
ಉನ್ನತ ನ್ಯಾಯಾಂಗದಲ್ಲಿ ಈಚೆಗೆ ಮಾಡಲಾದ ವರ್ಗಾವಣೆಗಳಿಂದಾಗಿ ದೇಶದ ಹೈಕೋರ್ಟ್‌ಗಳಲ್ಲಿ ಭಾರಿ ಪುನಾರಚನೆ ಕಂಡುಬಂದಿದ್ದು ನ್ಯಾಯಾಲಯದೊಳಗೆ ಹಾಲಿ ಇದ್ದ ನ್ಯಾಯಮೂರ್ತಿಗಳ ಸೇವಾ ಹಿರಿತನ ಮತ್ತು ಆಯಾ ಕೊಲಿಜಿಯಂ ಸಂಯೋಜನೆಗಳ ಮೇಲೆ ಪರಿಣಾಮ ಉಂಟಾಗಿದೆ.
ಇತ್ತೀಚಿನ ವರ್ಗಾವಣೆಗಳಿಂದಾಗಿ ದೇಶದ 25 ಹೈಕೋರ್ಟ್‌ಗಳ ನ್ಯಾಯಮೂರ್ತಿ ಹುದ್ದೆಗಳಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ ಎಂಬುದನ್ನು ʼಬಾರ್ ಅಂಡ್ ಬೆಂಚ್ʼ ವಿಶ್ಲೇಷಿಸಿದೆ.
ಸಾಮಾನ್ಯವಾಗಿ ತಮ್ಮ ಮಾತೃ ಹೈಕೋರ್ಟ್‌ಗಳಿಗೆ ಸೇರಿರದವರನ್ನೇ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡುವುದರಿಂದ ಆ ಬಗ್ಗೆ ಈ ವರದಿ ಪ್ರಸ್ತಾಪಿಸುವುದಿಲ್ಲ.
ಕರ್ನಾಟಕ ಹಾಗೂ ದೆಹಲಿ ಹೈಕೋರ್ಟ್‌ಗಳಲ್ಲಿ ಅನ್ಯ ರಾಜ್ಯಗಳ ಮೂಲದ ಹೆಚ್ಚು ನ್ಯಾಯಮೂರ್ತಿಗಳಿದ್ದಾರೆ. ಈ ಎರಡೂ ಹೈಕೋರ್ಟ್‌ಗಳಲ್ಲಿ ಹೊರ ರಾಜ್ಯಗಳ ನ್ಯಾಯಮೂರ್ತಿಗಳ ಸಂಖ್ಯೆ ತಲಾ ಏಳು ಇದೆ.
ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದು ವರ್ಗಾವಣೆಗೊಂಡಿರುವ ನ್ಯಾಯಮೂರ್ತಿ ಬಖ್ರು ಅವರ ಸ್ಥಾನಕ್ಕೆ ಬೆಂಗಳೂರಿನಿಂದ ಮರಳಿರುವ ನ್ಯಾ., ವಿ ಕಾಮೇಶ್ವರ್ ರಾವ್ ಅಲ್ಲಿನ ಕೊಲಿಜಿಯಂನಲ್ಲಿ ಸ್ಥಾನ ಪಡೆದಿದ್ದಾರೆ.
ಅದೇ ರೀತಿ, ನ್ಯಾಯಮೂರ್ತಿಗಳಾದ ದಿನೇಶ್ ಕುಮಾರ್ ಸಿಂಗ್ (ಅಲಹಾಬಾದ್ ಹೈಕೋರ್ಟ್) ಮತ್ತು ಜಯಂತ್ ಬ್ಯಾನರ್ಜಿ (ಅಲಹಾಬಾದ್ ಹೈಕೋರ್ಟ್) ಅವರನ್ನು ಇತ್ತೀಚೆಗೆ ಕರ್ನಾಟಕ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು.
ಕೇರಳದ ನ್ಯಾಯಮೂರ್ತಿ ಅನು ಶಿವರಾಮನ್, ಆಂಧ್ರಪ್ರದೇಶದ ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ, ತೆಲಂಗಾಣದ ನ್ಯಾಯಮೂರ್ತಿ ಪೆರುಗು ಶ್ರೀ ಸುಧಾ, ತೆಲಂಗಾಣದ ನ್ಯಾಯಮೂರ್ತಿ ಡಾ. ಚಿಲ್ಲಕೂರ್ ಸುಮಲತಾ ಮತ್ತು ಆಂಧ್ರಪ್ರದೇಶದ ನ್ಯಾಯಮೂರ್ತಿ ಕೆ. ಮನ್ಮಧ ರಾವ್ ಕೂಡ ಇದರಲ್ಲಿದ್ದಾರೆ.
ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ನಂತರ ಕರ್ನಾಟಕ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿ ಅನು ಶಿವರಾಮನ್ ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿದ್ದಾರೆ. ಇತ್ತೀಚಿನ ವರ್ಗಾವಣೆಗಳಿಗೂ ಮುನ್ನವೇ ಅವರು ಕೊಲಿಜಿಯಂನ ಭಾಗವಾಗಿದ್ದರು.
ಈಚೆಗೆ ವರ್ಗಾವಣೆಗಳು ನಡೆಯುವುದಕ್ಕೂ ಮುನ್ನ ದೆಹಲಿ ಹೈಕೋರ್ಟ್‌ನಲ್ಲಿ ಅನ್ಯ ರಾಜ್ಯದ ನ್ಯಾಯಮೂರ್ತಿಗಳ ಸಂಖ್ಯೆ ಕೇವಲ ಎರಡು ಮಾತ್ರ ಇತ್ತು. ಜುಲೈ 14 ರಂದು ದೆಹಲಿ ಹೈಕೋರ್ಟ್‌ನಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆದ ಬಳಿಕ ಹೊರ ರಾಜ್ಯಗಳ ನ್ಯಾಯಮೂರ್ತಿಗಳ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.
ದೆಹಲಿ ಹೈಕೋರ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನ್ಯಾ. ಯಶವಂತ್ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾದ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್‌ಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಹುದ್ದೆಗಳಲ್ಲಿ ಬದಲಾವಣೆ ಮಾಡಿರುವುದು ಮಹತ್ವದ ಸಂಗತಿ ಎನಿಸಿದೆ.
ಹೀಗೆ ವರ್ಗಾವಣೆಗೊಂಡ ನ್ಯಾಯಮೂರ್ತಿಗಳಲ್ಲಿ ಹೆಚ್ಚಿನವರು ದೆಹಲಿ ಹೈಕೋರ್ಟ್‌ನಲ್ಲಿ ಹಾಲಿ ಇರುವ ಬಹುತೇಕ ನ್ಯಾಯಮೂರ್ತಿಗಳಿಗಿಂತಲೂ ಹಿರಿಯರಾಗಿರುವುದರಿಂದ ನ್ಯಾಯಾಲಯದೊಳಗೆ ಹಾಲಿ ಇದ್ದ ನ್ಯಾಯಮೂರ್ತಿಗಳ ಸೇವಾ ಹಿರಿತನ ಮತ್ತು ಆಯಾ ಕೊಲಿಜಿಯಂ ಸಂಯೋಜನೆಗಳ ಮೇಲೆ ಪರಿಣಾಮ ಉಂಟಾಗಿದೆ.
ವರ್ಗಾವಣೆಗೆ ಮೊದಲು, ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ವಿಭು ಬಖ್ರು ಅವರು ಕೊಲಿಜಿಯಂನ ಭಾಗವಾಗಿದ್ದರು.
ಈ ಹಿಂದೆ ಪಾಟ್ನಾ ಹೈಕೋರ್ಟ್‌ನಲ್ಲಿ ಹೊರಗಿನ ರಾಜ್ಯಗಳ ನ್ಯಾಯಮೂರ್ತಿಗಳು ಅತಿ ಹೆಚ್ಚಾಗಿ ಇದ್ದರು.
ಪ್ರಸ್ತುತ, ಪಾಟ್ನಾದಲ್ಲಿ ನಿಯೋಜಿಸಲಾದ ಇತರ ಹೈಕೋರ್ಟ್‌ಗಳ ಆರು ನ್ಯಾಯಮೂರ್ತಿಗಳಲ್ಲಿ ಪವನ್‌ಕುಮಾರ್ ಭೀಮಪ್ಪ ಬಜಂತ್ರಿ (ಕರ್ನಾಟಕ), ನ್ಯಾಯಮೂರ್ತಿ ಅರವಿಂದ್ ಸಿಂಗ್ ಚಂದೇಲ್ (ಛತ್ತೀಸ್‌ಗಢ), ನ್ಯಾಯಮೂರ್ತಿ ಬಿಬೇಕ್ ಚೌಧರಿ (ಕಲ್ಕತ್ತಾ), ನ್ಯಾಯಮೂರ್ತಿ ನಾನಿ ತಗಿಯಾ (ಗುವಾಹಟಿ), ನ್ಯಾಯಮೂರ್ತಿ ಅನ್ನಿರೆಡ್ಡಿ ಅಭಿಷೇಕ್ ರೆಡ್ಡಿ (ತೆಲಂಗಾಣ) ಮತ್ತು ನ್ಯಾಯಮೂರ್ತಿ ಗುನ್ನು ಅನುಪಮಾ ಚಕ್ರವರ್ತಿ (ತೆಲಂಗಾಣ) ಸೇರಿದ್ದಾರೆ.
ಇವರಲ್ಲಿ, ನ್ಯಾಯಮೂರ್ತಿ ಅನ್ನಿರೆಡ್ಡಿ ಅಭಿಷೇಕ್ ರೆಡ್ಡಿ ಅವರನ್ನು ತೆಲಂಗಾಣಕ್ಕೆ ವಾಪಸ್ ಕಳುಹಿಸಲು ಶಿಫಾರಸು ಮಾಡಲಾಗಿದೆ ಆದರೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸನ್ನು ಕೇಂದ್ರ ಸರ್ಕಾರ ಇನ್ನೂ ಅಂಗೀಕರಿಸಿಲ್ಲ. ನ್ಯಾಯಮೂರ್ತಿ ಬಜಂತ್ರಿ ಅವರು ಹೈಕೋರ್ಟ್‌ನ ಕೊಲಿಜಿಯಂನ ಭಾಗವಾಗಿದ್ದಾರೆ.
ಅತಿ ಹೆಚ್ಚು ಹೊರಗಿನ ರಾಜ್ಯಗಳ ನ್ಯಾಯಮೂರ್ತಿಗಳಿರುವ ಉಳಿದ ಹೈಕೋರ್ಟ್‌ಗಳೆಂದರೆ ಕಲ್ಕತ್ತಾ, ಅಲಾಹಾಬಾದ್ ಹಾಗೂ ಮದ್ರಾಸ್ ಉಚ್ಚ ನ್ಯಾಯಾಲಯಗಳು.
ಛತ್ತೀಸ್‌ಗಢ, ಗುವಾಹಟಿ, ಹಿಮಾಚಲ ಪ್ರದೇಶ, ಕಾಶ್ಮೀರ, ಜಾರ್ಖಂಡ್, ಮಣಿಪುರ, ಮೇಘಾಲಯ, ಸಿಕ್ಕಿಂ ಮತ್ತು ಉತ್ತರಾಖಂಡ ಹೈಕೋರ್ಟ್‌ಗಳಲ್ಲಿ ಮುಖ್ಯ ನ್ಯಾಯಮೂರ್ತಿಗಳನ್ನು ಹೊರತುಪಡಿಸಿದರೆ ಬೇರೆ ರಾಜ್ಯಗಳಿಂದ ಬಂದ ನ್ಯಾಯಮೂರ್ತಿಗಳಿಲ್ಲ.