
ʼಪಂಚಾಯತ್ ಸದಸ್ಯರೇ ರಾಜೀನಾಮೆ ನೀಡಿ ಇಲ್ಲವೇ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕುವ ಪೋಸ್ಟರ್ ಅಂಟಿಸಿದ್ದ ವ್ಯಕ್ತಿಯನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿ ವ್ಯಕ್ತಿಯೊಬ್ಬರನ್ನು ಖುಲಾಸೆಗೊಳಿಸಿದ್ದ ಆದೇಶವನ್ನು ಜಮ್ಮು, ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ಈಚೆಗೆ ಎತ್ತಿಹಿಡಿದಿದೆ [ಶ್ರೀಗುಫ್ವಾರಾ ಪೊಲೀಸ್ ಠಾಣಾಧಿಕಾರಿ ಮೂಲಕ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಸರ್ಕಾರ ಮತ್ತು ಜಿ ಎಚ್ ಮೊಹಮ್ಮದ್ ಲೋನ್ ನಡುವಣ ಪ್ರಕರಣ]
ಇಂತಹ ಕೃತ್ಯ ಯುಎಪಿಎ ಸೆಕ್ಷನ್ 13ರ ಅಡಿಯಲ್ಲಿ ʼಕಾನೂನುಬಾಹಿರ ಚಟುವಟಿಕೆʼ ಎನಿಸಿಕೊಳ್ಳುವುದಿಲ್ಲ. ಹೀಗಾಗಿ ಕಳೆದ ವರ್ಷ ಅನಂತ್ನಾಗ್ನ ಎನ್ಐಎ ನ್ಯಾಯಾಲಯ ನೀಡಿದ್ದ ಖುಲಾಸೆ ಆದೇಶ ಪ್ರಶ್ನಿಸಿ ಕಾಶ್ಮೀರ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಸಂಜೀವ್ ಕುಮಾರ್ ಮತ್ತು ಸಂಜಯ್ ಪರಿಹಾರ್ ಅವರಿದ್ದ ವಿಭಾಗೀಯ ಪೀಠ ವಜಾಗೊಳಿಸಿದೆ.
“ಪೋಸ್ಟರ್‌ಗಳಲ್ಲಿನ ಬರಹಗಳು ಚುನಾಯಿತ ಪಂಚಾಯತ್ ಸದಸ್ಯರನ್ನು ಗುರಿಯಾಗಿಸಿಕೊಂಡು ಬೆದರಿಸುವ ಉದ್ದೇಶ ಹೊಂದಿದ್ದವು ಮತ್ತು ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡದಿದ್ದರೆ ಅವರನ್ನು ತೆಗೆದುಹಾಕಲಾಗುವುದು ಎಂದು ಬೆದರಿಕೆ ಹಾಕುವ ಮೂಲಕ ಅವರನ್ನು ಬೆದರಿಸುವ ಉದ್ದೇಶ ಹೊಂದಿದ್ದವು. ಅಂತಹ ಲಿಖಿತ ಪದಗಳು ಭಾರತದ ಭೂಪ್ರದೇಶದ ಒಂದು ಭಾಗವನ್ನು ಒಕ್ಕೂಟದಿಂದ ಬಿಟ್ಟುಕೊಡುವ ಉದ್ದೇಶವನ್ನು ಹೊಂದಿವೆ ಎಂದು ಹೇಳಲಾಗದು ಅಥವಾ ಅವು ಭಾರತದ ಯಾವುದೇ ಸಾರ್ವಭೌಮ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ನಿರಾಕರಿಸುವುದಿಲ್ಲ, ಪ್ರಶ್ನಿಸುವುದಿಲ್ಲ, ಅಡ್ಡಿಪಡಿಸುವುದಿಲ್ಲ ಅಥವಾ ಅಡ್ಡಿಪಡಿಸುವ ಉದ್ದೇಶ ಹೊಂದಿಲ್ಲ. ಈ ಪದಗಳು ಭಾರತದ ವಿರುದ್ಧ ದಂಗೆ ಏಳುವಂತೆ ಮಾಡುತ್ತವೆ ಎಂದು ಅರ್ಥೈಸಿಕೊಳ್ಳಲಾಗುವುದಿಲ್ಲ. ʼಕಾನೂನುಬಾಹಿರ ಚಟುವಟಿಕೆಗಳುʼ ಎಂಬ ಪದದ ಸರಳ ವ್ಯಾಖ್ಯಾನದ ಪ್ರಕಾರ, ಪ್ರತಿವಾದಿಯ ಮೇಲೆ ಆರೋಪಿಸಿದ ಕೃತ್ಯ ಕಾಯಿದೆಯ ಸೆಕ್ಷನ್ 2(o) ಅಡಿಯಲ್ಲಿ "ಕಾನೂನುಬಾಹಿರ ಚಟುವಟಿಕೆ" ಎಂಬ ಪದದ ವ್ಯಾಪ್ತಿಗೆ ಬರುವುದಿಲ್ಲ" ಎಂದು ನ್ಯಾಯಾಲಯ ಹೇಳಿದೆ.
ನಿಷೇಧಿತ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಪರವಾಗಿ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ ಎಂಬ ಮಾಹಿತಿಯ ಆಧಾರದ ಮೇಲೆ ಪೊಲೀಸರು 2012ರಲ್ಲಿ ಆರೋಪಿ ಗುಲಾಮ್ ಮೊಹಮ್ಮದ್ ಲೋನ್ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಆದರೆ, ಆರೋಪಿಯನ್ನು ಆಪಾದಿತ ಅಪರಾಧದೊಂದಿಗೆ ನಂಟು ಕಲ್ಪಿಸುವಲ್ಲಿ ಪ್ರಾಸಿಕ್ಯೂಷನ್ ಶೋಚನೀಯವಾಗಿ ವಿಫಲವಾಗಿದೆ ಎಂದು 2024ರಲ್ಲಿ ವಿಚಾರಣಾ ನ್ಯಾಯಾಲಯ ತೀರ್ಪು ನೀಡಿತ್ತು. ಈ ತೀರ್ಪನ್ನುಇದೀಗ ಹೈಕೋರ್ಟ್ ಎತ್ತಿಹಿಡಿದಿದೆ.
[ತೀರ್ಪಿನ ಪ್ರತಿ]