
ರಾಜಕೀಯ ಸಮಾವೇಶ, ಜಾತ್ರೆಗಳಲ್ಲಿ ಜನದಟ್ಟಣೆ ನಿರ್ವಹಣೆ ಸಮಸ್ಯೆಯಿಂದ ಉಂಟಾಗುವ ಸಾವು ನೋವುಗಳನ್ನು ತಪ್ಪಿಸಲು ಹಾಗೂ ಜನರನ್ನು ನಿಯಂತ್ರಿಸಲು ಮತ್ತು ಕಾರ್ಯಕ್ರಮ ಸಂಘಟಕರಿಗೆ ಹೊಣೆಗಾರಿಕೆ ತರಲು ರಾಜ್ಯ ಸರ್ಕಾರವು ʼಕರ್ನಾಟಕ ಜನಸಂದಣಿ ನಿಯಂತ್ರಣ (ಹೆಚ್ಚು ಜನರು ನೆರೆಯುವ ಸ್ಥಳ ಮತ್ತು ಸಮಾರಂಭದಲ್ಲಿ ಜನರ ನಿರ್ವಹಣೆ) ಮಸೂದೆ 2025ʼ ಜಾರಿಗೊಳಿಸಲು ಸಿದ್ಧತೆ ನಡೆಸಿದೆ.
ಐಪಿಎಲ್ ಟ್ರೋಫಿ ಜಯಿಸಿದ ರಾಯಲ್ ಚಾಲಂಜೆರ್ಸ್ ವಿಜಯೋತ್ಸವಕ್ಕೂ ಮುನ್ನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗ ಘಟಿಸಿದ ಕಾಲ್ತುಳಿತದಿಂದ 11 ಮಂದಿ ಸಾವನ್ನಪ್ಪಿದ ಬೆನ್ನಿಗೇ ಮಸೂದೆ ತರಲು ಸರ್ಕಾರ ಮುಂದಾಗಿದೆ.
ಹೆಚ್ಚು ಜನರು ಸೇರುವ ಕಡೆ ಜನರನ್ನು ನಿರ್ವಹಿಸುವುದಕ್ಕೆ ಸಂಬಂಧಿಸಿದಂತೆ ಶಾಸನದ ಕೊರತೆಯನ್ನು ಉದ್ದೇಶಿತ ಮಸೂದೆ ತುಂಬಲಿದೆ. ಇದರಿಂದ ಸಮಾವೇಶ ಸಂಘಟಕರು, ಕಾನೂನು ಜಾರಿಗೊಳಿಸುವ ಸಂಸ್ಥೆಗಳು ಮತ್ತು ಮಧ್ಯಸ್ಥಿಕೆದಾರರಿಗೆ ಸ್ಪಷ್ಟವಾದ ಕರ್ತವ್ಯ ನಿಗದಿಯಾಗಲಿದೆ.
ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಉದ್ದೇಶಿತ ಮಸೂದೆಯು ಮಂಡನೆಯಾಗುವ ಸಾಧ್ಯತೆ ಇದೆ. ಹೆಚ್ಚು ಜನರು ಸೇರುವ ಕಾರ್ಯಕ್ರಮ ಆಯೋಜನೆಗೂ ಮುನ್ನ ಸಂಬಂಧಿತರು ಪೊಲೀಸ್ ಅನುಮತಿ ಪಡೆಯುವುದು ಅಗತ್ಯವಾಗಿದ್ದು, ಕಾರ್ಯಕ್ರಮದಲ್ಲಿ ಬದಲಾವಣೆ ಸೂಚಿಸುವ , ಷರತ್ತುಗಳನ್ನು ವಿಧಿಸುವ ಅಥವಾ ಕಾರ್ಯಕ್ರಮ ರದ್ದುಗೊಳಿಸುವ ಅಧಿಕಾರವನ್ನು ಅಡಕಗೊಳಿಸಲಾಗಿದೆ. ಈ ನಿಯಮಗಳನ್ನು ಉಲ್ಲಂಘಿಸಿದರೆ, ಅನುಮತಿ ಪಡೆಯಲು ವಿಫಲವಾದರೆ, ಜನಸಂದಣಿ ನಿಯಂತ್ರಣದಲ್ಲಿ ವಿಫಲವಾದರೆ ಅಥವಾ ದುರ್ಘಟನೆ ನಡೆದಾಗ ಪರಿಹಾರ ನೀಡದವರಿಗೆ ಗರಿಷ್ಠ ₹5 ಲಕ್ಷ ದಂಡ ಮತ್ತು ಮೂರು ವರ್ಷ ಶಿಕ್ಷೆ ವಿಧಿಸುವುದಕ್ಕೆ ಮಸೂದೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ.
ಧಾರ್ಮಿಕ ಸಮಾರಂಭ ಒಳಗೊಂಡು ಜಾತ್ರೆ, ರಥೋತ್ಸವ, ಪಲ್ಲಕ್ಕಿ ಉತ್ಸವ, ಉರುಸ್ ಮತ್ತು ಇತರೆ ಧಾರ್ಮಿಕ ಸಮಾರಂಭಗಳಿಗೆ ಉದ್ದೇಶಿತ ಮಸೂದೆಯು ಅನ್ವಯಿಸುವುದಿಲ್ಲ ಎನ್ನಲಾಗಿದೆ.
ಅನುಮತಿ ಕಡ್ಡಾಯ: ಕಾರ್ಯಕ್ರಮಕ್ಕೆ ಹಾಜರಾಗುವ ಅಂದಾಜು ಜನರ ಮಾಹಿತಿ ಒಳಗೊಂಡು ಸಕ್ಷಮ ಪೊಲೀಸ್ ಠಾಣೆಗೆ ಸಂಘಟಕರು ಅನುಮತಿ ಕೋರಬೇಕು. ಈ ಸಂಬಂಧ ಸಕ್ಷಮ ಪ್ರಾಧಿಕಾರವು ತುರ್ತು ಅಥವಾ ಸುರಕ್ಷಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮಕ್ಕೆ ಒಪ್ಪಿಗೆ, ಮುಂದೂಡಿಕೆ, ಬದಲಾವಣೆ ಅಥವಾ ಕಾರ್ಯಕ್ರಮ ರದ್ದು ಮಾಡಬಹುದು.
ಅನುಪಾಲನೆ ಮಾಡದಿದ್ದರೆ ದಂಡ: ಸಾಮಾನ್ಯ ತಪ್ಪುಗಳಿಗೆ ಮೂರು ವರ್ಷ ಜೈಲು ಅಥವಾ ₹5,000 ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ. ವಾಣಿಜ್ಯ ಸಮಾರಂಭ ಸಂಘಟಕರಿಗೆ (ಕ್ರೀಡಾ ಅಥವಾ ಸರ್ಕಸ್) ಮೂರು ವರ್ಷ ಜೈಲು ಅಥವಾ ₹5 ಲಕ್ಷ ದಂಡ ಅಥವಾ ಕಾನೂನು ಪಾಲಿಸಲು ವಿಫಲವಾದಲ್ಲಿ ಅಥವಾ ಜನಸಂದಣಿ ಸಂಬಂಧಿ ಸಮಸ್ಯೆಗಳು ಉಂಟಾದಲ್ಲಿ ಎರಡನ್ನೂ ವಿಧಿಸಲು ಅವಕಾಶ ಮಾಡಿಕೊಡಲಾಗಿದೆ.
ಹಾನಿಗೆ ಹೊಣೆಗಾರಿಕೆ: ಘಟನೆಯಲ್ಲಿ ಸಾವು ಅಥವಾ ನೋವು ಸಂಭವಿಸಿದರೆ ಸಂಘಟಕರನ್ನು ಹೊಣೆಯನ್ನಾಗಿಸಲಾಗುವುದು. ಇಂಥ ಸಂದರ್ಭದಲ್ಲಿ ಕಾರ್ಯಕ್ರಮ ಸಂಘಟಕರು ಪರಿಹಾರ ಪಾವತಿಸಬೇಕಿದೆ. ಪರಿಹಾರ ಪಾವತಿಸದಿದ್ದಲ್ಲಿ ಸಂಘಟಕರ ಆಸ್ತಿಯನ್ನು ಹರಾಜು ಹಾಕಿ ನಷ್ಟ ತುಂಬಿಕೊಳ್ಳಬಹುದು.
ಸಂತ್ರಸ್ತರ ಮೇಲಿನ ಪರಿಣಾಮ ಹೇಳಿಕೆಗಳು: ಕಾಯಿದೆ ಅಡಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಾಗ ನ್ಯಾಯಾಲಯಗಳು ಸಂತ್ರಸ್ತರು ಅಥವಾ ಕುಟುಂಬ ಸದಸ್ಯರ ಮೇಲೆ ಉಂಟಾಗುವ ಪರಿಣಾಮಗಳ ಕುರಿತಾದದ ಹೇಳಿಕೆಗಳನ್ನು ಪರಿಗಣಿಸಬಹುದಾಗಿದೆ.
ಅಪರಾಧಗಳಿಗೆ ಕುಮ್ಮಕ್ಕು: ಈ ಕಾಯಿದೆ ಅಡಿಯಲ್ಲಿ ಅಪರಾಧಗಳನ್ನು ಎಸಗುವಲ್ಲಿ ತಿಳಿದೋ ಅಥವಾ ತಿಳಿಯದೆಯೋ ಇತರರಿಗೆ ಸಹಾಯ ಮಾಡುವವರು ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಜನಸಂದಣಿ ನಿಯಂತ್ರಣ ಅಧಿಕಾರಗಳು: ಜಿಲ್ಲಾ ದಂಡಾಧಿಕಾರಿ ಮತ್ತು ಸಕ್ಷಮ ಅಧಿಕಾರಿಗಳು ಶಾಂತಿ ಭಂಗ ಮತ್ತು ಕೋಮು ಸೌಹಾರ್ದತೆಯನ್ನು ಕೆರಳಿಸುವ ಕಾರ್ಯಕ್ರಮಗಳು ಅಥವಾ ಕೂಟಗಳನ್ನು ನಿಷೇಧಿಸಬಹುದು. ಮೆರವಣಿಗೆ, ಧ್ವನಿ ವ್ಯವಸ್ಥೆ ಮತ್ತು ಇತರೆ ಸಾರ್ವಜನಿಕ ಚಟುವಟಿಕೆಗಳನ್ನು ನಿಯಂತ್ರಿಸಬಹುದು.
ಜಾಗೃತಿ ಮತ್ತು ತರಬೇತಿ: ಸಾರ್ವಜನಿಕ ಶಿಕ್ಷಣ ಅಭಿಯಾನ ನಡೆಸುವುದು ಮತ್ತು ಜನಸಂದಣಿ ನಿರ್ವಹಣೆ ಮತ್ತು ಕಾಲ್ತುಳಿತ ತಡೆಗಟ್ಟುವಿಕೆಯ ಬಗ್ಗೆ ಅಧಿಕಾರಿಗಳಿಗೆ ತರಬೇತಿ ನೀಡಲು ಸರ್ಕಾರ ಉದ್ದೇಶಿಸಿದೆ.
ಭಾರತೀಯ ನ್ಯಾಯ ಸಂಹಿತೆ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಜೊತೆಗೆ ಮಸೂದೆಯ ನಿಬಂಧನೆಗಳು ನೇರ ಸಂಘರ್ಷಕ್ಕೆ ಒಳಪಡದಿದ್ದರೆ ಅವುಗಳೂ ಅನ್ವಯವಾಗಲಿವೆ. ಉತ್ತಮ ರೀತಿಯಲ್ಲಿ ನಡೆದುಕೊಳ್ಳುವ ಅಧಿಕಾರಿಗಳಿಗೂ ಕಾಯಿದೆಯಲ್ಲಿ ವಿನಾಯಿತಿ ಕಲ್ಪಿಸಲು ಅವಕಾಶ ನೀಡಲಾಗಿದ್ದು, ಕಾನೂನು ಅಧಿಸೂಚನೆ ಪ್ರಕಟಿಸಿದ ಬಳಿಕ ಸರ್ಕಾರವು ಅಗತ್ಯ ನಿಯಮಗಳನ್ನು ರೂಪಿಸಬಹುದಾಗಿದೆ ಎಂದು ಹೇಳಾಗಿದೆ.