ಪೋಷಕರಿಂದ ನೇರವಾಗಿ ಮಗು ದತ್ತು ಪಡೆಯುವುದು ಬಾಲ ನ್ಯಾಯ ಕಾಯಿದೆ ಸೆಕ್ಷನ್‌ 80ರ ಅಡಿ ಅಪರಾಧವಲ್ಲ: ಕರ್ನಾಟಕ ಹೈಕೋರ್ಟ್‌

ಸ್ವಾಭಾವಿಕವಾಗಿ ದಂಪತಿಗೆ ಜನಿಸಿರುವ ಮಗುವನ್ನು ಅವರಿಂದಲೇ ನೇರವಾಗಿ ದತ್ತು ಪಡೆದು ಸಾಕಲಾಗುತ್ತಿದೆ. ಆದ್ದರಿಂದ, ಅರ್ಜಿದಾರರ ವಿರುದ್ಧ ಸಲ್ಲಿಸಿರುವ ಆರೋಪಪಟ್ಟಿ ಊರ್ಜಿತವಾಗುವುದಿಲ್ಲ ಎಂದಿರುವ ನ್ಯಾಯಾಲಯ.
High Court of Karnataka, Dharwad Bench
High Court of Karnataka, Dharwad Bench

ಪೋಷಕರಿಂದ ಮಗುವನ್ನು ನೇರವಾಗಿ ದತ್ತು ಪಡೆದುಕೊಳ್ಳುವುದು ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆಯ ಸೆಕ್ಷನ್ 80ರ ಅಡಿಯಲ್ಲಿ ಅಪರಾಧವಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಈಚೆಗೆ ಮಹತ್ವದ ತೀರ್ಪು ನೀಡಿದ್ದು, ಪ್ರಕರಣವೊಂದರಲ್ಲಿ ಮಗುವನ್ನು ದತ್ತು ನೀಡಿದ್ದ ಹಾಗೂ ದತ್ತು ಪಡೆದಿದ್ದವರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣವನ್ನು ರದ್ದುಪಡಿಸಿದೆ (ಬಾನು ಬೇಗಂ ಮತ್ತು ಇತರರು ವರ್ಸಸ್‌ ಕರ್ನಾಟಕ ರಾಜ್ಯ ಮತ್ತು ಇತರರು).

ಮಗುವಿನ ದತ್ತು ಪ್ರಕ್ರಿಯೆಯಲ್ಲಿ ಬಾಲ ನ್ಯಾಯ ಕಾಯಿದೆಯ ನಿಯಮಗಳನ್ನು ಪಾಲನೆ ಮಾಡಿಲ್ಲ ಎಂದು ಆರೋಪಿಸಿ ದಾಖಲಾಗಿದ್ದ ಪ್ರಕರಣ ರದ್ದು ಮಾಡುವಂತೆ ಕೊಪ್ಪಳದ ಗಂಗಾವತಿಯ ಬಾನು ಬೇಗಂ, ಮೆಹಬೂಬ್ ಸಾಬ್ ನಬಿಸಾಬ್ ಮತ್ತಿತರರು ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಏಕಸದಸ್ಯ ಪೀಠ ಮಾನ್ಯ ಮಾಡಿದೆ.

ಬಾಲ ನ್ಯಾಯ ಕಾಯಿದೆ-2015ರ ಸೆಕ್ಷನ್ 80ರ ಪ್ರಕಾರ ಅನಾಥ, ಪರಿತ್ಯಕ್ತ ಅಥವಾ ಬಾಲಮಂದಿರಗಳಿಗೆ ಒಪ್ಪಿಸಿರುವ ಮಗುವನ್ನು ದತ್ತು ಪಡೆಯುವಂತಹ ಸಂದರ್ಭಗಳಲ್ಲಿ ನಿಯಮಗಳು ಅನ್ವಯವಾಗಲಿದ್ದು, ಒಂದೊಮ್ಮೆ ಆ ನಿಯಮಗಳನ್ನು ಉಲ್ಲಂಸಿದರೆ ಅಂಥವರಿಗೆ ಶಿಕ್ಷೆ ವಿಧಿಸಬಹುದಾಗಿದೆ. ಆದರೆ, ಈ ಪ್ರಕರಣದಲ್ಲಿ ಅನಾಥ ಅಥವಾ ಪರಿತ್ಯಕ್ತ ಅಥವಾ ಬಾಲ ನ್ಯಾಯ ಕಾಯಿದೆಯ ಸೆಕ್ಷನ್ 2(1), 2(42) ಮತ್ತು 2(60)ರಡಿ ವಶಕ್ಕೆ ಒಪ್ಪಿಸಿರುವ ಮಗುವನ್ನು ದತ್ತುಪಡೆದಿಲ್ಲ. ಮಗುವಿನ ಪಾಲಕರು ಅಥವಾ ದತ್ತು ಪಡೆದಿರುವವರು ಅದನ್ನು ಅನಾಥ ಅಥವಾ ನಿರಾಶ್ರಿತ ಎಂದು ಘೋಷಿಸಿಲ್ಲ. ಹೀಗಿರುವಾಗ ಬಾಲ ನ್ಯಾಯ ಕಾಯಿದೆ ಅನ್ವಯವಾಗುವುದಿಲ್ಲ ಎಂದು ಪೀಠ ಹೇಳಿದೆ.

ಸ್ವಾಭಾವಿಕವಾಗಿ ದಂಪತಿಗೆ ಜನಿಸಿರುವ ಮಗುವನ್ನು ಅವರಿಂದಲೇ ನೇರವಾಗಿ ದತ್ತು ಪಡೆದು ಸಾಕಲಾಗುತ್ತಿದೆ. ಆದ್ದರಿಂದ, ಅರ್ಜಿದಾರರ ವಿರುದ್ಧ ಸಲ್ಲಿಸಿರುವ ಆರೋಪಪಟ್ಟಿ ಊರ್ಜಿತವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯವು ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಿದೆ.

ಅರ್ಜಿದಾರರ ಪರ ವಕೀಲ ಎಂ ಬಿ ಗುಂಡವಾಡೆ ಅವರು “ಮೂರನೇ ಆರೋಪಿಯಾಗಿರುವ ಜರೀನಾ ಬೇಗಂ ಫಯಾಜ್‌ ಅವರು ದತ್ತು ಪಡೆದಿರುವ ಮಗು ಅನಾಥ, ಪರಿತ್ಯಕ್ತ ಮಗುವಲ್ಲವಾದ್ದರಿಂದ ಅದು ಕಾಯಿದೆಯ ಸೆಕ್ಷನ್‌ 80ರ ಅಡಿ ಅಪರಾಧವಲ್ಲ. ಹೀಗಾಗಿ, ಅರ್ಜಿದಾರರ ವಿರುದ್ದದ ಆರೋಪಪಟ್ಟಿಯು ಆಧಾರರಹಿತವಾಗಿದೆ” ಎಂದು ವಾದಿಸಿದ್ದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲ ರಮೇಶ್‌ ಚಿಗರಿ ಅವರು “ಕಾಯಿದೆಯ ನಿಬಂಧನೆಯನ್ನು ಪಾಲಿಸದೇ ಅರ್ಜಿದಾರರು ಮಗುವನ್ನು ದತ್ತು ಪಡೆದಿದ್ದಾರೆ. ಹೀಗಾಗಿ ಇದು ಕಾಯಿದೆ ಸೆಕ್ಷನ್‌ 80ರ ಅಡಿ ಅಪರಾಧವಾಗಿದೆ” ಎಂದಿದ್ದರು.

Also Read
ಟಿವಿ ಪ್ಯಾನೆಲ್‌ ಬದಲಿಸಿ, ₹3 ಸಾವಿರ ದಾವೆ ವೆಚ್ಚ ಪಾವತಿಸಲು ಸ್ಯಾಮ್‌ಸಂಗ್‌ ಕಂಪೆನಿಗೆ ನಿರ್ದೇಶಿಸಿದ ಗ್ರಾಹಕರ ಆಯೋಗ

ಪ್ರಕರಣದ ಹಿನ್ನೆಲೆ: ಮೆಹಬೂಬ್‌ಸಾಬ್ ನಬಿಸಾಬ್ ಮತ್ತವರ ಪತ್ನಿ ಬಾನು ಬೇಗಂಗೆ 2018ರ ಸೆಪ್ಟೆಂಬರ್‌ 18ರಂದು ಅವಳಿ ಹೆಣ್ಣು ಮಕ್ಕಳು ಜನಿಸಿದ್ದವು. ಅವರಿಗೆ ಪರಿಚಿತರಾಗಿದ್ದ ಅಬ್ದುಲ್ ಸಾಬ್ ಹುಡೇದಮನಿ ಹಾಗೂ ಜರೀನಾ ಬೇಗಂ ದಂಪತಿಗೆ ಮಕ್ಕಳಿರದ ಕಾರಣ ಮೆಹಬೂಬ್‌ಸಾಬ್ ದಂಪತಿಯ ಮಗುವನ್ನು ದತ್ತು ಪಡೆಯಲು ಮೊದಲೇ ನಿರ್ಧರಿಸಿದ್ದರು. ಅಂತೆಯೇ, ಅಬ್ದುಲ್ ಸಾಬ್ ಹಾಗೂ ಜರೀನಾ ಬೇಗಂ 20 ರೂಪಾಯಿ ಛಾಪಾ ಕಾಗದದ ಮೇಲೆ ದತ್ತು ಪಡೆದು ಸಾಕುತ್ತಿರುವುದಾಗಿ ಉಲ್ಲೇಖಿಸಿದ್ದರು. ಆದರೆ, ಮಗುವಿನ ದತ್ತು ಪ್ರಕ್ರಿಯೆಯಲ್ಲಿ ಬಾಲ ನ್ಯಾಯ ಕಾಯಿದೆಯ ಸೆಕ್ಷನ್ 80ರ ಉಲ್ಲಂಘನೆಯಾಗಿದೆ ಎಂದು ಆರ್ ಜಯಶ್ರೀ ನರಸಿಂಹ ಎಂಬುವರು ದೂರು ದಾಖಲಿಸಿದ್ದರು.

ಗಂಗಾವತಿಯ ಪ್ರಧಾನ ಸಿವಿಲ್ ನ್ಯಾಯಾಲಯ ಪ್ರಕರಣವನ್ನು ಪರಿಗಣನೆಗೆ ತೆಗೆದುಕೊಂಡು ಮಗುವನ್ನು ದತ್ತು ನೀಡಿದ್ದ ಹಾಗೂ ದತ್ತು ಪಡೆದಿದ್ದ ದಂಪತಿಗೆ ಸಮನ್ಸ್ ಜಾರಿಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈಗ ಹೈಕೋರ್ಟ್‌ ಪ್ರಕರಣ ರದ್ದುಪಡಿಸಿದೆ.

Attachment
PDF
Banu Begaum and others Versus State of Karnataka.pdf
Preview

Related Stories

No stories found.
Kannada Bar & Bench
kannada.barandbench.com