ವಿರೋಧಿ ರಾಜಕೀಯ ನಾಯಕರೆಡೆಗಿನ ಕೆಲ ಎಎಜಿಗಳ ನಿಷ್ಠೆಯಿಂದಾಗಿ ರಾಜ್ಯ ಸರ್ಕಾರಕ್ಕೆ ಹಿನ್ನೆಡೆ: ಎಎಜಿ ದೇವದಾಸ್‌ ಆರೋಪ

“ಕೆಲವು ಎಎಜಿಗಳು ಹಾಗೂ ಕೆಲ ಕಾನೂನು ಅಧಿಕಾರಿಗಳು ವಿರೋಧಿ ಗುಂಪುಗಳ ನಿಯಂತ್ರಣದಲ್ಲಿದ್ದು, ಒಂದು ರೀತಿಯಲ್ಲಿ ನುಸುಳುಕೋರರಾಗಿದ್ದಾರೆ. ಸೈದ್ಧಾಂತಿಕವಾಗಿ ನಮ್ಮ ಸರ್ಕಾರದ ನೀತಿ ಮತ್ತು ಯೋಜನೆಗಳನ್ನು ಅವರು ಒಪ್ಪಿಕೊಳ್ಳುತ್ತಿಲ್ಲ” ಎಂದು ಆಕ್ಷೇಪ.
Vidhana Soudha
Vidhana Soudha
Published on

“ಕೆಲವು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳು (ಎಎಜಿ), ಅಡ್ವೊಕೇಟ್‌ ಜನರಲ್‌ (ಎಜಿ) ಕಚೇರಿಯನ್ನು ನಿಯಂತ್ರಿಸುತ್ತಿದ್ದು, ರಾಜ್ಯ ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ಆರೋಪಿಸಿ ಎಎಜಿ ಎನ್‌ ದೇವದಾಸ್‌ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

“ಎಎಜಿಯೊಬ್ಬರ ಚೇಂಬರ್‌ನಲ್ಲಿ ಬಿಜೆಪಿ ಪರ ಪ್ರಮುಖ ವಕೀಲರು ತಮ್ಮ ಪ್ರಕರಣಗಳನ್ನು ಗೆಲ್ಲಲು ಕಾರ್ಯತಂತ್ರ ರೂಪಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ 2-3 ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳು ಮತ್ತು ಸರ್ಕಾರದ ವಕೀಲರು ಸಲಹೆ ಸೂಚನೆ ನೀಡುತ್ತಾರೆ. ಇದರಿಂದ ಹಲವು ಪ್ರಕರಣಗಳಲ್ಲಿ ಸರ್ಕಾರದ ವಿರುದ್ಧ ತೀರ್ಪು ಬಂದಿದೆ” ಎಂದು ದೇವದಾಸ್‌ ಆರೋಪಿಸಿದ್ದಾರೆ.

“ಪ್ರಮುಖ ಇಲಾಖೆಗಳಿಗೆ ಸಂಬಂಧಿಸಿದ ಹೆಚ್ಚಿನ ಕೆಲಸವು ಈ ಇಬ್ಬರು - ಮೂವರು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳು ಹಾಗೂ ಅವರ ವಕೀಲರ ಗುಂಪುಗಳ ನಡುವೆ ಇದೆ. ಇವರು ವ್ಯವಸ್ಥಿತವಾಗಿ ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

“ಇಬ್ಬರು - ಮೂವರು ಎಎಜಿಗಳ ಸಲಹೆಯಂತೆ ಕೆಲಸ ಮಾಡುವ ಅಡ್ವೊಕೇಟ್‌ ಜನರಲ್‌ ಅವರಿಂದಾಗಿ ಸರ್ಕಾರವನ್ನು ಸಮರ್ಥವಾಗಿ ಪ್ರತಿನಿಧಿಸಬೇಕೆನ್ನುವ ತಮ್ಮ ಪ್ರಯತ್ನಗಳಿಗೆ ಧಕ್ಕೆ ಒದಗಿದೆ. ಈ ಎಎಜಿಗಳೆಲ್ಲರೂ ಹಿಂದಿನ ಅಧಿಕಾರವಧಿಯಲ್ಲೂ ನೇಮಕಗೊಂಡಿದ್ದರು. ಅವರು ಇಂದಿಗೂ ತಮ್ಮ ಹಿಂದಿನ ಧಣಿಗಳಿಗೆ ನಿಷ್ಠರಾಗಿದ್ದು, ವಿರೋಧಿ ಗುಂಪಿನ ಜೊತೆ ಕೈಜೋಡಿಸುವ ಮೂಲಕ ಅಂತಿಮವಾಗಿ ಸರ್ಕಾರದ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ” ಎಂದು ವಿವರಿಸಿದ್ದಾರೆ.

“ಕೆಲವು ಎಎಜಿಗಳು ಮತ್ತು ಕೆಲವು ಕಾನೂನು ಅಧಿಕಾರಿಗಳು ವಿರೋಧಿ ಗುಂಪುಗಳ ನಿಯಂತ್ರಣದಲ್ಲಿದ್ದು, ಒಂದು ರೀತಿಯಲ್ಲಿ ನುಸುಳುಕೋರರಾಗಿದ್ದಾರೆ. ಹೀಗಾಗಿ, ಸೈದ್ಧಾಂತಿಕವಾಗಿ ನಮ್ಮ ಸರ್ಕಾರದ ನೀತಿ ಮತ್ತು ಯೋಜನೆಗಳನ್ನು ಅವರು ಒಪ್ಪಿಕೊಳ್ಳುತ್ತಿಲ್ಲ” ಎಂದು ಆಕ್ಷೇಪಿಸಿದ್ದಾರೆ.

“ಇಬ್ಬರು-ಮೂವರು ಎಎಜಿಗಳು ಎಲ್ಲಾ ಕಾನೂನು ಅಧಿಕಾರಿಗಳಿಗೆ ಕೆಲಸ ಹಂಚಿಕೆ ಮಾಡುತ್ತಿದ್ದಾರೆ. ಹಿಂದಿನ ಕೆಲಸದ ಹಂಚಿಕೆಯಿಂದ ಸಾಬೀತಾಗುವುದೇನೆಂದರೆ ಈ ಎಎಜಿಗಳಿಗೆ ನಿಷ್ಠರಾಗಿರುವವರಿಗೆ ಕೋರ್ಟ್‌ ಕೆಲಸ ಹಂಚಿಕೆಯಾಗುತ್ತಿದೆ. ಇತರೆ ವಕೀಲರು ಪ್ರತಿಭಾನ್ವಿತರಾಗಿದ್ದರೂ ಅವರಿಗೆ ಕೆಲಸ ಹಂಚಿಕೆಯಾಗುತ್ತಿಲ್ಲ. ಮೇಲೆ ಹೇಳಿದ ಎಎಜಿಗಳಿಗೆ ನಿಷ್ಠರಾಗಿರುವ ವಕೀಲರಿಗೆ ಪ್ರಮುಖ ಪ್ರಕರಣಗಳಲ್ಲಿ ಭಾಗಿಯಾಗುವಂತೆ ನೋಡಿಕೊಳ್ಳಲಾಗುತ್ತಿದೆ. ಹೀಗಾಗಿ, ಇಂಥ ಎಎಜಿಗಳು ಮತ್ತು ಅಪ್ರಾಮಾಣಿಕ ಕಾನೂನು ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕಿದೆ. ವ್ಯವಸ್ಥೆಗೆ ಪ್ರತಿಭಾನ್ವಿತ ಮತ್ತು ಸರ್ಕಾರದೆಡೆಗೆ ನಿಷ್ಠೆ ಹೊಂದಿರುವವರನ್ನು ನೇಮಕ ಮಾಡಲು ಇದು ಪ್ರಶಸ್ತ ಕಾಲವಾಗಿದೆ” ಎಂದು ಸಲಹೆ ನೀಡಿದ್ದಾರೆ.

“ಹೀಗಾಗಿ, ಅಡ್ವೊಕೇಟ್‌ ಜನರಲ್‌ ಕಚೇರಿಗೆ ಕೆಲಸ ಇತ್ಯಾದಿ ಹಂಚಿಕೆಗೆ ಸಂಬಂಧಿಸಿದಂತೆ ಸ್ಪಷ್ಟ ನಿರ್ದೇಶನ ಮತ್ತು ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ನೀಡಬೇಕು” ಎಂದು ಅವರು ಆಗ್ರಹಿಸಿದ್ದಾರೆ.

ಸರ್ಕಾರದ ಗೌರವಕ್ಕೆ ಧಕ್ಕೆಯಾಗಬಾರದು ಎಂಬುದಕ್ಕೆ ಸಲಹೆಗಳು

  • ಸರ್ಕಾರಕ್ಕೆ ನಿಷ್ಠರಾಗಿರದ ಅಪ್ರಾಮಾಣಿಕ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳು ಮತ್ತು ಕಾನೂನು ಅಧಿಕಾರಿಗಳನ್ನು ಪತ್ತೆ ಮಾಡಬೇಕು.

  • ತಂಡದಲ್ಲಿ ಹಲವು ಪ್ರತಿಭಾನ್ವಿತ ಕಾನೂನು ಅಧಿಕಾರಿಗಳಿದ್ದಾರೆ. ಕೆಲವು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳು ಅಡ್ವೊಕೇಟ್‌ ಜನರಲ್‌ ಹೆಸರಿನಲ್ಲಿ ಆಟವಾಡುತ್ತಿದ್ದು, ಪ್ರತಿಭಾನ್ವಿತ ವಕೀಲರಿಗೆ ಸೂಕ್ತ ಕೆಲಸ, ಅವಕಾಶ ನೀಡದೇ ಅವರ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಲಾಗುತ್ತಿದೆ.

  • ಪ್ರತಿಭಾನ್ವಿತ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳಿಗೆ ಸೂಕ್ತ ಕೆಲಸ ಹಂಚಿಕೆ ಮಾಡುವ ಮೂಲಕ ಸರ್ಕಾರವನ್ನು ಪ್ರಬಲವಾಗಿ ಸಮರ್ಥಿಸಿಕೊಳ್ಳಲು ಅಡ್ವೊಕೇಟ್‌ ಜನರಲ್‌ಗೆ ಸರ್ಕಾರ ನಿರ್ದಿಷ್ಟ ಸೂಚನೆ ನೀಡಬೇಕು. ಈ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳು ನಿರ್ದಿಷ್ಟ ಕಾನೂನು ಅಧಿಕಾರಿಗಳನ್ನು ಆಯ್ಕೆ ಮಾಡಿಕೊಂಡು ತಂಡ ಕಟ್ಟುವ ಸ್ವಾತಂತ್ರ್ಯ ಹೊಂದಲು ಅವಕಾಶ ಮಾಡಿಕೊಡಬೇಕು. ಆಗ ಆ ತಂಡವು ಸರ್ಕಾರದ ಹಿತಾಸಕ್ತಿಯನ್ನು ಸಮರ್ಥಿಸಲಿದೆ.

  • ಸರ್ಕಾರಿ ಅಭಿಯೋಜಕರ ವಿಚಾರದಲ್ಲಿಯೂ ಕ್ಷಮತೆಯ ಕೊರತೆ ಇದ್ದು, ಅಲ್ಲಿಯೂ ಪ್ರತಿಭಾನ್ವಿತರನ್ನು ವಿಶೇಷ ಸರ್ಕಾರಿ ಅಭಿಯೋಜಕರು, ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ನೇಮಿಸಬೇಕಿದೆ. ಪ್ರಕರಣಗಳು ರಾಜಕೀಯ ರೂಪದಲ್ಲಿರುವುದರಿಂದ ಪ್ರತಿಭಾನ್ವಿತರನ್ನು ನೇಮಿಸಿದಾಗ ಉತ್ತಮ ಫಲಿತಾಂಶ ಪಡೆಯಬಹುದಾಗಿದೆ.

ಜೂನ್‌ 26ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಿಎಂ, ಕಾನೂನು ಸಚಿವಾಲಯ ಮತ್ತು ಕಾನೂನು ಕಾರ್ಯದರ್ಶಿಗೆ ಈಗಾಗಲೇ ಕೆಲವು ಸಲಹೆಗಳನ್ನು ನೀಡಿರುವುದಾಗಿ ದೇವದಾಸ್‌ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Attachment
PDF
AAG Devadas Letter
Preview
Kannada Bar & Bench
kannada.barandbench.com