ಸಂಬಂಧ ಪರೀಕ್ಷೆ ಜಾತಿ ಸಿಂಧುತ್ವದ ಹಕ್ಕನ್ನು ನಿರ್ಧರಿಸುವ ನಿರ್ಣಾಯಕ ಅಂಶವಲ್ಲ: ಸುಪ್ರೀಂ ಕೋರ್ಟ್

ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ವ್ಯಕ್ತಿಗೆ ಸಂಬಂಧ ಪರೀಕ್ಷೆಯಲ್ಲಿ ಬಳಸಲಾಗುವ ಪದ್ಧತಿ, ಆಚರಣೆಗಳ ಬಗ್ಗೆ ತಿಳಿದಿರುವುದಿಲ್ಲ ಎಂದಿದೆ ನ್ಯಾಯಾಲಯ.
Justice Abhay S Oka, Justice Sanjay Kaul, and Justice Manoj Misra
Justice Abhay S Oka, Justice Sanjay Kaul, and Justice Manoj Misra

ಸಂಬಂಧ ಪರೀಕ್ಷೆ ಎಂಬುದು ಜಾತಿ ಸಿಂಧುತ್ವದ ಹಕ್ಕನ್ನು ನಿರ್ಧರಿಸುವ ನಿರ್ಣಾಯಕ ಪರೀಕ್ಷೆಯಲ್ಲ ಮತ್ತು ಜಾತಿ/ಪಂಗಡದ ಹಕ್ಕುಗಳ ಪರಿಶೀಲನಾ ಪ್ರಕ್ರಿಯೆಯ ಅತ್ಯಗತ್ಯ ಭಾಗವಲ್ಲ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ತೀರ್ಪು ನೀಡಿದೆ. [ಮಹಾ ಆದಿವಾಸಿ ಠಾಕೂರ್ ಜಮಾತ್ ಸ್ವರಕ್ಷಣ ಸಮಿತಿ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ಸಂಬಂಧ ಪರೀಕ್ಷೆಯಲ್ಲಿ, ಅರ್ಹ ಅಧಿಕಾರಿಯಿಂದ ಜಾತಿ ಪ್ರಮಾಣ ಪತ್ರ ಪಡೆದ ಅಭ್ಯರ್ಥಿಗೆ ನಿರ್ದಿಷ್ಟ ಜಾತಿ/ಪಂಗಡದ ಬಗ್ಗೆ ತಿಳಿದಿದೆಯೇ ಎಂದು ಖಚಿತಪಡಿಸಿಕೊಳ್ಳಲು ಆತನ ಜಾತಿಯ ಮಾನಶಾಸ್ತ್ರೀಯ ಲಕ್ಷಣಗಳು, ದೇವತೆಗಳು, ಆಚರಣೆಗಳು, ಪದ್ಧತಿಗಳು, ಮದುವೆಯ ವಿಧಾನ, ಮರಣ ಸಮಾರಂಭಗಳು, ಮೃತ ದೇಹಗಳನ್ನು ವಿಲೇವಾರಿ ಮಾಡುವ ವಿಧಾನ ಇತ್ಯಾದಿಗಳ ಬಗ್ಗೆ ಪರೀಕ್ಷೆ ನಡೆಸಲಾಗುತ್ತದೆ.

ನಗರ ಪ್ರದೇಶದಲ್ಲಿ  ವಾಸಿಸುತ್ತಿರುವ ವ್ಯಕ್ತಿಗೆ ಸಂಬಂಧ ಪರೀಕ್ಷೆಯಲ್ಲಿ ಬಳಸಲಾಗುವ ಪದ್ಧತಿ, ಆಚರಣೆಗಳ ಬಗ್ಗೆ ತಿಳಿದಿರುವುದಿಲ್ಲ ಎಂದು  ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಅಭಯ್ ಎಸ್ ಓಕಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ತಿಳಿಸಿದೆ.

“ವಿಚಕ್ಷಣಾ ಕೋಶ, ಸಂಬಂಧ ಪರೀಕ್ಷೆಯನ್ನು ನಡೆಸುವಾಗ, ನಿರ್ದಿಷ್ಟ ಸಮುದಾಯಕ್ಕೆ ಸಂಬಂಧಿಸಿದ  ಸಮುದಾಯ ದೇವತೆಗಳು, ಸಂಪ್ರದಾಯ, ಆಚರಣೆ, ಮದುವೆಯ ವಿಧಾನ, ಮರಣ ಸಮಾರಂಭಗಳು ಇತ್ಯಾದಿಗಳ ಬಗ್ಗೆ ಅರ್ಜಿದಾರರಿಗೆ ಇರುವ ತಿಳಿವಳಿಕೆಯನ್ನು ಪರೀಕ್ಷಿಸುತ್ತದೆ. ಪರೀಕ್ಷೆಯ ಸ್ವರೂಪವೇ ಹೇಳುವಂತೆ ಅಂತಹ ಸಂಬಂಧ ಪರೀಕ್ಷೆ ಎಂದಿಗೂ ನಿರ್ಣಾಯಕವಾಗುವುದಿಲ್ಲ. ಅರ್ಜಿದಾರರು ತಮ್ಮ ಕುಟುಂಬದೊಂದಿಗೆ ದೊಡ್ಡ ನಗರ ಪ್ರದೇಶಗಳಲ್ಲಿ ದಶಕಗಳಿಂದ ವಾಸಿಸುತ್ತಿದ್ದರೆ ಅಥವಾ ಅವರ ಕುಟುಂಬವು ಅಂತಹ ನಗರ ಪ್ರದೇಶಗಳಲ್ಲಿ ದಶಕಗಳಿಂದ ವಾಸ ಮಾಡುತ್ತಿದ್ದರೆ, ಅರ್ಜಿದಾರರಿಗೆ ಅಂತಹ ಸಂಗತಿಗಳ ಬಗ್ಗೆ ಜ್ಞಾನವಿಲ್ಲದಿರಬಹುದು. ವಿಚಕ್ಷಣಾ ಕೋಶ ಅರ್ಜಿದಾರರ ಪೋಷಕರನ್ನು ಕೂಡ ಪ್ರಶ್ನಿಸಬಹುದಾದರೂ ಒಂದು ನಿರ್ದಿಷ್ಟ ಪ್ರಕರಣದಲ್ಲಿ, ಹಲವಾರು ವರ್ಷಗಳಿಂದ ಅವರು ದೊಡ್ಡ ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದರೆ ಆ ಬಗ್ಗೆ ಪೋಷಕರಿಗೆ ಸಹ ತಿಳಿದಿರುವುದಿಲ್ಲ. ಮತ್ತೊಂದೆಡೆ, ಒಬ್ಬ ವ್ಯಕ್ತಿಯು ನಿರ್ದಿಷ್ಟ ಬುಡಕಟ್ಟಿಗೆ ಸೇರದೆಯೂ,  ಅವನಿಗೆ ಮೇಲೆ ಹೇಳಿದ ಅಂಶಗಳ ಬಗ್ಗೆ ಉತ್ತಮ ಜ್ಞಾನ ಇರುವ ಸಾಧ್ಯತೆಗಳಿವೆ ”ಎಂದು ನ್ಯಾಯಾಲಯ ಹೇಳಿದೆ.

ಆದ್ದರಿಂದ, ಜಾತಿ ಅಥವಾ ಪಂಗಡದ ಹಕ್ಕುಗಳ ಸಿಂಧುತ್ವವನ್ನು ನಿರ್ಧರಿಸಲು ಅಂತಹ ಪರೀಕ್ಷೆಯ ಫಲಿತಾಂಶವನ್ನು ದಾಖಲೆಯಲ್ಲಿರುವ ಇತರ ಎಲ್ಲಾ ಸಾಕ್ಷಿಗಳ ಜೊತೆಗೆ ಅಂಶೀಕರಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

“ಸಂಬಂಧ ಪರೀಕ್ಷೆ ಎಂಬುದು ಜಾತಿಯನ್ನು ನಿರ್ಧರಿಸುವ ನಿರ್ಣಾಯಕ ಪರೀಕ್ಷೆಯಲ್ಲ. ಪ್ರತಿ ಪ್ರಕರಣದಲ್ಲಿ ಜಾತಿ ಅಥವಾ ಬುಡಕಟ್ಟು ಹಕ್ಕುಗಳ ಸೂಕ್ತ ನಿರ್ಣಯ ಮಾಡುವಾಗ ಇದು ಅತ್ಯಗತ್ಯ ಭಾಗ ಆಗುವುದಿಲ್ಲ” ಎಂದು ನ್ಯಾಯಾಲಯ ನುಡಿದಿದೆ.

ಸಂಬಂಧ ಪರೀಕ್ಷೆ ನಿರ್ಣಾಯಕವಾಗಿರಲು ಸಾಧ್ಯವಿಲ್ಲ ಮತ್ತು ಸಂಬಂಧ ಪರೀಕ್ಷೆ ನಡೆಸಿದಾಗ, ಜಾತಿ ಸಿಂಧುತ್ವವನ್ನು ನಿರ್ಧರಿಸಲು ಪರೀಕ್ಷೆಯ ಫಲಿತಾಂಶದ ಜೊತೆಗೆ ಉಳಿದೆಲ್ಲಾ ದಾಖಲೆಗಳ ಪರೀಕ್ಷಾ ಮೌಲ್ಯವನ್ನು ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಮಹಾರಾಷ್ಟ್ರ ಸರ್ಕಾರ ಕೆಲವು ನಿಯಮಾವಳಿಗಳ ಮೂಲಕ ಸಂಬಂಧ ಪರೀಕ್ಷೆಗಾಗಿ ವಿಚಕ್ಷಣಾ ಕೋಶ ರಚಿಸಿತ್ತು. ಪರಿಶಿಷ್ಟ ಜಾತಿ ನಿಯಮಾವಳಿಗಳಡಿ ಕೋಶ ರೂಪುಗೊಂಡಿದೆಯೋ ಅಥವಾ ಪರಿಶಿಷ್ಟ ಪಂಗಡಗಳ ನಿಯಮಾವಳಿಗಳಡಿ ರೂಪುಗೊಂಡಿದೆಯೋ ಎಂಬ ಗೊಂದಲಗಳಿದ್ದವು. ಇತ್ತ ಸುಪ್ರೀಂ ಕೋರ್ಟ್‌ ಪ್ರಕರಣವೊಂದರಲ್ಲಿ ಸಂಬಂಧ ಪರೀಕ್ಷೆ ಅತ್ಯಗತ್ಯ ಅಂಶ ಎಂದು ಹೇಳಿತ್ತು ಮತ್ತೊಂದು ಪ್ರಕರಣದಲ್ಲಿ ಅಂತಹ ಪರೀಕ್ಷೆ ನಿರ್ಣಾಯಕ ಅಂಶವಲ್ಲ ಎಂದು ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಲಾಗಿತ್ತು.

Related Stories

No stories found.
Kannada Bar & Bench
kannada.barandbench.com