ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ 2022ರಲ್ಲಿ ರಚಿಸಿರುವ ಯುದ್ಧಪೀಡಿತ ಯುಕ್ರೇನ್‌ನ ಸ್ವತಂತ್ರ ಅಂತಾರಾಷ್ಟ್ರೀಯ ತನಿಖಾ ಆಯೋಗದ ಸದಸ್ಯರನ್ನಾಗಿ ನ್ಯಾಯವಾದಿ ವೃಂದಾ ಗ್ರೋವರ್ ಅವರನ್ನು ನೇಮಿಸಲಾಗಿದೆ.
ಮೂವರು ಸದಸ್ಯರನ್ನೊಳಗೊಂಡ ಯುಕ್ರೇನ್ ತನಿಖಾ ಆಯೋಗವನ್ನು ಮಾರ್ಚ್ 4, 2022 ರಂದು ರಚಿಸಲಾಗಿತ್ತು. ರಷ್ಯಾ ಒಕ್ಕೂಟ ಯುಕ್ರೇನ್‌ನಲ್ಲಿ ನಡೆಸಿದೆ ಎನ್ನಲಾದ ಮಾನವ ಹಕ್ಕುಗಳ ಉಲ್ಲಂಘನೆ, ದುರುಪಯೋಗ, ಅಂತಾರಾಷ್ಟ್ರೀಯ ಮಾನವೀಯ ಕಾನೂನಿಗೆ ಧಕ್ಕೆ ಮತ್ತಿತರ ಅಪರಾಧಗಳ ತನಿಖೆ ಮಾಡುವ ಉದ್ದೇಶದೊಂದಿಗೆ ಇದನ್ನು ಸ್ಥಾಪಿಸಲಾಗಿದೆ.
ಏಪ್ರಿಲ್ 4, 2023ರಂದು, ಮಂಡಳಿಯು ಆಯೋಗದ ಅಧಿಕಾರಾವಧಿಯನ್ನು ಒಂದು ವರ್ಷದ ಅವಧಿಗೆ ನವೀಕರಿಸಿತ್ತು. ಮಾನವ ಹಕ್ಕುಗಳ ಮಂಡಳಿಯ ಅಧ್ಯಕ್ಷ ಜೆಕ್ ಗಣರಾಜ್ಯದ ರಾಯಭಾರಿ ವಾಕ್ಲಾವ್ ಬಾಲೆಕ್ ಈ ನೇಮಕಾತಿ ಮಾಡಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದೆಹಲಿ ವಿಶ್ವವಿದ್ಯಾಲಯ ಮತ್ತು ನ್ಯೂಯಾರ್ಕ್ ವಿವಿಯಿಂದ ಕಾನೂನು ವಿಷಯಕ್ಕೆ ಸಂಬಂಧಿಸಿದಂತೆ ಕ್ರಮವಾಗಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿರುವ ವೃಂದಾ ಅವರು ಭಾರತದಲ್ಲಿ ಮಹಿಳಾ ಹಕ್ಕುಗಳು ಮತ್ತು ಮಾನವ ಹಕ್ಕುಗಳ ಚಳುವಳಿಗಳಲ್ಲಿ ಸಕ್ರಿಯರಾಗಿದ್ದಾರೆ.