಯಮ ವರದಿ ಆಧರಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ವಿಭಾಗೀಯ ಪೀಠ ನಡೆಸಿತು.
Karnataka High Court
Karnataka High Court

ಮಕ್ಕಳನ್ನು ಒಪ್ಪಿಸುವುದು ಮತ್ತು ಬಳಿಕ ಅವುಗಳನ್ನು ದತ್ತು ಪಡೆಯುವ ಸಂಬಂಧ ವಿಚಾರಣೆ ವಿಧಾನ ಮತ್ತು ಆಪ್ತಸಲಹೆ ನೀಡುವಾಗ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲುಸಿ) ಅನುಸರಿಸಬೇಕಾದ ನಿಯಮಗಳನ್ನು ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಗುರುವಾರ ನಿರ್ದೇಶಿಸಿದೆ.

ಲಿವ್‌-ಇನ್‌ ಸಂಬಂಧ ಹೊಂದಿದ್ದ ಜೋಡಿ ತಮ್ಮ 12 ದಿನಗಳ ಹಸುಗೂಸನ್ನು ಸಿಡಬ್ಲುಸಿಗೆ ಒಪ್ಪಿಸಿದ್ದರ ಕುರಿತಾದ ಮಾಧ್ಯಮ ವರದಿ ಆಧರಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಎನ್‌ ಎಸ್‌ ಸಂಜಯ್‌ ಗೌಡ ಅವರಿದ್ದ ವಿಭಾಗೀಯ ಪೀಠವು ಆದೇಶ ಹೊರಡಿಸಿದೆ.

ಲೆಟ್ಜ್‌ಕಿಟ್‌ ಪ್ರತಿಷ್ಠಾನವು ಪ್ರಕರಣದ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ. ಬಾಲಾಪರಾಧಿ ಕಾಯಿದೆಯ ಸೆಕ್ಷನ್‌ 35 (1)ರ ಅಡಿ ಪೋಷಕರು ಸಲ್ಲಿಸಿದ ಮನವಿಗೆ ಸಂಬಂಧಿಸಿದಂತೆ ಪರಿಹಾರಕ್ಕಾಗಿ ಮಾರ್ಗಸೂಚಿ ರೂಪಿಸುವುದು ಅಗತ್ಯ ಎಂದು ನ್ಯಾಯಾಲಯವು ಮನವಿಯಲ್ಲಿ ಕೋರದಿದ್ದರೂ ಹೇಳಿದೆ.

ಬಾಲಾಪರಾಧ ನ್ಯಾಯ ಕಾಯಿದೆಯ ಸೆಕ್ಷನ್‌ 110ರಲ್ಲಿ ಉಲ್ಲೇಖಿಸಲಾಗಿರುವಂತೆ ರಾಜ್ಯ ಸರ್ಕಾರವು ನಿಯಮಗಳನ್ನು ರೂಪಿಸಿಲ್ಲ. ರಾಜ್ಯ ಸರ್ಕಾರ ನಿಯಮ ರೂಪಿಸದಿರುವುದರಿಂದ ಕೇಂದ್ರ ಸರ್ಕಾರ ರೂಪಿಸಿರುವ ಮಾದರಿ ನಿಯಮಗಳನ್ನು ಸಿಡಬ್ಲುಸಿಗಳು ಅನುಸರಿಸುವ ಕಟ್ಟುಪಾಡಿಗೆ ಒಳಪಟ್ಟಿವೆ ಎಂದು ಪೀಠ ಹೇಳಿದೆ.

ಪೋಷಕರ ಗುರುತು ಮತ್ತು ಪೋಷಕರು ಮಗುವಿನ ಜೈವಿಕ ಪೋಷಕರಾಗಿದ್ದಾರೆಯೇ ಎಂದು ಕಂಡುಹಿಡಿಯಲು ಸಿಡಬ್ಲುಸಿ ವಿಚಾರಣೆ ನಡೆಸಬೇಕು. ಪೋಷಕರು ಮಕ್ಕಳನ್ನು ಒಪ್ಪಿಸಲು ದೈಹಿಕ, ಭಾವನಾತ್ಮಕ ಅಥವಾ ಸಾಮಾಜಿಕ ಅಂಶ ಕಾರಣವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಿಡಬ್ಲುಸಿ ಎರಡನೇ ವಿಚಾರಣೆ ನಡೆಸಬೇಕು ಎಂದು ನ್ಯಾಯಾಲಯ ಹೇಳಿದೆ.

Also Read
ವಿದ್ಯುತ್‌ ಸ್ಪರ್ಶಿಸಿ ವಿದ್ಯಾರ್ಥಿ ಸಾವು ಪ್ರಕರಣ: ಪರಿಹಾರ ವಿತರಿಸಲು ಸರ್ಕಾರಕ್ಕೆ ನಿರ್ದೇಶಿಸಿದ ಕರ್ನಾಟಕ ಹೈಕೋರ್ಟ್‌

“ದೈಹಿಕ, ಭಾವನಾತ್ಮಕ ಮತ್ತು ಸಾಮಾಜಿಕ ಅಂಶಗಳನ್ನು ನೇರವಾದ ರೀತಿಯಲ್ಲಿ ಕಾಣಲಾಗದು. ಈ ಅಂಶಗಳು ಒಂದು ಪ್ರಕರಣದಿಂದ ಮತ್ತೊಂದು ಪ್ರಕರಣಕ್ಕೆ ಭಿನ್ನವಾಗಿರುತ್ತವೆ. ಪೋಷಕರು ಮಕ್ಕಳನ್ನು ಒಪ್ಪಿಸುವ ಕ್ರಮವು ಗಂಭೀರವಾಗಿದ್ದು, ಇದು ಮಗುವಿನ ಹಕ್ಕಿನ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಅತ್ಯಂತ ಸೂಕ್ಷ್ಮವಾಗಿ ಸಿಡಬ್ಲುಸಿ ವಿಚಾರಣೆ ನಡೆಸಬೇಕಿದೆ” ಎಂದು ನ್ಯಾಯಾಲಯ ಹೇಳಿದೆ.

ಮಕ್ಕಳ ಮನೋರೋಗ ತಜ್ಞರು ಅಥವಾ ರಾಜ್ಯದ ಆರೋಗ್ಯ ಸಂಸ್ಥೆಗಳು ಅಥವಾ ವೈದ್ಯಕೀಯ ಕಾಲೇಜುಗಳಲ್ಲಿ ಮಕ್ಕಳು ಮತ್ತು ಪೋಷಕರ ಆಪ್ತ ಸಲಹಾಕಾರರಾಗಿ ಕೆಲಸ ಮಾಡುತ್ತಿರುವ ತಜ್ಞರ ಸಹಾಯವನ್ನು ಸಿಡಬ್ಲುಸಿ ಪಡೆಯಬಹುದಾಗಿದೆ. ಸಿಡಬ್ಲುಸಿಗಳಿಗೆ ಮಗುವನ್ನು ಹಸ್ತಾಂತರಿಸಿದ ಏಜೆನ್ಸಿಗಳ ಪ್ರಮಾಣಪತ್ರಗಳು ಮತ್ತು ರುಜುವಾತುಗಳನ್ನು ಪರಿಶೀಲಿಸಲು ನ್ಯಾಯಾಲಯವು ನಿರ್ದೇಶಿಸಿದೆ.

Related Stories

No stories found.
Kannada Bar & Bench
kannada.barandbench.com