ವಯಸ್ಕರ ವಿವಾಹೇತರ ಲೈಂಗಿಕ ಸಂಬಂಧ ಅಪರಾಧವಲ್ಲ: ರಾಜಸ್ಥಾನ ಹೈಕೋರ್ಟ್

ಐಪಿಸಿ ಸೆಕ್ಷನ್ 497ರ ಅಡಿಯಲ್ಲಿ ವ್ಯಭಿಚಾರ ಇದಕ್ಕೆ ಅಪವಾದವಾಗಿತ್ತು. ಆದರೆ ವ್ಯಭಿಚಾರ ಅಪರಾಧ ಎಂಬುದನ್ನು ಈಗಾಗಲೇ 2018ರಲ್ಲಿ ಸುಪ್ರೀಂ ಕೋರ್ಟ್‌ ರದ್ದುಗೊಳಿಸಿರುವುದಾಗಿ ನ್ಯಾಯಾಲಯ ತಿಳಿಸಿತು.
ರಾಜಸ್ಥಾನ ಹೈಕೋರ್ಟ್ನ ಜೈಪುರ ಪೀಠ
ರಾಜಸ್ಥಾನ ಹೈಕೋರ್ಟ್ನ ಜೈಪುರ ಪೀಠ

ವಯಸ್ಕರು ವಿವಾಹೇತರ ಲೈಂಗಿಕ ಕ್ರಿಯೆ ನಡೆಸುವುದು ಕಾನೂನಿನ ಅಡಿ ಅಪರಾಧವಲ್ಲ ಎಂದು ರಾಜಸ್ಥಾನ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ [ಯಡ್ರಾಮ್‌ ಮತ್ತಿತರರು ಹಾಗೂ ರಾಜಸ್ಥಾನ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಐಪಿಸಿ ಸೆಕ್ಷನ್ 497ರ ಅಡಿಯಲ್ಲಿ ವ್ಯಭಿಚಾರ ಇದಕ್ಕೆ ಅಪವಾದವಾಗಿತ್ತು. ಆದರೆ ವ್ಯಭಿಚಾರ ಅಪರಾಧ ಎಂಬುದನ್ನು ಈಗಾಗಲೇ 2018ರಲ್ಲಿ ಸುಪ್ರೀಂ ಕೋರ್ಟ್‌ ರದ್ದುಗೊಳಿಸಿರುವುದಾಗಿ ನ್ಯಾಯಮೂರ್ತಿ ಬೀರೇಂದ್ರ ಕುಮಾರ್ ತಿಳಿಸಿದರು.

"ಎಸ್ ಖುಷ್ಬೂ ಮತ್ತು ಕನ್ನಿಯಮ್ಮಾಳ್ ಮತ್ತಿತರರ ನಡುವಣ ಪ್ರಕರಣದಲ್ಲಿ ತಿಳಿಸಿರುವಂತೆ ವಯಸ್ಕರು ವಿವಾಹೇತರವಾಗಿ ಸ್ವಇಚ್ಛೆಯಿಂದ ಲೈಂಗಿಕ ಸಂಬಂಧಗಳಲ್ಲಿ ತೊಡಗಿದಾಗ ಶಾಸನಬದ್ಧ ಅಪರಾಧ ಎನಿಸಿಕೊಳ್ಳುವುದಿಲ್ಲ. ಐಪಿಸಿ ಸೆಕ್ಷನ್ 497ರ ಅಡಿಯಲ್ಲಿ ವ್ಯಭಿಚಾರ ಇದಕ್ಕೆ ಅಪವಾದವಾಗಿತ್ತು. ಅದನ್ನು ಈಗಾಗಲೇ ರದ್ದುಪಡಿಸಲಾಗಿದೆ" ಎಂದು ಮಾರ್ಚ್ 21ರಂದು ನೀಡಿದ ಆದೇಶದಲ್ಲಿ ತಿಳಿಸಲಾಗಿದೆ.

ನ್ಯಾಯಮೂರ್ತಿ ಬೀರೇಂದ್ರ ಕುಮಾರ್
ನ್ಯಾಯಮೂರ್ತಿ ಬೀರೇಂದ್ರ ಕುಮಾರ್

ಐಪಿಸಿ ಸೆಕ್ಷನ್ 366 (ಮಹಿಳೆಯನ್ನು ಅಪಹರಿಸುವುದು ಅಥವಾ ಅವಳ ಮದುವೆಗೆ ಒತ್ತಾಯಿಸುವುದು) ಅಡಿಯಲ್ಲಿ ದಾಖಲಾಗಿದ್ದ ಎಫ್ಐಆರ್ ರದ್ದುಗೊಳಿಸಿದ್ದ ಆದೇಶ ಹಿಂಪಡೆಯುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿತು.

ತನ್ನ ಹೆಂಡತಿಯನ್ನು ಮೂವರು ಅಪಹರಿಸಿದ್ದಾರೆ ಎಂದು ಆರೋಪಿಸಿ ವ್ಯಕ್ತಿ ಎಫ್ಐಆರ್ ದಾಖಲಿಸಿದ್ದರು. ಬೇರೊಂದು ಅಪರಾಧದಲ್ಲಿ ಜೈಲಿನಲ್ಲಿದ್ದ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಈ ಮಧ್ಯೆ ನ್ಯಾಯಾಲಯಕ್ಕೆ ಹಾಜರಾದ ಆತನ ಪತ್ನಿ ತಾನು ಸ್ವಯಂ ಪ್ರೇರಿತವಾಗಿ ಬೇರೊಬ್ಬರೊಂದಿಗೆ ಸಹಜೀವನ ನಡೆಸುತ್ತಿರುವುದಾಗಿ ತಿಳಿಸಿದ್ದರು.

ಸಾಮಾಜಿಕ ನೈತಿಕತೆಗಿಂತ ಸಾಂವಿಧಾನಿಕ ನೈತಿಕತೆಗೆ ಆದ್ಯತೆ ನೀಡಬೇಕು ಎಂದು ನವತೇಜ್ ಸಿಂಗ್ ಜೋಹರ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ ಹಾಗೂ ಶಫಿನ್ ಜಹಾನ್ ಮತ್ತು ಅಶೋಕನ್ ಕೆ ಎಂ ನಡುವಣ ಪ್ರಕರಣದಲ್ಲಿ ನೀಡಿದ ತೀರ್ಪನ್ನು ಉಲ್ಲೇಖಿಸಿದ ಕೆಳ ನ್ಯಾಯಾಲಯ ಎಫ್‌ಐಆರ್‌ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ ಕದ ತಟ್ಟಿದ್ದರು.

ಅರ್ಜಿದಾರರು ಮನ್ಜೋತ್‌ ಸಿಂಗ್‌ ಮತ್ತಿತರರು ಹಾಗೂ ಪಂಜಾಬ್‌ ಸರ್ಕಾರ ಇನ್ನಿತರರ ನಡುವಣ ಪ್ರಕರಣದಲ್ಲಿ ಪಂಜಾಬ್‌ ಹೈಕೋರ್ಟ್‌ ನೀಡಿರುವ ತೀರ್ಪನ್ನು ಅವಲಂಬಿಸಿರುವುದನ್ನು ಗಮನಿಸಿದ ನ್ಯಾಯಾಲಯ ನವತೇಜ್ ಸಿಂಗ್ ಜೋಹರ್ ಮತ್ತು ಶಫಿನ್ ಜಹಾನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಪಂಜಾಬ್ ಹೈಕೋರ್ಟ್ ಮುಂದೆ ಇರಿಸಿರಲಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದಿತು.

ಅಲ್ಲದೆ ದೂರುದಾರರ ಪತ್ನಿ ಯಾರನ್ನೂ ಮದುವೆಯಾಗದ ಕಾರಣ ಸೆಕ್ಷನ್ 494 ರ ಅಡಿ ಕೂಡ ಅಪರಾಧವಲ್ಲ ಎಂದಿತು. ಅದರಂತೆ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ ಎಂದ ನ್ಯಾಯಾಲಯ ಅದನ್ನು ವಜಾಗೊಳಿಸಿತು.

Kannada Bar & Bench
kannada.barandbench.com