ರಕ್ಷಣಾ ಸಚಿವಾಲಯದ ಒತ್ತಡದಿಂದ ನ್ಯಾಯಮೂರ್ತಿ ವರ್ಗ: ಸಿಜೆಐಗೆ ಪತ್ರ ಬರೆದ ಚೆನ್ನೈ ಎಎಫ್‌ಟಿ ವಕೀಲರ ಸಂಘ

ಈ ಕ್ರಮ ನ್ಯಾಯಾಂಗ ಸ್ವಾತಂತ್ರ್ಯವನ್ನು ಹಾಳುಮಾಡುತ್ತದೆ ಎಂದು ಸಂಘ ಸೆಪ್ಟೆಂಬರ್ 27ರಂದು ಬರೆದ ಪತ್ರದಲ್ಲಿ ತಿಳಿಸಿದೆ. ಜಮ್ಮು, ಲಖನೌ, ಪಂಚಕುಲ, ಕುರುಕ್ಷೇತ್ರ ಸೇರಿದಂತೆ ವಿವಿಧ ವಕೀಲರ ಸಂಘಗಳೂ ಇದೇ ಬಗೆಯ ಕಳವಳ ವ್ಯಕ್ತಪಡಿಸಿದ್ದವು.
Black day For Judiciary
Black day For Judiciary
Published on

ಚಂಡಿಗಢದ ಸಶಸ್ತ್ರ ಪಡೆಗಳ ನ್ಯಾಯಮಂಡಳಿಯ (ಎಎಫ್‌ಟಿ) ನ್ಯಾಯಾಂಗ ಸದಸ್ಯ ನ್ಯಾಯಮೂರ್ತಿ ಧರಂ ಚಂದ್ ಚೌಧರಿ ಅವರನ್ನು ಚಂಡಿಗಢದಿಂದ ಕೋಲ್ಕತ್ತಾದ ಎಎಫ್‌ಟಿ ಪೀಠಕ್ಕೆ ವರ್ಗಾಯಿಸಿರುವುದಕ್ಕೆ ಚೆನ್ನೈ ಎಎಫ್‌ಟಿ ವಕೀಲರ ಸಂಘ ವಿರೋಧ ವ್ಯಕ್ತಪಡಿಸಿದೆ.

ನ್ಯಾಯಮೂರ್ತಿ ಚೌಧರಿ ಅವರನ್ನು ವರ್ಗಾವಣೆ ಮಾಡುವ ಎಎಫ್‌ಟಿ ಅಧ್ಯಕ್ಷರ ನಿರ್ಧಾರದ ಬಗ್ಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರಿಗೆ ಬರೆದಿರುವ ಪತ್ರದಲ್ಲಿ ಸಂಘ ಆಘಾತ ವ್ಯಕ್ತಪಡಿಸಿದೆ.

Also Read
ಅತೀಕ್ ಅಹಮದ್‌ ಹತ್ಯೆ: ಪೊಲೀಸರ ತಪ್ಪಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಉತ್ತರ ಪ್ರದೇಶ ಸರ್ಕಾರದ ವಿವರಣೆ

ನಿರ್ಧಾರವನ್ನು ಖಂಡಿಸಿರುವ ಅದು ಈ ಕ್ರಮ ಕೇಂದ್ರ ರಕ್ಷಣಾ ಸಚಿವಾಲಯ ನಡೆಸಿರುವ ದಾಳಿಯಾಗಿದ್ದು ಎಎಫ್‌ಟಿಯ ನ್ಯಾಯಾಂಗ ಕಾರ್ಯಗಳಲ್ಲಿ ನಡೆಸಿರುವ ಹಸ್ತಕ್ಷೇಪ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಇದು ನ್ಯಾಯಾಂಗ  ಸ್ವಾತಂತ್ರ್ಯಕ್ಕೆ ನೇರವಾಗಿ ಧಕ್ಕೆ ಉಂಟುಮಾಡುತ್ತದೆ. ವರ್ಗಾವಣೆ ನಿರ್ಧಾರದಿಂದ ಹೆಚ್ಚು ನೊಂದಿದ್ದೇವೆ. ವರ್ಗಾವಣೆ ಆದೇಶ ಪಾಲಿಸಲು 12 ಗಂಟೆಗಳಿಗಿಂತಲೂ ಕಡಿಮೆ ಸಮಯ ನೀಡಲಾಗಿದೆ ಎಂದು ಸಂಘದ ಸದಸ್ಯರು ಆರೋಪಿಸಿದ್ದಾರೆ.

ಚಂಡಿಗಢ ಎಎಫ್‌ಟಿಯ ಮೂವರು ನ್ಯಾಯಾಂಗ ಸದಸ್ಯರು ಮತ್ತು ಪೀಠದ ಎಲ್ಲಾ ಜಾರಿ ಅರ್ಜಿಗಳನ್ನು ಸ್ವಪ್ರೇರಿತವಾಗಿ ಎಎಫ್‌ಟಿ ಪ್ರಧಾನ ಪೀಠಕ್ಕೆ ವರ್ಗಾಯಿಸಿರುವ ಬಗ್ಗೆ ಸಂಘ ಕಳವಳ ವ್ಯಕ್ತಪಡಿಸಿದೆ.

ಪ್ರಕರಣವನ್ನು ಪರಿಶೀಲಿಸಬೇಕು ಮತ್ತು ಸಶಸ್ತ್ರ ಪಡೆಗಳ ಸೈನಿಕರು ಮತ್ತು ಅವರ ಅವಲಂಬಿತರಿಗೆ ತಪ್ಪು ಸಂದೇಶ ರವಾನೆಯಾಗದಂತೆ ನೋಡಿಕೊಳ್ಳಬೇಕು ಎಂದು ಅದು ಸಿಜೆಐ ಅವರನ್ನು ಒತ್ತಾಯಿಸಿದೆ.

Also Read
ರಕ್ಷಣಾ ಸಚಿವಾಲಯದ ಒತ್ತಡದಿಂದ ನ್ಯಾಯಮೂರ್ತಿ ವರ್ಗ: ಕೆಲಸಕ್ಕೆ ಗೈರಾದ ಚಂಡಿಗಢದ ಸಶಸ್ತ್ರ ಪಡೆ ನ್ಯಾಯಮಂಡಳಿ ವಕೀಲರ ಸಂಘ

ಕೆಲ ದಿನಗಳ ಹಿಂದೆ ನ್ಯಾ. ಧರಂ ಚಂದ್‌ ಚೌಧರಿ ಅವರನ್ನು ʼಸಾರ್ವಜನಿಕ ಹಿತಾಸಕ್ತಿಗಾಗಿ ಆಡಳಿತಾತ್ಮಕ ಕಾರಣಗಳಿಗಾಗಿʼ ನ್ಯಾಯಮಂಡಳಿಯ ಚಂಡಿಗಢ ಪೀಠದಿಂದ ಕೋಲ್ಕತ್ತಾ ಪೀಠಕ್ಕೆ ವರ್ಗಾವಣೆ ಮಾಡಲಾಗಿತ್ತು. ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳ ವಿರುದ್ಧ ಅವರು ಜಾರಿ ಮಾಡಿದ ಕಠಿಣ ಆದೇಶಗಳ ಪರಿಣಾಮ ಅವರನ್ನು ವರ್ಗ ಮಾಡಲಾಗಿದೆ ಎಂಬ ದೂರುಗಳು ಕೇಳಿಬಂದಿದ್ದವು.

ಚಂಡಿಗಢ ಎಎಫ್‌ಟಿ ವಕೀಲರ ಸಂಘ ಈ ಸಂಬಂಧ ಸೆಪ್ಟೆಂಬರ್ 25 ರಂದು ಸಿಜೆಐ ಅವರಿಗೆ ಪತ್ರ ಬರೆದು ವರ್ಗಾವಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಅದೇ ದಿನ ಅನಿರ್ದಿಷ್ಟಾವಧಿಯವರೆಗೆ ಕೆಲಸದಿಂದ ದೂರ ಉಳಿಯಲು ನಿರ್ಧರಿಸಿತ್ತು. ಜಮ್ಮು, ಲಖನೌ, ಪಂಚಕುಲ,  ಕುರುಕ್ಷೇತ್ರ ಮತ್ತು ಹರಿಯಾಣದಲ್ಲಿನ ವೆಟರನ್ ಏರ್ ವಾರಿಯರ್ ಸೇರಿದಂತೆ ವಿವಿಧ ವಕೀಲರ ಸಂಘಗಳೂ ನ್ಯಾಯಾಧೀಶರ ವರ್ಗಾವಣೆಗೆ ವಿರೋಧ ವ್ಯಕ್ತಪಡಿಸಿದ್ದವು.

Kannada Bar & Bench
kannada.barandbench.com