ಅಲಾಹಾಬಾದ್‌ ಹೈಕೋರ್ಟ್‌ ನ್ಯಾ. ಕುಮಾರ್‌ಗೆ ಕ್ರಿಮಿನಲ್‌ ರೋಸ್ಟರ್‌ನಿಂದ ಕೊಕ್‌ ನೀಡಿದ್ದ ನಿರ್ದೇಶನ ಹಿಂಪಡೆದ ಸುಪ್ರೀಂ

ನ್ಯಾ. ಪ್ರಶಾಂತ್ ಕುಮಾರ್ ವಿರುದ್ಧದ ನಿರ್ದೇಶನಗಳು ಮತ್ತು ಅವಲೋಕನಗಳನ್ನು ಮರುಪರಿಶೀಲಿಸುವಂತೆ ಕೋರಿ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಅವರು ಪತ್ರ ಬರೆದ ನಂತರ, ನಿರ್ದೇಶನಗಳನ್ನು ಹಿಂಪಡೆಯಲು ನಿರ್ಧರಿಸಿದೆ
Justice Prashant Kumar and Supreme Court
Justice Prashant Kumar and Supreme Court
Published on

ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಅವರನ್ನು ಕ್ರಿಮಿನಲ್ ಪ್ರಕರಣಗಳ ವಿಚಾರಣೆಯಿಂದ ತೆರವುಗೊಳಿಸಿದ್ದ ಆಗಸ್ಟ್ 4ರ ನಿರ್ದೇಶನಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಹಿಂಪಡೆದಿದೆ.

ನ್ಯಾಯಮೂರ್ತಿ ಜೆ ಬಿ ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್ ಮಹಾದೇವನ್ ಅವರ ಪೀಠವು, ನ್ಯಾಯಮೂರ್ತಿ ಕುಮಾರ್ ವಿರುದ್ಧದ ನಿರ್ದೇಶನಗಳು ಮತ್ತು ಅವಲೋಕನಗಳನ್ನು ಮರುಪರಿಶೀಲಿಸುವಂತೆ ಕೋರಿ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಅವರು ಪತ್ರ ಬರೆದ ನಂತರ, ನಿರ್ದೇಶನಗಳನ್ನು ಹಿಂಪಡೆಯಲು ನಿರ್ಧರಿಸಿದೆ.

ಸಿಜೆಐ ಅವರ ಪತ್ರದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಕುಮಾರ್ ಅವರನ್ನು ಕ್ರಿಮಿನಲ್ ಪ್ರಕರಣಗಳನ್ನು ನಿರ್ವಹಿಸುವುದರಿಂದ ತೆರೆವುಗೊಳಿಸುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ನಿರ್ದೇಶಿಸಿದ್ದ ಆಗಸ್ಟ್ 4ರ ಆದೇಶದ ಪ್ಯಾರಾಗಳನ್ನು ನ್ಯಾಯಾಲಯ ತೆಗೆದು ಹಾಕಿದೆ.

"ಸಿಜೆಐ ಅವರ ವಿನಂತಿಯ ಹಿನ್ನೆಲೆಯಲ್ಲಿ, ನಾವು ಆಗಸ್ಟ್ 4 ರ ನಮ್ಮ ಆದೇಶದಿಂದ ಪ್ಯಾರಾ 25 ಮತ್ತು 26 ಅನ್ನು ಇಲ್ಲಿ ಅಳಿಸುತ್ತೇವೆ. ನಾವು ಅದನ್ನು ಅಳಿಸಿದ್ದರೂ, ಈಗ ಈ ವಿಷಯವನ್ನು ಪರಿಶೀಲಿಸಲು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ನಾವು ಬಿಡುತ್ತೇವೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ʼರೋಸ್ಟರ್‌ನ ಮಾಸ್ಟರ್ʼ (ರೋಸ್ಟರ್‌ ನಿರ್ಧರಿಸುವವರು) ಎಂದು ನಾವು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇವೆ. ನಾವು ನೀಡಿದ್ದ ನಿರ್ದೇಶನಗಳು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯ ಆಡಳಿತಾತ್ಮಕ ಅಧಿಕಾರದಲ್ಲಿ ನಿಶ್ಚಿತವಾಗಿಯೂ ಹಸ್ತಕ್ಷೇಪ ಮಾಡುವಂತಿರಲಿಲ್ಲ. ಯಾವಾಗ ವಿಷಯಗಳು ಕಾನೂನಾತ್ಮಕ ಆಡಳಿತದ ಮೇಲೆ ಪರಿಣಾಮ ಬೀರುತ್ತದೆಯೇ ಆಗ ಈ ನ್ಯಾಯಾಲಯವು ಸರಿಪಡಿಸುವ ಕ್ರಮಗಳನ್ನು ಕೈಗೊಳ್ಳಲು ಕಾನೂನಿನ ನಿಯಮದ ಮೇಲೆ ಪರಿಣಾಮ ಬೀರಿದಾಗ, ಈ ನ್ಯಾಯಾಲಯವು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಲಿದೆ" ಎಂದು ಪೀಠ ಹೇಳಿದೆ.

ಸಂಬಂಧಪಟ್ಟ ಹೈಕೋರ್ಟ್ ನ್ಯಾಯಾಧೀಶರನ್ನು ಮುಜುಗರಕ್ಕೀಡು ಮಾಡುವುದು ನಮ್ಮ ಉದ್ದೇಶವಲ್ಲ ಎಂದು ನ್ಯಾಯಾಲಯವು ಇದೇ ವೇಳೆ ಸ್ಪಷ್ಟವಾಗಿ ಹೇಳಿದೆ. "ಪ್ರಾರಂಭದಲ್ಲಿಯೇ ಹೇಳುವುದೇನೆಂದರೆ, ಸಂಬಂಧಪಟ್ಟ ನ್ಯಾಯಾಧೀಶರ ಮೇಲೆ ಮುಜುಗರ ಉಂಟುಮಾಡುವುದು ಅಥವಾ ಅವರ ಮೇಲೆ ಅಪವಾದ ಹೊರಿಸುವುದು ನಮ್ಮ ಉದ್ದೇಶವಲ್ಲ ಎಂದು ನಾವು ಸ್ಪಷ್ಟಪಡಿಸುತ್ತೇವೆ" ಎಂದು ಪೀಠವು ತಿಳಿಸಿತು.

ಆಗಸ್ಟ್ 4 ರ ಆದೇಶವನ್ನು ಸಮರ್ಥಿಸಿಕೊಂಡ ಅದು, ನ್ಯಾಯಾಂಗದ ಘನತೆಯನ್ನು ಉನ್ನತ ಮಟ್ಟದಲ್ಲಿರಿಸುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದೆ. "ಕಾನೂನುಬದ್ಧವಾಗಿ ದೂಷಣೆ ಮಾಡಲಾಗದಂತಹ ಆದೇಶ ಮತ್ತು ಸಂಪೂರ್ಣ ನ್ಯಾಯವನ್ನು ಖಾತ್ರಿಪಡಿಸಿದ ಆದೇಶಗಳನ್ನು ನಾವು ನೋಡಿದಾಗಲೆಲ್ಲಾ, ನಾವು ನ್ಯಾಯಾಧೀಶರ ಬಗ್ಗೆ ಮೆಚ್ಚುಗೆಯನ್ನು ದಾಖಲಿಸಿದ್ದೇವೆ" ಎಂದು ಪೀಠ ವಿವರಿಸಿತು.

ಮುಂದುವರೆದು, "ಹೈಕೋರ್ಟ್‌ಗಳು (ನ್ಯಾಯಾಂಗ) ಸಂಸ್ಥೆಯಿಂದ ಬೇರ್ಪಡಿಸಬಹುದಾದ ಪ್ರತ್ಯೇಕ ದ್ವೀಪಗಳಲ್ಲ. ನಮ್ಮ ಆದೇಶದಲ್ಲಿ ನಾವು ಏನು ಹೇಳಿದ್ದೇವೋ ಅದು ನ್ಯಾಯಾಂಗದ ಘನತೆಯನ್ನು ಉನ್ನತ ಮಟ್ಟದಲ್ಲಿರಿಸಲು ಖಾತ್ರಿಪಡಿಸಿಕೊಳ್ಳುವ ಉದ್ದೇಶ ಹೊಂದಿತ್ತು" ಎಂದಿತು.

ಸಿವಿಲ್ ವಿವಾದಗಳಲ್ಲಿ ಹಣವನ್ನು ವಸೂಲಿ ಮಾಡಲು ಪರ್ಯಾಯ ಮಾರ್ಗವಾಗಿ ಕ್ರಿಮಿನಲ್ ಮೊಕದ್ದಮೆಯನ್ನು ಬಳಸಬಹುದು ಎಂದು ತೀರ್ಪು ನೀಡಿದ್ದಕ್ಕಾಗಿ ಆಗಸ್ಟ್ 4 ರಂದು ನ್ಯಾಯಾಲಯವು ನ್ಯಾಯಮೂರ್ತಿ ಕುಮಾರ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು.

ಅಂದು ಹೊರಡಿಸಲಾದ ಆದೇಶದಲ್ಲಿ ಕಠಿಣ ನಿರ್ದೇಶನಗಳನ್ನು ನೀಡಿದ ಪೀಠ, ನ್ಯಾಯಮೂರ್ತಿ ಕುಮಾರ್ ಅವರನ್ನು ನಿವೃತ್ತಿಯವರೆಗೆ ಕ್ರಿಮಿನಲ್ ಪಟ್ಟಿಯ ವಿಚಾರಣೆಯಿಂದ ತೆರವುಗೊಳಿಸಿ., ಹೈಕೋರ್ಟ್‌ನ ಅನುಭವಿ ಹಿರಿಯ ನ್ಯಾಯಾಧೀಶರೊಂದಿಗೆ ವಿಭಾಗೀಯ ಪೀಠದಲ್ಲಿ ಕುಳಿತುಕೊಳ್ಳುವಂತೆ ಮಾಡಿ ಎಂದು ಸುಪ್ರೀಂ ಕೋರ್ಟ್ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಆಗ್ರಹಿಸಿತ್ತು.

"ಸಂಬಂಧಪಟ್ಟ ನ್ಯಾಯಾಧೀಶರು ತಮ್ಮ ಹುದ್ದೆಯಿಂದ ಕೆಳಗಿಳಿಯುವವರೆಗೆ ಅವರಿಗೆ ಯಾವುದೇ ಕ್ರಿಮಿನಲ್ ನಿರ್ಣಯವನ್ನು ನಿಯೋಜಿಸಬಾರದು ಎಂದು ನಾವು ನಿರ್ದೇಶಿಸುತ್ತೇವೆ. ಯಾವುದೇ ಸಮಯದಲ್ಲಿ, ಅವರನ್ನು ಏಕ ನ್ಯಾಯಾಧೀಶರನ್ನಾಗಿ ನೇಮಿಸಬೇಕಾದರೆ, ಅವರಿಗೆ ಯಾವುದೇ ಕ್ರಿಮಿನಲ್ ನಿರ್ಣಯವನ್ನು ನಿಯೋಜಿಸಬಾರದು" ಎಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು.

ಸುಪ್ರೀಂ ಕೋರ್ಟ್‌ನ ಆದೇಶವು ಮಾಧ್ಯಮಗಳಲ್ಲಿ ನಕಾರಾತ್ಮಕ ವರದಿಗಳಿಗೆ ಕಾರಣವಾಗಿತ್ತು.

ಅಲಾಹಾಬಾದ್ ಹೈಕೋರ್ಟ್‌ನ ಕನಿಷ್ಠ 13 ನ್ಯಾಯಾಧೀಶರು ಅದರ ಮುಖ್ಯ ನ್ಯಾಯಮೂರ್ತಿ ಅರುಣ್ ಬನ್ಸಾಲಿ ಅವರಿಗೆ ಪತ್ರ ಬರೆದು ಸುಪ್ರೀಂ ಕೋರ್ಟ್‌ನ ನಿರ್ದೇಶನವನ್ನು ಧಿಕ್ಕರಿಸುವಂತೆ ಒತ್ತಾಯಿಸಿದ್ದರು. ಈ ವಿಷಯದ ಬಗ್ಗೆ ಚರ್ಚಿಸಲು ಪೂರ್ಣ ನ್ಯಾಯಾಲಯದ ಸಭೆಯನ್ನು ಕೋರಿದ್ದರು.

ಮಾಧ್ಯಮ ವರದಿಗಳ ಪ್ರಕಾರ, ನ್ಯಾಯಮೂರ್ತಿ ಪಾರ್ದಿವಾಲಾ ನೇತೃತ್ವದ ಪೀಠವು ಹೊರಡಿಸಿದ ನಿರ್ದೇಶನಕ್ಕೆ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು. ಹಾಗಾಗಿ, ಪ್ರಕರಣವನ್ನು ಇದಾಗಲೇ ಇತ್ಯರ್ಥಪಡಿಸಲಾಗಿದ್ದರೂ, ಇಂದು ವಿಚಾರಣೆಗೆ ಮರು ಪಟ್ಟಿಮಾಡಲಾಗಿತ್ತು.

Kannada Bar & Bench
kannada.barandbench.com