ಇತಿಹಾಸ ಸೃಷ್ಟಿಸಿದ ಶ್ರವಣದೋಷವುಳ್ಳ ವಕೀಲೆ ಸಾರಾ ಸನ್ನಿ ಸಾಗಿಬಂದ ಹಾದಿಗೊಂದು ಇಣುಕು

ಸುಪ್ರೀಂ ಕೋರ್ಟ್‌ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಶ್ರವಣದೋಷವುಳ್ಳ ವಕೀಲೆ ಸಾರಾ ಅವರು ಸಂಜ್ಞಾ ವ್ಯಾಖ್ಯಾನಕಾರರ ಸಹಾಯದಿಂದ ವಿಚಾರಣೆಯಲ್ಲಿ ಪಾಲ್ಗೊಂಡರು. 'ಬಾರ್‌ ಅಂಡ್‌ ಬೆಂಚ್‌'ಗಾಗಿ ಅವರನ್ನು ಸಂದರ್ಶಿಸಿದ್ದಾರೆ ಪತ್ರಕರ್ತ ದೇಬಯಾನ್‌ ರಾಯ್‌
Adv Sarah Sunny
Adv Sarah Sunny

"ಇದನ್ನು ಸಾಧ್ಯವಾಗಿಸಲು ತುಂಬಾ ಸಮಯ ಹಿಡಿಯಿತು. ಇದು ಬಹಳ ಹಿಂದೆಯೇ ನಡೆಯಬೇಕಿತ್ತು" ಹೀಗೆಂದು ಮಂಗಳವಾರ ಸಿಜೆಐ ಡಿ ವೈ ಚಂದ್ರಚೂಡ್‌ ಹೇಳಿದರು. ಇತ್ತೀಚೆಗೆ ಇತಿಹಾಸ ನಿರ್ಮಾಣವಾಗಲು ಕಾರಣವಾದ ಘಟನೆಯೊಂದನ್ನು ನೆನೆದು ಅವರು ಹೇಳಿದ ಮಾತಿದು.

ಸುಪ್ರೀಂ ಕೋರ್ಟ್‌ ಸೆ.22ರಂದು ಅದೇ ಮೊದಲ ಬಾರಿಗೆ ಶ್ರವಣ ದೋಷವುಳ್ಳ ವಕೀಲೆ ವಾದವನ್ನು ಸಂಜ್ಞಾ ವ್ಯಾಖ್ಯಾನಕಾರರ ಮೂಲಕ ಆಲಿಸಲು ಮುಂದಾಗಿತ್ತು. ತುರ್ತು ಪ್ರಕರಣಗಳನ್ನು ಉಲ್ಲೇಖಿಸುವ ಸಂದರ್ಭದಲ್ಲಿ ವಕೀಲೆ ಸಂಚಿತಾ ಐನ್‌ ಅವರು ಅಪರೂಪದ ಕೋರಿಕೆಯೊಂದನ್ನು ನ್ಯಾಯಾಲಯದೆದುರು ಇಡುವ ಮೂಲಕ ಇದಕ್ಕೆ ಚಾಲನೆ ನೀಡಿದರು.

ʼಶ್ರವಣದೋಷವಿರುವ ವಕೀಲೆಯೊಬ್ಬರು ಐಟಂ 37ರಲ್ಲಿ ಹಾಜರಾಗುತ್ತಿದ್ದಾರೆ. ಆಕೆ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುವಂತೆ ವ್ಯಾಖ್ಯಾನಕಾರರಿಗೆ ಅನುಮತಿ ನೀಡುವಿರೇ..." ಎಂದು ಅವರು ಸಿಜೆಐ ಚಂದ್ರಚೂಡ್‌ ಅವರನ್ನು ಕೋರಿದಾಗ ಅವರು ಮರುಮಾತಿಲ್ಲದೆ ಸಮ್ಮತಿಸಿದರು. ಅಲ್ಲಿಂದ ಮುಂದೆ ಶ್ರವಣದೋಷವುಳ್ಳ ವಕೀಲೆ ಸಾರಾ ಸನ್ನಿ ವಾದ ಮಂಡಿಸುತ್ತ ಹೋದರು. ಚರಿತ್ರೆಯೊಂದು ನಿರ್ಮಾಣವಾಗುತ್ತಾ ಸಾಗಿತು.

ಹಾಗೆ ಇತಿಹಾಸ ನಿರ್ಮಿಸಿದ ಸಾರಾ ಅವರನ್ನು ‘ಬಾರ್‌ ಅಂಡ್‌ ಬೆಂಚ್‌’ಗಾಗಿ ಸಂದರ್ಶಿಸಿದ್ದಾರೆ ಪತ್ರಕರ್ತ ದೇಬಯಾನ್‌ ರಾಯ್‌. ಸಾರಾ ಸಾಗಿ ಬಂದ ಹಾದಿಗೊಂದು ಇಣುಕು ಇಲ್ಲಿದೆ:

Q

ದೇಬಯಾನ್ ರಾಯ್: ಕಾನೂನು ವೃತ್ತಿಗೆ ಬರಲು ಸಾಕಷ್ಟು ಸುದೀರ್ಘ ಮತ್ತು ಕಷ್ಟಕರ ಪ್ರಯಾಣ ನಿಮ್ಮದಾಗಿರಬಹುದು. ಕಾನೂನು ವೃತ್ತಿಪರಳಾಗಿ ನೀವು ಎದುರಿಸಿದ ಸವಾಲುಗಳನ್ನು ವಿವರಿಸಬಹುದೇ?

A

ಸಾರಾ ಸನ್ನಿ: ನಾನು ಕೋವಿಡ್‌ ಸಾಂಕ್ರಾಮಿಕ ಎದುರಾಗಿದ್ದ ವೇಳೆ ವಕೀಲಳಾಗಿ ಅರ್ಹತೆ ಪಡೆದೆ. ಕಾನೂನು ಸಂಸ್ಥೆಯ ಭಾಗವಾಗಲು ಬಯಸಿದ್ದೆ, ಅದಕ್ಕಾಗಿ ನಾನು ಆರಂಭದಲ್ಲಿ ಹರಸಾಹಸ ಮಾಡಬೇಕಾಯಿತು. ಅದು ಸಾಧ್ಯವಾಗಲು ಸಾಕಷ್ಟು ಸಮಯ ಹಿಡಿಯಿತು.

ತುಟಿಚಲನೆಯನ್ನು ಓದಬಲ್ಲ ಕಿವುಡ ವ್ಯಕ್ತಿಯಾಗಿರುವ ನಾನು ಬಾಲ್ಯದಿಂದಲೂ ಸಂವಹನಕ್ಕಾಗಿ ನನ್ನ ಧ್ವನಿಯನ್ನು ಬಳಸುತ್ತಿದ್ದೆ. ನ್ಯಾಯಾಧೀಶರ ಮುಂದೆ ಪ್ರಕರಣಗಳನ್ನು ಪ್ರತಿನಿಧಿಸುವಾಗ, ನನ್ನ ಮಾತನ್ನು ಅರ್ಥಮಾಡಿಕೊಳ್ಳುವುದು ಅವರಿಗೆ ಸವಾಲಾಗಿತ್ತು. ಹಾಗಾಗಿ ಅವರು ನನ್ನನ್ನು ಅನುಸರಿಸಲು ಸಾಧ್ಯವಾಗದಿದ್ದಾಗ, ನಾನು ಅವುಗಳನ್ನು ಬರೆದು ತೋರಿಸುತ್ತಿದ್ದೆ. ನ್ಯಾಯಾಲಯಗಳಲ್ಲಿ ವ್ಯಾಖ್ಯಾನಕಾರರ ಸೌಲಭ್ಯ ಇರಲಿಲ್ಲ, ಅದು ಇದ್ದಿದ್ದರೆ ನನ್ನ ಕೆಲಸ ಸುಲಭವಾಗಿರುತ್ತಿತ್ತು. ಈ ಸವಾಲನ್ನು ಎದುರಿಸಬೇಕಾಯಿತು.

Q

ದೇಬಯಾನ್ ರಾಯ್: ವಿಶೇಷ ಅಗತ್ಯವುಳ್ಳ ವಕೀಲರಿಗೆ ಅವಕಾಶ ಕಲ್ಪಿಸಲು ಭಾರತೀಯ ನ್ಯಾಯಾಲಯಗಳು ಸಜ್ಜುಗೊಂಡಿವೆಯೇ?

A

ಸಾರಾ: ನನಗೆ ಗೊತ್ತಿರುವ ಪ್ರಕಾರ, ಭಾರತೀಯ ನ್ಯಾಯಾಲಯಗಳು ವಿಶೇಷ ಅಗತ್ಯವುಳ್ಳ ಜನರಿಗೆ ಒದಗಿಸಬೇಕಾದ ಸವಲತ್ತುಗಳ ಬಗ್ಗೆ ಸಂಪೂರ್ಣ ಸಜ್ಜುಗೊಂಡಿಲ್ಲ. ಈಗ ಸುಪ್ರೀಂ ಕೋರ್ಟ್ ಶ್ರವಣದೋಷದ ವಕೀಲರಿಗೆ ವ್ಯಾಖ್ಯಾನಕಾರರ ಸೌಲಭ್ಯ ಒದಗಿಸಿದ್ದು, ಉಳಿದ ನ್ಯಾಯಾಲಯಗಳು ಸಹ ಅದನ್ನು ಅನುಸರಿಸಬೇಕಿದೆ. ಒಳ್ಳೆಯ ಉದ್ದೇಶಗಳಿಗೆ ಮೀಸಲಾಗಿರುವ ಸಾಮಾಜಿಕ ಸಂಸ್ಥೆಗಳು ಇಂತಹ ಸಮಸ್ಯೆಗಳನ್ನು ಎತ್ತಿ ತೋರಿಸಬೇಕಾಗಿದೆ.

Q

ರಾಯ್‌: ನ್ಯಾಯಾಲಯದ ವಿಚಾರಣೆಗಳಲ್ಲಿ ವ್ಯಾಖ್ಯಾನಕಾರರನ್ನು ಹೇಗೆ ಮುಖ್ಯವಾಹಿನಿಗೆ ತರಬಹುದು?

A

ಸಾರಾ: ಇತ್ತೀಚಿನ ದಿನಗಳಲ್ಲಿ, ವ್ಯಾಖ್ಯಾನಕಾರಿಕೆ ಒಂದು ವೃತ್ತಿಯಾಗಿದ್ದು ಅದನ್ನು ಮುಖ್ಯವಾಹಿನಿಗೆ ತರಬಹುದು. ಆದರೂ, ಕಾನೂನು ಮತ್ತು ನ್ಯಾಯಾಲಯಗಳ ವಿಚಾರಕ್ಕೆ ಬಂದಾಗ, ವ್ಯಾಖ್ಯಾನಕಾರರಿಗೆ ಕೆಲ ಮಟ್ಟದ ಕಾನೂನು ಜ್ಞಾನದ ಅಗತ್ಯವಿರುತ್ತದೆ.

Q

ರಾಯ್‌: ಮುಂದೊಂದು ದಿನ, ಅನೇಕ ವಿಕಲಚೇತನ ವಕೀಲರು ನ್ಯಾಯಾಲಯಗಳಿಗೆ ಹಾಜರಾಗುತ್ತಾರೆ ಎಂದು ನೀವು ನಂಬುತ್ತೀರಾ? ಇದನ್ನು ಸಾಕಾರಗೊಳಿಸಲು ವ್ಯಾಖ್ಯಾನಕಾರರ ಹೊರತಾಗಿ ಬೇರೆ ಯಾವ ಸೌಲಭ್ಯಗಳು ಬೇಕು?

A

ಸಾರಾ: ಹೌದು, ವಿಶೇಷ ಸಾಮರ್ಥ್ಯವುಳ್ಳ ವಕೀಲರಿಗಾಗಿ ಮಾರ್ಗಸೂಚಿ ಇದೆ. ಇಷ್ಟು ದೊಡ್ಡ ಜನಸಂಖ್ಯೆ ಇರುವ ಅತಿದೊಡ್ಡ ಪ್ರಜಾಪ್ರಭುತ್ವವಾಗಿರುವ ನಮ್ಮ ದೇಶದಲ್ಲಿ ವಿಕಲಚೇತನರಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿವೆ. ಅವುಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. ನ್ಯಾಯಾಂಗವು ಅಂತಹ ಉದಾತ್ತ ಕಾರಣಗಳನ್ನು ಬೆಂಬಲಿಸಬೇಕಿದ್ದು ವಿಕಲಚೇತನರ ಹಕ್ಕುಗಳ ಕಾಯಿದೆಗೆ ಸಮಯೋಚಿತ ಮಾರ್ಪಾಡು ತರಲು ಅಥವಾ  ಹೊಸ ಕಾನೂನುಗಳನ್ನು ರೂಪಿಸಲು ಬೆಂಬಲಿಸಬೇಕು.

Q

ರಾಯ್‌: ದೇಶದಲ್ಲಿ ಕಾನೂನು ಶಿಕ್ಷಣ ವಿಕಲಚೇತನ ಸ್ನೇಹಿಯಾಗಿದೆಯೇ?

A

ಸಾರಾ: ಸ್ನೇಹಪರವಾಗಿರಬಹುದು ಅಥವಾ ಇಲ್ಲದಿರಬಹುದು ಎಂಬುದು ಮುಖ್ಯವಲ್ಲ. ಅಂತಹ ಸವಾಲನ್ನು ಸ್ವೀಕರಿಸಿ ಅಂತಹ ವಿಶೇಷ ಅಗತ್ಯಗಳನ್ನು ಗಮನಿಸಿ ಅದನ್ನು ಸ್ನೇಹಪರವಾಗಿಸಬೇಕೆಂಬುದು ಪ್ರತಿಯೊಬ್ಬರ ಬಯಕೆ. ಹೌದು, ಸಹಜವಾಗಿಯೇ ಕಾನೂನು ಕಾಲೇಜಿನಲ್ಲಿ ಶ್ರವಣದೋಷವುಳ್ಳ ವ್ಯಕ್ತಿಗೆ ವ್ಯಾಖ್ಯಾನಕಾರರ ಸೌಲಭ್ಯವಿದ್ದರೆ ಅಥವಾ ದೃಷ್ಟಿದೋಷವುಳ್ಳವರಿಗೆ ಬ್ರೈಲ್ ಲಿಪಿಯ ನೆರವು ದೊರೆತರೆ ಪ್ರಯೋಜನವಾಗುತ್ತದೆ. ದೇಶದಲ್ಲಿ ಅಂತಹ ವಿಷಯಗಳನ್ನು ಸಾಧ್ಯವಾಗಿಸಲು ನಾವು ಬಹಳ ದೂರ ಸಾಗಬೇಕಿದೆ ಎಂದು ನಾನು ಭಾವಿಸುತ್ತೇನೆ.

Related Stories

No stories found.
Kannada Bar & Bench
kannada.barandbench.com