

ಐಸಿಸಿ ಕ್ರಿಕೆಟ್ ವಿಶ್ವಕಪ್ ಜಾಹೀರಾತು ಮತ್ತು ಪ್ರಚಾರ ಹಕ್ಕುಗಳಿಗಾಗಿ ಎಲ್‌ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ ಮಾಡಿದ ಪ್ರಾಯೋಜಕತ್ವ ಪಾವತಿಯ ಒಂದು ಭಾಗದ ಮೇಲೆ ಜಮಾ ತೆರಿಗೆ ವಿಧಿಸಿ (ಪಾವತಿ ಮಾಡುವಾಗಲೇ ನಿರ್ದಿಷ್ಟ ಪ್ರಮಾಣದ ತೆರಿಗೆಯನ್ನು ಕಡಿತ ಮಾಡಿ, ಆ ಮೊತ್ತವನ್ನು ಸರ್ಕಾರಕ್ಕೆ ಜಮಾ ಮಾಡುವ ವಿಧಾನ) ಆದಾಯ ತೆರಿಗೆ ಇಲಾಖೆ ಕೈಗೊಂಡಿದ್ದ ನಿರ್ಧಾರವನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿದಿದೆ [ಎಲ್‌ಜಿ ಎಲೆಕ್ಟ್ರಾನಿಕ್ಸ್ ಮತ್ತು ಆದಾಯ ತೆರಿಗೆ ಇಲಾಖೆ ನಡುವಣ ಪ್ರಕರಣ]
ಎಲ್‌ಜಿ ಪಾವತಿಸಿದ 1.1 ಕೋಟಿ ಅಮೆರಿಕ ಡಾಲರ್ ಮೊತ್ತದ ಮೂರನೇ ಒಂದು ಭಾಗ ಐಸಿಸಿ ವಾಣಿಜ್ಯ ಚಿಹ್ನೆ ಬಳಸುವ ಹಕ್ಕಿಗಾಗಿ ನೀಡಿದ ರಾಯಧನವಾಗಿದ್ದು ಅದು ಆದಾಯ ತೆರಿಗೆ ಕಾಯಿದೆ 1961 ಮತ್ತು ಭಾರತ–ಸಿಂಗಾಪುರ ದ್ವಿತೀಯ ತೆರಿಗೆ ಮಾಫಿ ಒಪ್ಪಂದ (ಡಿಟಿಎಎ) ಅಡಿಯಲ್ಲಿ ಭಾರತದಲ್ಲಿ ತೆರಿಗೆಯೋಗ್ಯ ಎಂದು ನ್ಯಾಯಮೂರ್ತಿಗಳಾದ ವಿ ಕಾಮೇಶ್ವರ ರಾವ್ ಮತ್ತು ವಿನೋದ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ ತೀರ್ಪು ನೀಡಿದೆ.
"ಐಸಿಸಿ ವಾಣಿಜ್ಯ ಚಿಹ್ನೆ ಬಳಕೆ ಮಾಡಿರುವುದನ್ನು ಅರ್ಜಿದಾರರೇ ಒಪ್ಪಿಕೊಂಡಿರುವಾಗ, ಅಂತಹ ಬಳಕೆಯನ್ನು ಪ್ರಾಸಂಗಿಕ ಎಂದು ಸರಳೀಕರಿಸುವ ಯತ್ನ ಸಮರ್ಥನೀಯವಲ್ಲ. ವಾಸ್ತವವಾಗಿ, 12.05.2003ರಂದು ಜಿಸಿಸಿ (ಗ್ಲೋಬಲ್ ಕ್ರಿಕೆಟ್ ಕಾರ್ಪೊರೇಷನ್) ಅರ್ಜಿದಾರರಿಗೆ ಬರೆದ ಪತ್ರದ ಮೇಲೆ ಅರ್ಜಿದಾರರು ಅವಲಂಬಿಸಿರುವುದು—1.1 ಕೋಟಿ ಅಮೆರಿಕ ಡಾಲರ್ ಮೊತ್ತದಿಂದ ಐಸಿಸಿ ವಾಣಿಜ್ಯ ಚಿಹ್ನೆ ಬಳಕೆಗೆ 1000 ಅಮೆರಿಕನ್ ಡಾಲರ್ ಹಂಚಿಕೆ ಮಾಡಿರುವುದನ್ನು ಸಮರ್ಥಿಸುವುದು—ಆ ಚಿಹ್ನೆಯನ್ನು ವಾಣಿಜ್ಯ ಚಿಹ್ನೆಯಾಗಿಯೇ ಬಳಸಲಾಗಿದೆ ಎಂಬುದನ್ನು ತೋರಿಸುತ್ತದೆ" ಎಂದು ನ್ಯಾಯಾಲಯ ಹೇಳಿದೆ.
ವ್ಯಾಜ್ಯ 2004ರಲ್ಲಿ ಮೂಡಿದ್ದು 21 ವರ್ಷಗಳ ನಂತರ ತೀರ್ಪು ಪ್ರಕಟವಾಗಿದೆ. ಎಲ್‌ಜಿ, ಒಪ್ಪಂದದ ಪ್ರಧಾನ ಉದ್ದೇಶ ಜಾಹೀರಾತು ಮತ್ತು ಬ್ರ್ಯಾಂಡ್ ತೋರ್ಪಡಿಸುವಿಕೆ ಮಾತ್ರವಾಗಿದ್ದು, ಐಸಿಸಿ ಚಿಹ್ನೆಯ ಬಳಕೆ ಕೇವಲ ಅನಿವಾರ್ಯ ಎಂದು ವಾದಿಸಿತು. ಆದರೆ ನ್ಯಾಯಾಲಯ ಈ ವಾದವನ್ನು ತಳ್ಳಿಹಾಕಿ, ಒಪ್ಪಂದವು ಎಲ್‌ಜಿಗೆ ಜಾಗತಿಕ ಮಟ್ಟದಲ್ಲಿ ಐಸಿಸಿ ಹಾಗೂ ಕಾರ್ಯಕ್ರಮದ ಚಿಹ್ನೆಯನ್ನು ಬಳಸುವ ಸಂಪೂರ್ಣ ಹಕ್ಕು ನೀಡುತ್ತದೆ. ಕೇವಲ ಸ್ಟೇಡಿಯಂಗ್ ಮಾತ್ರವೇ ಸೀಮಿತವಾಗಿ ಜಾಹೀರಾತು ನೀಡದೆ ಜಾಗತಿಕವಾಗಿ ಹಾಗೂ ಎಲ್ಲ ಪ್ರಕಾರಗಳ ಮಾಧ್ಯಮಗಳಲ್ಲಿ ಪ್ರಚಾರ ಕೈಗೊಳ್ಳುವ ರೀತಿಯಲ್ಲಿ ಒಪ್ಪಂದವಿದೆ ಎಂದು ಸ್ಪಷ್ಟಪಡಿಸಿತು.
2002ರ ಜೂನ್ 28ರಂದು ಎಲ್‌ಜಿ ಗುಂಪು ಮತ್ತು ಸಿಂಗಾಪುರ ಮೂಲದ ಗ್ಲೋಬಲ್ ಕ್ರಿಕೆಟ್ ಕಾರ್ಪೊರೇಷನ್ (GCC) ನಡುವೆ ನಡೆದ ಜಾಗತಿಕ ಪಾಲುದಾರಿಕೆ ಒಪ್ಪಂದ ಏರ್ಪಟ್ಟಿತ್ತು. ಜಿಸಿಸಿ ಸಂಸ್ಥೆ ಐಸಿಸಿಯಿಂದ ವಾಣಿಜ್ಯ ಹಕ್ಕುಗಳನ್ನು ಪಡೆದಿತ್ತು. ಈ ಒಪ್ಪಂದದ ಅಡಿಯಲ್ಲಿ, ಎಲ್‌ಜಿಯನ್ನು 2003ರ ದಕ್ಷಿಣ ಆಫ್ರಿಕಾದ ಹಾಗೂ 2007ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ಗಳಿಗೆ ಜಾಗತಿಕ ಪಾಲುದಾರನಾಗಿ ನೇಮಿಸಿತ್ತು. ಆ ಮೂಲಕ ಎಲ್‌ಜಿಗೆ ವ್ಯಾಪಕ ಜಾಹೀರಾತು ಮತ್ತು ಪ್ರಚಾರ ಹಕ್ಕು ಲಭ್ಯವಾಗಿದ್ದವು.
ಒಪ್ಪಂದದಂತೆ, ಎಲ್‌ಜಿ ಗುಂಪು ಜಿಸಿಸಿಗೆ ಒಟ್ಟು 2 ಕೋಟಿ 75 ಲಕ್ಷ ಅಮೆರಿಕನ್ ಡಾಲರ್ ಪಾವತಿಸಬೇಕಾಗಿದ್ದು, ಅದರಲ್ಲಿ 1.1 ಕೋಟಿ ಅಮೆರಿಕ ಡಾಲರ್ ಮೊತ್ತವನ್ನು ಎಲ್‌ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ ಭರಿಸಿತ್ತು. ಈ ಮೊತ್ತವನ್ನು ತೆರಿಗೆ ಕಡಿತವಿಲ್ಲದೆ ವಿದೇಶಕ್ಕೆ ಕಳುಹಿಸಲು ಎಲ್‌ಜಿ ಮನವಿ ಸಲ್ಲಿಸಿತ್ತು. ಆದರೆ ತೆರಿಗೆ ಅಧಿಕಾರಿಗಳು ಇದನ್ನು ರಾಯಧನ ಸ್ವರೂಪದ ಪಾವತಿ ಎಂದು ಹೇಳಿ ಮನವಿ ನಿರಾಕರಿಸಿದ್ದರು.
ತೆರಿಗೆ ಅಧಿಕಾರಿಗಳ ತರ್ಕ ಸಮಂಜಸವಾಗಿದೆ ಎಂದು ಹೇಳಿದ ದೆಹಲಿ ಹೈಕೋರ್ಟ್, ಎಲ್‌ಜಿ ಸಲ್ಲಿಸಿದ್ದ ರಿಟ್ ಅರ್ಜಿ ವಜಾಗೊಳಿಸಿ, ಪ್ರಾಯೋಜಕತ್ವ ಪಾವತಿಯ ಒಂದು ಭಾಗದ ಮೇಲೆ ತೆರಿಗೆ ವಿಧಿಸುವ ನಿರ್ಧಾರವನ್ನು ಎತ್ತಿಹಿಡಿದಿದೆ.