ಆದೇಶದ ಬಳಿಕ ಪ್ರಕರಣ ರಿಜಿಸ್ಟ್ರಾರ್‌ ಮುಂದೆ ಹೇಗೆ ಬರುತ್ತದೆ? ಪ್ರೊ. ಕುಮಾರ್‌; ನನಗೂ ಕೆಲ ವಿಚಾರ ಅರ್ಥವಾಗಿಲ್ಲ: ಸಿಜೆ

ನ್ಯಾಯಾಲಯದ ಆದೇಶದ ಮೇಲೆ ರಿಜಿಸ್ಟ್ರಾರ್‌ ನಿರ್ಧಾರ ಮಾಡುವಂತಾಗಬಾರದು. ಪ್ರಕರಣವನ್ನು ವಿಚಾರಣೆಗೆ ನಿಗದಿಪಡಿಸಬೇಕೆ, ಬೇಡವೇ ಎಂಬುದನ್ನು ಪೀಠ ನಿರ್ಧರಿಸಲಿದೆ. ಇದು ರಿಜಿಸ್ಟ್ರಾರ್‌ ಬಳಿಗೆ ಹೋಗಬಾರದು ಎಂದ ಪ್ರೊ. ರವಿವರ್ಮ ಕುಮಾರ್‌.
Karnataka HC and BEML Ltd

Karnataka HC and BEML Ltd

ಪ್ರತಿವಾದಿಗಳಿಗೆ ಇದಾಗಲೇ ನೋಟಿಸ್‌ ಜಾರಿಯಾಗಿರುವ ಪ್ರಕರಣವೊಂದು ಮತ್ತೊಮ್ಮೆ ವಿಚಾರಣೆಗೆ ಹೊಸದಾಗಿ ಪಟ್ಟಿಯಾಗಲು ರಿಜಿಸ್ಟ್ರಾರ್‌ ಜನರಲ್‌ ಅವರ ಮುಂದೆ ಬಂದಿದ್ದ ಘಟನೆಗೆ ಬುಧವಾರ ಕರ್ನಾಟಕ ಹೈಕೋರ್ಟ್‌ ಸಾಕ್ಷಿಯಾಯಿತು.

ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ರಕ್ಷಣಾ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸಾರ್ವಜನಿಕ ಉದ್ದಿಮೆಯಾದ ಬಿಇಎಂಎಲ್‌ ಲಿಮಿಟೆಡ್‌ ಅನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿರುವ ಮನವಿಯಲ್ಲಿ ಈಗಾಗಲೇ ಪ್ರತಿವಾದಿಗಳಿಗೆ ತುರ್ತು ನೋಟಿಸ್‌ ಜಾರಿಯಾಗಿದೆ. ಹಾಗಿದ್ದೂ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡುವ ಸಂಬಂಧ ರಿಜಿಸ್ಟ್ರಾರ್‌ ಜನರಲ್‌ ಮುಂದೆ ಬಂದಿದೆ. ಈ ರೀತಿ ಎಂದೂ ಈ ಹೈಕೋರ್ಟ್‌ನಲ್ಲಿ ನಡೆದಿಲ್ಲ. ಒಮ್ಮೆ ನ್ಯಾಯಿಕ ಆದೇಶ ಆದ ಮೇಲೆ ಪ್ರಕರಣವು ನ್ಯಾಯಮೂರ್ತಿಗಳ ಮುಂದೆ ಬರಬೇಕು. ನ್ಯಾಯಾಲಯದ ಆದೇಶವನ್ನು ರಿಜಿಸ್ಟ್ರಾರ್‌ಗೆ ಹೇಗೆ ನಿರ್ವಹಿಸುತ್ತಾರೆ ಎಂದು ಅರ್ಜಿದಾರರನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಅವರು ಗಂಭೀರವಾಗಿ ಆಕ್ಷೇಪಿಸಿದರು.

ಬಿಇಎಂಎಲ್‌ ಸಿಬ್ಬಂದಿ ಸಂಘಟನೆ ಮತ್ತು ಬಿಇಎಂಎಲ್‌ ಉದ್ಯೋಗಿಗಳ ಸಂಘಟನೆಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ಶೀಘ್ರ ವಿಚಾರಣೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಮಧ್ಯಪ್ರವೇಶ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಪ್ರೊ. ರವಿವರ್ಮ ಕುಮಾರ್‌ ಅವರು ಘಟನೆ ಕುರಿತು ಪೀಠದ ಗಮನಸೆಳೆದರು. ಇದಕ್ಕೆ ಸಿಜೆ ಅವಸ್ಥಿ ಅವರು “ನನಗೂ ಹಲವು ವಿಚಾರಗಳು ಇಲ್ಲಿ ಅರ್ಥವಾಗುತ್ತಿಲ್ಲ” ಎಂದು ನಕ್ಕರು.

ಆಗ ಪ್ರೊ. ರವಿವರ್ಮ ಕುಮಾರ್‌ ಅವರು “ದಯವಿಟ್ಟು ಕ್ಷಮಿಸಿ, ನ್ಯಾಯಾಲಯದ ಆದೇಶದ ಮೇಲೆ ರಿಜಿಸ್ಟ್ರಾರ್‌ ನಿರ್ಧಾರ ಮಾಡುವಂತಾಗಬಾರದು. ಪ್ರಕರಣವನ್ನು ವಿಚಾರಣೆಗೆ ನಿಗದಿಪಡಿಸಬೇಕೆ, ಬೇಡವೇ ಎಂಬುದನ್ನು ಪೀಠ ನಿರ್ಧರಿಸಲಿದೆ. ಇದು ರಿಜಿಸ್ಟ್ರಾರ್‌ ಬಳಿಗೆ ಹೋಗಬಾರದು. ತಕ್ಷಣ ಪ್ರಕರಣವು ರಿಜಿಸ್ಟ್ರಾರ್‌ ಮುಂದೆ ಹೋಗಿದೆ. ದಯವಿಟ್ಟು ಆದೇಶವನ್ನು ಒಮ್ಮೆ ನೋಡಿ” ಎಂದರು.

ಆಗ ಸಿಜೆ ಅವಸ್ಥಿ ಅವರು “ಪ್ರಕರಣಗಳನ್ನು ಹೇಗೆ ಪಟ್ಟಿ ಮಾಡಬೇಕು ಎಂದು ನಮಗೆ ನೀವು ಹೇಳಿ. ಪ್ರಕರಣಗಳು ರಿಜಿಸ್ಟ್ರಾರ್‌ ಮುಂದೆ ಹೇಗೆ ಬರುತ್ತವೆ ಎಂಬುದು ನನಗೆ ಗೊತ್ತಿಲ್ಲ” ಎಂದರು.

ಇದರಿಂದ ಸಮಾಧಾನಗೊಳ್ಳದ ಪ್ರೊ. ಕುಮಾರ್‌ ಅವರು “ನಮಗೆ ಆಘಾತವಾಗಿದೆ. ಒಮ್ಮೆ ನ್ಯಾಯಾಲಯ ಆದೇಶ ಮಾಡಿದ ಮೇಲೆ ಅದು ಮತ್ತೆಂದೂ ರಿಜಿಸ್ಟ್ರಾರ್‌ ಮುಂದೆ ಪಟ್ಟಿಯಾಗಲು ಹೋಗುವುದಿಲ್ಲ” ಎಂದರು.

ಇದನ್ನು ಆಲಿಸಿದ ಪೀಠವು “ಪ್ರಕರಣದ ಶೀಘ್ರ ವಿಚಾರಣೆ ಕೋರಿ ಮಧ್ಯಪ್ರವೇಶ ಮನವಿ ಸಲ್ಲಿಸಲಾಗಿದ್ದು, ಇದನ್ನು ಆಧರಿಸಿ ಮಾರ್ಚ್‌ 29ಕ್ಕೆ ವಿಚಾರಣೆ ನಿಗದಿಪಡಿಸಲಾಗಿದೆ. ಮಧ್ಯಪ್ರವೇಶ ಮನವಿ ವಿಲೇವಾರಿ ಮಾಡಲಾಗಿದೆ” ಎಂದು ಆದೇಶಿಸಿತು.

Also Read
ಬಿಇಎಂಎಲ್‌ ಖಾಸಗೀಕರಣದ ವಿರುದ್ಧದ ಪಿಐಎಲ್: ಕೇಂದ್ರಕ್ಕೆ ನೋಟಿಸ್‌ ಜಾರಿ ಮಾಡಿದ ಹೈಕೋರ್ಟ್‌

ಬಿಇಎಂಎಲ್‌ ಪರ ವಕೀಲರು ಹಾಗೂ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿರುವ ವಕೀಲ ಮಾನಸಿ ಕುಮಾರ್‌ ಅವರು ವಿಚಾರಣೆಯಲ್ಲಿ ಹಾಜರಿದ್ದರು.

ಕಳೆದ ಹತ್ತು ವರ್ಷಗಳಿಂದ ಬಿಇಎಂಎಲ್‌ ಅನ್ನು ಖಾಸಗೀಕರಣಗೊಳಿಸುತ್ತಿರುವುದರ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಆದರೆ, ರಕ್ಷಣಾ ಇಲಾಖೆ ಇದಕ್ಕೆ ಬೆಂಬಲ ನೀಡಿಲ್ಲ. ಖಾಸಗೀಕರಣಗೊಳಿಸುವುದಕ್ಕಾಗಿ ಹಾಲಿ ಸರ್ಕಾರವು ಸಚಿವಾಲಯವನ್ನು ಸೃಷ್ಟಿಸಿದೆ. ಈ ವಿಚಾರದ ಕುರಿತು ಆ ಸಚಿವಾಲಯ ನಿರ್ಧಾರ ಕೈಗೊಳ್ಳುತ್ತದೆ. ಸೂಕ್ತ ಆಸಕ್ತ ಸಂಸ್ಥೆಗಳಿಂದ ತಮ್ಮ ಉಮೇದನ್ನು ವಿವರಿಸುವ ಇಚ್ಛಾ ಅಭಿವ್ಯಕ್ತಿಗೆ (ಎಕ್ಸ್‌ಪ್ರೆಷನ್ ಆಫ್‌ ಇಂಟರೆಸ್ಟ್‌) ಆಹ್ವಾನ ನೀಡಲಾಗಿದೆ. ಅದಕ್ಕೆ ತಡೆ ನೀಡಬೇಕು. ಬಿಇಎಂಎಲ್‌ ಅನ್ನು ಖಾಸಗೀಕರಣಗೊಳಿಸಲು ಕೈಗೊಂಡಿರುವ ಹರಾಜು ವಿವರಗಳಿಗೆ ಸಂಬಂಧಿಸಿದ ದಾಖಲೆಗಳ ಸಲ್ಲಿಕೆಗೆ ಆದೇಶಿಸಬೇಕು. ಹೀಗಾಗಿ, ನ್ಯಾಯಾಲಯವು ಯಥಾಸ್ಥಿತಿ ಕಾಪಾಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Related Stories

No stories found.
Kannada Bar & Bench
kannada.barandbench.com