ಉತ್ತರಪ್ರದೇಶ ಭದ್ರತಾ ಪಡೆ ವಿರುದ್ಧ ದಿಗ್ವಿಜಯ್ ಸಿಂಗ್ ಟ್ವೀಟ್: ನ್ಯಾಯಾಂಗ ನಿಂದನೆಗೆ ಸಮ್ಮತಿ ಸೂಚಿಸಲು ಎಜಿ ನಿರಾಕರಣೆ

"ನಾನು ಎರಡೂ ಟ್ವೀಟ್ ಗಳನ್ನು ಎಚ್ಚರಿಕೆಯಿಂದ ಗಮನಿಸಿದ್ದೇನೆ. ಹೇಳಿಕೆಗಳನ್ನು ಅಪ್ರಸ್ತುತ ಎನ್ನಲಾಗದು. ಆದರೂ ಅವು ಕ್ರಿಮಿನಲ್ ನ್ಯಾಯಾಂಗ ನಿಂದನೆಗೆ ಅರ್ಹ ಎಂದು ನಾನು ನಂಬುವುದಿಲ್ಲ " ಎಂಬುದಾಗಿ ಎಜಿ ವೇಣುಗೋಪಾಲ್ ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯ ದಿಗ್ವಿಜಯ ಸಿಂಗ್
ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯ ದಿಗ್ವಿಜಯ ಸಿಂಗ್ ದ ವೀಕ್
Published on

ಉತ್ತರಪ್ರದೇಶ ಸರ್ಕಾರ, ವಿಶೇಷ ಭದ್ರತಾ ಪಡೆ ರಚನೆ ಟೀಕಿಸಿ ಟ್ವೀಟ್ ಮಾಡಿದ್ದ ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯ ದಿಗ್ವಿಜಯ ಸಿಂಗ್ ಅವರನ್ನು ಕ್ರಿಮಿನಲ್ ನ್ಯಾಯಾಂಗ ನಿಂದನೆ ಮೊಕದ್ದಮೆ ವ್ಯಾಪ್ತಿಗೆ ತರಲು ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ನಿರಾಕರಿಸಿದ್ದಾರೆ.

ಸೆಪ್ಟೆಂಬರ್ 15 ರಂದು ಪೋಸ್ಟ್ ಮಾಡಲಾದ ಸಿಂಗ್ ಮಾಡಿದ್ದ ಎರಡು ಟ್ವೀಟ್‌ಗಳು ಹೀಗಿವೆ:

"ಉತ್ತರಪ್ರದೇಶದಲ್ಲಿ, ಯೋಗಿ ಆದಿತ್ಯನಾಥ್ ಅವರು ಎಸ್‌ಎಸ್‌ಎಫ್ (ವಿಶೇಷ ಭದ್ರತಾ ಪಡೆ) ರಚಿಸಿದ್ದು ಆ ಪೊಲೀಸರು ಯಾವುದೇ ವಾರಂಟ್ ಇಲ್ಲದೆ ಯಾರದೇ ಮನೆ ಮೇಲೆ ದಾಳಿ ಮಾಡಬಹುದು, ಯಾರನ್ನೂ ಬಂಧಿಸಬಹುದು ಮತ್ತು ಸರ್ಕಾರದ ಅನುಮತಿಯಿಲ್ಲದೆ ನ್ಯಾಯಾಲಯದ ಮೊರೆ ಹೋಗುವಂತಿಲ್ಲ”

ಭಾರತೀಯ ಸಂವಿಧಾನ ಅಂತಹ ಕಾನೂನಿಗೆ ಅನುಮತಿ ನೀಡುತ್ತದೆಯೇ? ದೇಶದ ನ್ಯಾಯಾಂಗ ಅಂತಹ ಕಾನೂನನ್ನು ಅಸಂವಿಧಾನಿಕವೆಂದು ಪರಿಗಣಿಸುವುದಿಲ್ಲವೇ? ಅಥವಾ ಒತ್ತಡದಲ್ಲಿರುವ ಸರ್ಕಾರದ ಪರವಾಗಿ ನೀವು ನಿರ್ಧರಿಸುತ್ತೀರಾ?”

ಟ್ವೀಟ್‌ಗಳ ಕುರಿತು ವಕೀಲ ಸುಮನ್ ಸೂದನ್ ಅವರು ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಅಟಾರ್ನಿ ಜನರಲ್ ಹೀಗೆ ಹೇಳಿದ್ದಾರೆ:

" …ಟ್ವೀಟ್‌ಗಳನ್ನು ನಿಜವಾಗಿಯೂ ಶ್ರೀ ದಿಗ್ವಿಜಯ ಸಿಂಗ್ ಮಾಡಿದ್ದಾರೆ ಎಂಬ ಆಧಾರದ ಮೇಲೆ ಮುಂದುವರಿಯುತ್ತಿದ್ದೇನೆ. ಎರಡೂ ಟ್ವೀಟ್ ಗಳನ್ನು ಎಚ್ಚರಿಕೆಯಿಂದ ಗಮನಿಸಿದ್ದೇನೆ. ಹೇಳಿಕೆಗಳನ್ನು ಅಪ್ರಸ್ತುತ ಎನ್ನಲಾಗದು. ಆದರೂ ಅವು ಕ್ರಿಮಿನಲ್ ನ್ಯಾಯಾಂಗ ನಿಂದನೆಗೆ ಅರ್ಹ ಎಂದು ನಾನು ನಂಬುವುದಿಲ್ಲ "

ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್

ಸುಪ್ರೀಂ ಕೋರ್ಟ್ ಮತ್ತು ಅದರ ತೀರ್ಪುಗಳ ಘನತೆ ಮತ್ತು ಪಾವಿತ್ರ್ಯತೆಯ ಮೇಲೆ ಟ್ವೀಟ್ ಗಳು ಗಂಭೀರ ಅಪಮಾನಕರ ಆರೋಪ ಮಾಡಿವೆ ಎಂದು ಸೂದನ್ ಹೇಳಿದ್ದರು.

ಈ ಟ್ವೀಟ್‌ಗಳು ಭಾವನೆಗಳನ್ನು ಘಾಸಿಗೊಳಿಸುವಂತಿವೆ ಮತ್ತು ನ್ಯಾಯ ವಿತರಣಾ ವ್ಯವಸ್ಥೆಯಲ್ಲಿ ದೇಶ ಇರಿಸಿದ ನಂಬಿಕೆಯನ್ನು ಅಲುಗಾಡಿಸುವ ಸಾಮರ್ಥ್ಯ ಹೊಂದಿವೆ ಎಂದು ಅವರು ದೂರಿದ್ದರು. ಸಿಂಗ್ ಅವರ ಟ್ವೀಟ್ ಹಾನಿಕಾರಕವಾಗಿದ್ದು ಸಾರ್ವಜನಿಕರ ದಿಕ್ಕು ತಪ್ಪಿಸಿ ಅರಾಜಕ ಸ್ಥಿತಿಗೆ ತಳ್ಳಬಹುದು ಎಂದು ಅವರು ವಾದಿಸಿದ್ದರು.

Kannada Bar & Bench
kannada.barandbench.com