
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜೀವನವನ್ನು ಆಧರಿಸಿದ "ಅಜಯ್: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಎ ಯೋಗಿ" ಚಿತ್ರದ ಸೆನ್ಸಾರ್ ಪ್ರಮಾಣಪತ್ರ ಅರ್ಜಿಯನ್ನು ಸಿನೆಮಾಟೋಗ್ರಾಫ್ ಕಾಯ್ದೆ ಮತ್ತು ನಿಯಮಗಳಿಗೆ ಅನುಸಾರವಾಗಿ ಆಗಸ್ಟ್ 6 ರೊಳಗೆ ನಿರ್ಧರಿಸುವುದಾಗಿ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಶುಕ್ರವಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ.
'ದಿ ಮಾಂಕ್ ಹೂ ಬಿಕಮ್ ಚೀಫ್ ಮಿನಿಸ್ಟರ್' ಪುಸ್ತಕದಿಂದ ಪ್ರೇರಿತವಾದ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜೀವನವನ್ನು ಆಧರಿಸಿದ ಚಿತ್ರ ಇದಾಗಿದೆ. ಚಿತ್ರದ ನಿರ್ಮಾಪಕರಾದ ಸಾಮ್ರಾಟ್ ಸಿನಿಮ್ಯಾಟಿಕ್ಸ್ ಸಲ್ಲಿಸಿದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೆರೆ ಮತ್ತು ನೀಲಾ ಗೋಖಲೆ ಅವರ ಪೀಠವು ನಡೆಸಿತು.
ಚಲನಚಿತ್ರವು ಸಾಂವಿಧಾನಿಕ ಪ್ರಾಧಿಕಾರದ (ಮುಖ್ಯಮಂತ್ರಿ) ಕುರಿತಾದದ್ದಾಗಿದ್ದು, ಸಾರ್ವಜನಿಕ ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕಾಗಿ ಸಿಬಿಎಫ್‌ಸಿ ಚಲನಚಿತ್ರ ನಿರ್ಮಾಪಕರ ಸೆನ್ಸಾರ್ ಪ್ರಮಾಣೀಕರಣ ಅರ್ಜಿಯನ್ನು ತಿರಸ್ಕರಿಸಿದೆ ಎನ್ನುವ ಅಂಶವನ್ನು ಪೀಠವು ಗಮನಿಸಿತು. ಈ ವಿಚಾರವಾಗಿ ಅದು ಸೆನ್ಸಾರ್ ಮಂಡಳಿಯನ್ನು ಕಠಿಣ ಪ್ರಶ್ನೆಗಳಿಗೆ ಒಳಪಡಿಸಿತು.
"ನಾವು ಜುಲೈ 21ರ ದಿನಾಂಕದ ಪತ್ರವನ್ನು ಪರಿಶೀಲಿಸಿದ್ದೇವೆ. ಚಿತ್ರವನ್ನು ಸಿಬಿಎಫ್‌ಸಿ ವೀಕ್ಷಿಸಿಲ್ಲ. ಚಿತ್ರವು ಸಾಂವಿಧಾನಿಕ ಪ್ರಾಧಿಕಾರಕ್ಕೆ ಸಂಬಂಧಿಸಿದೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕಾಗಿ ಅರ್ಜಿಯನ್ನು ತಿರಸ್ಕರಿಸಲಾಗಿದೆ" ಎಂದು ನ್ಯಾಯಾಲಯವು ಅವಲೋಕಿಸಿತು.
ಇದಕ್ಕೂ ಮೊದಲು ಬೆಳಗಿವ ವಿಚಾರಣೆಯ ವೇಳೆ ಪೀಠವು, ಚಲನಚಿತ್ರವನ್ನು ವೀಕ್ಷಿಸದೆ ಪ್ರಮಾಣೀಕರಣ ವಿನಂತಿಯನ್ನು ತಿರಸ್ಕರಿಸಿದ್ದಕ್ಕಾಗಿ ಸಿಬಿಎಫ್‌ಸಿಯನ್ನು ತರಾಟೆಗೆ ತೆಗೆದುಕೊಂಡಿತು ಎರಡು ಕೆಲಸದ ದಿನಗಳ ಅವಧಿಯಲ್ಲಿ ಅರ್ಜಿಯನ್ನು ನಿರ್ಧರಿಸುವುದಾಗಿ ನ್ಯಾಯಾಲಯಕ್ಕೆ ಈ ಹಿಂದೆ ಸಿಬಿಎಫ್‌ಸಿ ಭರವಸೆ ನೀಡಿದ್ದನ್ನು ಉಲ್ಲಂಘಿಸಿರುವ ಬಗ್ಗೆ ಸಿಡಿಮಿಡಿಗೊಂಡಿತು.
"ನೀವು ನಮ್ಮ ಆದೇಶದ ಪ್ರಕಾರ ಮತ್ತು ನಿಯಮಗಳ ಪ್ರಕಾರ ಅರ್ಜಿಯನ್ನು ಪರಿಗಣಿಸಿಲ್ಲ. ನೀವು ಏನನ್ನೂ ಮಾಡಿಲ್ಲ. ಈ ಹಿಂದೆ ಕಳುಹಿಸಿದ್ದ ಇಮೇಲ್ ಅನ್ನೇ ಮತ್ತೆ ಅವರಿಗೆ ಕಳುಹಿಸಿದ್ದೀರಿ" ಎಂದು ಪೀಠ ಆಕ್ಷೇಪಿಸಿತು.
ಈ ವೇಳೆ ಸಿಬಿಎಫ್‌ಸಿ ಪರ ವಕೀಲರು ಚಿತ್ರದ ಸಂಭಾಷಣೆ ಮತ್ತು ಸ್ಕ್ರಿಪ್ಟ್ ಅನ್ನು ಪರಿಶೀಲಿಸಲಾಗಿದೆ ಎಂದು ವಾದಿಸಿದರು. ನ್ಯಾಯಾಲಯವು, "ತಿರಸ್ಕರಿಸಲು ಇದು ಮಾನದಂಡವೇ ಅಥವಾ ವಿವೇಚನೆಯನ್ನು ಬಳಸಬೇಕೆ? ಚಲನಚಿತ್ರವನ್ನು ನೋಡಲು ಆಕ್ಷೇಪಣೆಯಾದರೂ ಏನು? ಹಾಗೆ ಮಾಡಿದರೆ, ನೀವು ಅವರನ್ನು ಕಡಿತಗೊಳಿಸಲು ಕೇಳಬಹುದು. ಚಲನಚಿತ್ರವನ್ನು ನೋಡುವ ಮೊದಲು ನೀವು ಅರ್ಜಿಯನ್ನು ಹೇಗೆ ತಿರಸ್ಕರಿಸಬಹುದು?" ಎಂದು ತರಾಟೆಗೆ ತೆಗೆದುಕೊಂಡಿತು.
ಇದೇ ವೇಳೆ, ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ಚಲನಚಿತ್ರದ ಪ್ರಮಾಣೀಕರಣವನ್ನು ಯಾವ ಕಾನೂನು ನಿಬಂಧನೆಗಳು ನಿಷೇಧಿಸುತ್ತವೆ ಎಂದು ನ್ಯಾಯಾಲಯ ಪ್ರಶ್ನಿಸಿತು. ಮುಂದುವರೆದು, ಸೆನ್ಸಾರ್ ಪ್ರಮಾಣಪತ್ರವನ್ನು ತಿರಸ್ಕರಿಸುವ ವಿಚಾರದಲ್ಲಿ "ವಿವೇಚನೆ ಬಳಸಿರುವುದನ್ನು ತೋರಿಸಬೇಕು" ಎಂದು ಸ್ಪಷ್ಟಪಡಿಸಿತು.
ಅಂತಿಮವಾಗಿ ಸೆನ್ಸಾರ್ ಮಂಡಳಿಯು ಪ್ರಮಾಣಪತ್ರಕ್ಕಾಗಿ ಸಲ್ಲಿಸಿರುವ ಅರ್ಜಿಯನ್ನು ಆಗಸ್ಟ್ 6 ರೊಳಗೆ ನಿರ್ಧರಿಸುವುದಾಗಿ ತಿಳಿಸಿತು.