
ಕರ್ನಾಟಕ ಹೈಕೋರ್ಟ್‌ಗೆ ನ್ಯಾಯಮೂರ್ತಿಗಳ ನೇಮಕಾತಿಯನ್ನು ವಿಳಂಬಗೊಳಿಸದೇ ತಕ್ಷಣ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರಿಗೆ ಬೆಂಗಳೂರು ವಕೀಲರ ಸಂಘ (ಎಎಬಿ) ಪತ್ರ ಬರೆದಿದೆ.
ನೇಮಕಾತಿ ನಿಶ್ಚಲವಾಗಿರುವುದರಿಂದ ಹಾಲಿ ನ್ಯಾಯಮೂರ್ತಿಗಳಿಗೆ ಕೆಲಸದ ಒತ್ತಡ ಹೆಚ್ಚಾಗಿದೆ ಎಂದು ಎಎಬಿ ಉಲ್ಲೇಖಿಸಿದೆ. “ವರ್ಷಗಳಿಂದ ನೇಮಕಾತಿಯಲ್ಲಿ ವಾಸ್ತವಿಕ ನಿಶ್ಚಲತೆ ಇರುವುದರಿಂದ ಕರ್ನಾಟಕ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರ ಸಂಖ್ಯೆ ಕಡಿಮೆಯಾಗುತ್ತಿದೆ. ನ್ಯಾಯಮೂರ್ತಿಗಳ ಸಂಖ್ಯೆ ಕುಸಿತ ಮತ್ತು ಬಾಕಿ ಪ್ರಕರಣಗಳ ಸಂಖ್ಯೆ ಲಂಬಿಸುತ್ತಿದ್ದು, ಮೂರು ಪೀಠಗಳಲ್ಲಿನ ಹಾಲಿ ನ್ಯಾಯಮೂರ್ತಿಗಳು ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯ ಕೆಲಸ ಮಾಡುವಂತಾಗಿದೆ. ಸಾವಿರಾರು ಸಿವಿಲ್ ಪ್ರಕರಣಗಳು ಹಲವು ವರ್ಷಗಳಿಂದ ಬಾಕು ಉಳಿದಿವೆ” ಎಂದು ಪತ್ರದಲ್ಲಿ ವಿವರಿಸಲಾಗಿದೆ.
ನ್ಯಾಯಮೂರ್ತಿಗಳು ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯ ಕೆಲಸ ಮಾಡಿದರೂ ಕಾರ್ಯಭಾರದ ಒತ್ತಡದಿಂದಾಗಿ ರಿಟ್ ವಿಭಾಗದಲ್ಲಿ ಬಿ ಗುಂಪಿನ ಪ್ರಕರಣಗಳನ್ನು ಪಟ್ಟಿ ಮಾಡದೇ ಇರುವುದರಿಂದ ದಾವೆದಾರರು ಅನಿರ್ದಿಷ್ಟಾವಧಿಗೆ ಕಾಯುವಂತಾಗಿದೆ. ಹೀಗಾಗಿ, ತುರ್ತಾಗಿ ನೇಮಕಾತಿಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಲಾಗಿದೆ.
“ಹೈಕೋರ್ಟ್‌ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸಮಾಜದ ವಿವಿಧ ಸಮುದಾಯಗಳಿಗೆ ಅವಕಾಶ ಕಲ್ಪಿಸಿ, ಅಂಥ ಹೆಸರುಗಳನ್ನು ಶಿಫಾರಸ್ಸು ಮಾಡುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಮತ್ತು ಕೊಲಿಜಿಯಂನ ಇತರೆ ಸದಸ್ಯರಿಗೆ ನಿರ್ದೇಶಿಸಬೇಕು. ಆನಂತರ ಅಂತ ನೇಮಕಾತಿಗಳು ತುರ್ತಾಗಿ ನಡೆಸಬೇಕು” ಎಂದು ಸಿಜೆಐಗೆ ಎಎಬಿ ಮನವಿ ಮಾಡಿದೆ.