aganmohan Reddy
aganmohan ReddyFacebook

ಆಂಧ್ರ ಸಿಎಂ ಹಾಗೂ ಅವರ ಸಲಹಾಕಾರರದ್ದು ಅವಿಧೇಯ ನಡೆ ಎಂದ ಎಜಿ ವೇಣುಗೋಪಾಲ್; ನ್ಯಾಯಾಂಗ ನಿಂದನಾ ಪ್ರಕ್ರಿಯೆಗೆ ನಕಾರ

ಸಿಎಂ ಜಗನ್ ಪತ್ರ ಬರೆದ ಸಮಯ ಮತ್ತು ಅದರ ಪ್ರಚಾರವೇ ಅನುಮಾನದಿಂದ ಕೂಡಿದೆ. ನ್ಯಾ.ರಮಣ ನೇತೃತ್ವದ ಪೀಠ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ತುರ್ತು ವಿಲೇವಾರಿಗೆ ಆದೇಶಿಸಿದ ಬೆನ್ನಿಗೇ ಪತ್ರ ಹೊರಬಿದ್ದಿದೆ ಎಂದು ವೇಣುಗೋಪಾಲ್ ಹೇಳಿದ್ದಾರೆ.
Published on

ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಮತ್ತು ಅವರ ಪ್ರಧಾನ ಸಲಹೆಗಾರ ಅಜೇಯ ಕಲ್ಲಂ ಅವರ ವಿರುದ್ಧ ನ್ಯಾಯಾಂಗ ನಿಂದನಾ ಪ್ರಕ್ರಿಯೆ ಆರಂಭಿಸಿಲು ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅನುಮತಿ ನಿರಾಕರಿಸಿದ್ದಾರೆ.

ಇದರ ಜೊತೆಗೆ ಸುಪ್ರೀಂ ಕೋರ್ಟ್‌ನ ದ್ವಿತೀಯ ಹಿರಿಯ ನ್ಯಾಯಮೂರ್ತಿಯಾದ ಎನ್‌ ವಿ ರಮಣ ವಿರುದ್ಧ ಆರೋಪ ಮಾಡಿರುವ ಜಗನ್‌ ಮತ್ತು ಕಲ್ಲಂ ಅವರ ನಡತೆಯು ಅವಿಧೇಯತೆಯಿಂದ ಕೂಡಿದೆ ಎಂದು ವೇಣುಗೋಪಾಲ್ ತಮ್ಮ‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಳೆದ ವಾರ ಜಗನ್‌ ಮತ್ತು ಕಲ್ಲಂ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಅನುಮತಿ ಕೋರಿ ಅಟಾರ್ನಿ ಜನರಲ್‌ ವೇಣುಗೋಪಾಲ್‌ ಅವರಿಗೆ ಸುಪ್ರೀಂ ಕೋರ್ಟ್‌ ವಕೀಲ ಹಾಗೂ ಭಾರತೀಯ ಜನತಾ ಪಕ್ಷದ ವಕ್ತಾರ ಅಶ್ವಿನಿ ಕುಮಾರ್‌ ಉಪಾಧ್ಯಾಯ ಪತ್ರ ಬರೆದಿದ್ದರು.

Also Read
ಆಂಧ್ರ ಸಿಎಂ ಜಗನ್‌ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಒಪ್ಪಿಗೆ ಕೋರಿ ಅಟಾರ್ನಿ ಜನರಲ್‌ಗೆ ಪತ್ರ

ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಅವರು ತಮ್ಮ ಪತ್ರದಲ್ಲಿ ಆಕ್ಷೇಪಾರ್ಹ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ಪ್ರತಿಕ್ರಿಯಿಸಿದ ಎ ಜಿ ವೇಣುಗೋಪಾಲ್‌ ಅವರು, "ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರದಲ್ಲಿನ ಆರೋಪದ ಸ್ವರೂಪದ ಬಗ್ಗೆ ಚೆನ್ನಾಗಿ ಅರಿವಿದೆ ” ಎಂದು ಉಪಾಧ್ಯಾಯ ಅವರ ಪತ್ರಕ್ಕೆ ನೀಡಿರುವ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

ಸಿಎಂ ಜಗನ್‌ ಮೋಹನ್‌ ರೆಡ್ಡಿ ಅವರು ಪತ್ರ ಬರೆದ ಸಮಯ ಮತ್ತು ಅದರ ಪ್ರಚಾರವೇ ಅನುಮಾನದಿಂದ ಕೂಡಿದೆ. ನ್ಯಾ.ರಮಣ ನೇತೃತ್ವದ ಪೀಠ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ತುರ್ತು ವಿಲೇವಾರಿಗೆ ಆದೇಶಿಸಿದ ಬೆನ್ನಿಗೇ ಪತ್ರ ಬರೆಯಲಾಗಿದೆ ಎಂದು ವೇಣುಗೋಪಾಲ್‌ ತಮ್ಮ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ. ಮುಂದುವರೆದು, “ನೀವು (ಉಪಾಧ್ಯಾಯ) ಗುರುತಿಸಿದಂತೆ ಜಗನ್‌ ವಿರುದ್ಧ ಅಕ್ಟೋಬರ್‌ ವೇಳೆಗೆ 31 ಪ್ರಕರಣಗಳು ಬಾಕಿ ಇವೆ” ಎಂದು ವೇಣುಗೋಪಾಲ್‌ ಉಪಾಧ್ಯಾಯ ಅವರು ತಮ್ಮ ಪತ್ರದಲ್ಲಿ ಸಹಮತ ಸೂಚಿಸಿದ್ದಾರೆ.

ಜಗನ್‌ ಅವರ ಆರೋಪದ ಹಿನ್ನೆಲೆಯಲ್ಲಿ ಉಪಾಧ್ಯಾಯ ಅವರು ನ್ಯಾಯಾಂಗ ನಿಂದನೆ ಕಾಯಿದೆ 1971ರ ಸೆಕ್ಷನ್‌ 15(1)(b) ಯ ಜೊತೆಗೆ ಸುಪ್ರೀಂ ಕೋರ್ಟ್‌ ನಿಂದನೆಗಾಗಿ ನಿಯಂತ್ರಣಾ ಪ್ರಕ್ರಿಯೆಯ ನಿಯಮಗಳು 1975ರ ನಿಯಮ 3ರ ಅಡಿ ಕ್ರಮಕ್ಕೆ ಅನುಮತಿ ನೀಡುವಂತೆ ಎ ಜಿ ವೇಣುಗೋಪಾಲ್‌ ಅವರನ್ನು ಕೋರಿ ಪತ್ರ ಬರೆದಿದ್ದರು.

Kannada Bar & Bench
kannada.barandbench.com