ಅಖಿಲ ಭಾರತ ವಕೀಲರ ಪರೀಕ್ಷೆ ಪಾಸಾಗದ ವಕೀಲರು ವಕೀಲರ ಧಿರಿಸು ಹಾಕುವಂತಿಲ್ಲ: ಕೆಎಸ್‌ಬಿಸಿ

ಎಐಬಿಇ ಪರೀಕ್ಷೆಯಲ್ಲಿ ಉತ್ತೀರ್ಣನಾದ ಬಳಿಕ ಯಾವುದೇ ನ್ಯಾಯಾಲಯದಲ್ಲಿ ಸದರಿ ವಕೀಲರು ಪ್ರಾಕ್ಟೀಸ್‌ ಮಾಡಲು ಅರ್ಹರಾಗಿರುತ್ತಾರೆ. ತಾವು ವಕೀಲರಾಗಿ ನೋಂದಣಿ ಮಾಡಿಸಿಕೊಂಡ ಎರಡು ವರ್ಷಗಳ ಒಳಗೆ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.
KSBC
KSBC

ಅಖಿಲ ಭಾರತ ವಕೀಲರ ಪರೀಕ್ಷೆ (ಎಐಬಿಇ) ಪಾಸಾಗದ ವಕೀಲರು ವಕೀಲರ ಧಿರಿಸು ಹಾಕುವಂತಿಲ್ಲ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಪ್ರಕಟಣೆಯಲ್ಲಿ ತಿಳಿಸಿದೆ.

2010ರ ಜುಲೈ 14ರ ನಂತರ ಅಥವಾ ಅದಕ್ಕೂ ಮುಂಚೆ ಕಾನೂನು ಪದವಿ ಪಡೆದಿರುವವರಿಗೆ ಭಾರತೀಯ ವಕೀಲರ ಪರಿಷತ್‌ (ಬಿಸಿಐ) ಎಐಬಿಇ ಪರೀಕ್ಷೆ ಪರಿಚಯಿಸಿದೆ. ಎಐಬಿಇ ಪರೀಕ್ಷೆಯಲ್ಲಿ ಉತ್ತೀರ್ಣನಾದ ಬಳಿಕ ಯಾವುದೇ ನ್ಯಾಯಾಲಯದಲ್ಲಿ ಸದರಿ ವಕೀಲ ಪ್ರಾಕ್ಟೀಸ್‌ ಮಾಡಲು ಅರ್ಹರಾಗಿರುತ್ತಾರೆ. ತಾವು ವಕೀಲರಾಗಿ ನೋಂದಣಿ ಮಾಡಿಸಿಕೊಂಡ ಎರಡು ವರ್ಷಗಳ ಒಳಗೆ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂದು ತಿಳಿಸಲಾಗಿದೆ.

ನೋಂದಣಿಯಾಗಿ ಎರಡು ವರ್ಷ ಪೂರ್ಣಗೊಂಡಿದ್ದರೂ ಕೆಲವು ವಕೀಲರು ಎಐಬಿಇ ಪರೀಕ್ಷೆ ಪಾಸು ಮಾಡದೇ ವಕೀಲರ ಧಿರಿಸು ಹಾಕಿಕೊಂಡು ನ್ಯಾಯಾಲಯದ ಮುಂದೆ ಹಾಜರಾಗುತ್ತಿದ್ದಾರೆ ಎಂಬ ವಿಚಾರ ಕೆಎಸ್‌ಬಿಸಿ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಎಐಬಿಇ ಪೂರ್ಣಗೊಳಿಸದೇ ವಕಾಲತ್ತು ಹಾಕಿದ್ದ ಯಲಬುರ್ಗಾದ ವಕೀಲ ಆನಂದ್‌ ಎ. ಉಳ್ಳಾಗಡ್ಡಿ ಅವರ ಸನ್ನದನ್ನು ಈಗಾಗಲೇ ಕೆಎಸ್‌ಬಿಸಿ ಅಮಾನತುಗೊಳಿಸಿದೆ. ಹೀಗಾಗಿ, 2010ರ ಜುಲೈ 14ರ ನಂತರ ಕಾನೂನು ಪದವಿ ಪಡೆದಿರುವ ವಕೀಲರು, ನೋಂದಣಿಯಾಗಿ ಎರಡು ವರ್ಷವಾದರೂ ಎಐಬಿಇ ಪೂರ್ಣಗೊಳಿಸದಿದ್ದರೆ ಅಂಥವರು ವಕೀಲರ ಧಿರಿಸು ಹಾಕುವಂತಿಲ್ಲ ಅಥವಾ ಯಾವುದೇ ನ್ಯಾಯಾಲಯದಲ್ಲಿ ವಕಾಲತ್ತು ಸಲ್ಲಿಸುವಂತಿಲ್ಲ. ಈ ನಿಯಮ ಉಲ್ಲಂಘಿಸಿರುವುದು ಗಮನಕ್ಕೆ ಬಂದರೆ ಅಂಥ ವಕೀಲರ ಸನ್ನದು ಅಮಾನತು ಮಾಡಿ, ವಕೀಲರ ಕಾಯಿದೆ ಅಡಿ ಯಾವುದೇ ವಿನಾಯಿತಿ ಇಲ್ಲದೇ ಕ್ರಮಕೈಗೊಳ್ಳಲಾಗುವುದು ಎಂದು ವಿವರಿಸಲಾಗಿದೆ.

ಎಐಬಿಇ ಪೂರ್ಣಗೊಳಿಸಿ, ಪ್ರಾಕ್ಟೀಸ್‌ ಪ್ರಮಾಣಪತ್ರ ಪಡೆಯದ ವಕೀಲರಿಗೆ ರಾಜ್ಯದ ಯಾವುದೇ ವಕೀಲರ ಸಂಘ ಸದಸ್ಯತ್ವ ನೀಡಬಾರದು. ಎಐಬಿಇ ಪೂರ್ಣಗೊಳಿಸದೇ ಪ್ರಾಕ್ಟೀಸ್‌ ಮಾಡುತ್ತಿದ್ದರೆ ಅದನ್ನು ಕೆಎಸ್‌ಬಿಸಿಗೆ ಸೂಕ್ತ ದಾಖಲೆಗಳೊಂದಿಗೆ ತಿಳಿಸಬೇಕು. ಈ ಸಂಬಂಧ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com