ಸುಪ್ರೀಂನಲ್ಲಿನ ತಮ್ಮ ಗೈರು ಹಾಜರಿ ಬಗ್ಗೆ ಸಮರ್ಥನೆ ನೀಡಿದ ಎಜಿ: ಮಧ್ಯಸ್ಥಿಕೆ ಪ್ರಕರಣ ಕಡಿಮೆ ಮಹತ್ವದ್ದು ಎಂದ ರೋಹಟ್ಗಿ

ಅಟಾರ್ನಿ ಜನರಲ್‌ ಅವರ ಗೈರುಹಾಜರಿಯ ಬಗ್ಗೆ ಅವರ ಕಚೇರಿಯು ಅಧಿಕೃತ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಎಜಿ ಅವರ ಗೈರಿಗೆ ಭಾರತ ಸರ್ಕಾರ ಮತ್ತು ರಿಲಯನ್ಸ್ ನಡುವಿನ ಬಹು-ಶತಕೋಟಿ ಡಾಲರ್ ಮೌಲ್ಯದ ಮಧ್ಯಸ್ಥಿಕೆ ಪ್ರಕರಣದ ಕಾರಣ ನೀಡಿದೆ.
AG R Venkataramani , Mukul Rohatgi and Supreme Court
AG R Venkataramani , Mukul Rohatgi and Supreme Court
Published on

ಇತ್ತೀಚೆಗೆ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮಂಡಳಿ ಸುಧಾರಣಾ ಕಾಯ್ದೆ ಪ್ರಕರಣದ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಅವರು ಕೇಂದ್ರ ಸರ್ಕಾರದ ವಿರುದ್ಧ ತೀಕ್ಷ್ಣ ಟೀಕೆಗಳನ್ನು ಮಾಡಿದ್ದರು. ತಮ್ಮ ನೇತೃತ್ವದ ಪೀಠದ ಮುಂದಿನ ವಿಚಾರಣೆಯನ್ನು ತಪ್ಪಿಸಲು ಕೇಂದ್ರ ಸರ್ಕಾರವು ಪ್ರಯತ್ನಿಸುತ್ತಿದೆ ಎಂದು ಆಕ್ಷೇಪಿಸಿದ್ದರು. ಈ ವಿಚಾರವಾಗಿ ಇದೀಗ ಎಜಿ

ನ್ಯಾಯಮಂಡಳಿ ಸುಧಾರಣಾ ಕಾಯ್ದೆ, 2021 ರ ನಿಬಂಧನೆಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳ ವಿಚಾರಣೆಯನ್ನು ಮುಂದೂಡಬೇಕೆಂಬ ಕೇಂದ್ರ ಸರ್ಕಾರದ ಕೋರಿಕೆಗೆ ಸಿಜೆಐ ನವೆಂಬರ್ 6ರಂದು ಗಂಭೀರ ಅಸಮಾಧಾನ ವ್ಯಕ್ತಪಡಿಸಿದ್ದರು. ಅಟಾರ್ನಿ ಜನರಲ್ (ಎಜಿ) ಆರ್ ವೆಂಕಟರಮಣಿ ಅವರ ಅಲಭ್ಯತೆಯು ವಿಚಾರಣೆಯ ಮುಂದೂಡಿಕೆ ಕೋರಲು ಕಾರಣವೆಂದು ಸರ್ಕಾರ ಉಲ್ಲೇಖಿಸಿತ್ತು.

ತಮ್ಮ ನಿವೃತ್ತಿಗೆ ಕೆಲವೇ ದಿನಗಳು ಬಾಕಿ ಇರುವುದರಿಂದ ಸರ್ಕಾರ ತಮ್ಮ ನೇತೃತ್ವದ ಪೀಠದಲ್ಲಿ ವಿಚಾರಣೆ ನಡೆಯುವುದನ್ನು ತಪ್ಪಿಸಲು ಪ್ರಯತ್ನಿಸುತ್ತಿದೆ ಎಂದು ಸಿಜೆಐ ಗವಾಯಿ ಅವರು ಆಕ್ಷೇಪಿಸಿದ್ದರು. ಪ್ರಕರಣವನ್ನು ವಿಸ್ತೃತ ಪೀಠಕ್ಕೆ ಉಲ್ಲೇಖಿಸುವಂತೆ ಸರ್ಕಾರ ಸಲ್ಲಿಸಿದ್ದ ಅರ್ಜಿಗೂ ನ್ಯಾಯಾಲಯ ಇದೇ ವೇಳೆ ಆಕ್ಷೇಪ ವ್ಯಕ್ತಪಡಿಸಿತ್ತು.

"ನಾವು ನಿಮಗೆ ಈಗಾಗಲೇ ಎರಡು ಬಾರಿ ಅವಕಾಶ ನೀಡಿದ್ದೇವೆ. ಇನ್ನೂ ಎಷ್ಟು ಸಮಯ ನೀಡಬೇಕು? ನವೆಂಬರ್ 24 ರ ನಂತರ (ಸಿಜೆಐ ಗವಾಯಿ ಅಧಿಕಾರದಿಂದ ಕೆಳಗಿಳಿಯಲಿರುವ ದಿನಾಂಕ) ನೀವು ಬಯಸಿದರೆ, ನಮಗೆ ತಿಳಿಸಿ. (ನೀವು ಮಾಡುತ್ತಿರುವುದು) ನ್ಯಾಯಾಲಯಕ್ಕೆ ತುಂಬಾ ಅನ್ಯಾಯ. ನೀವು ಪ್ರತಿ ಬಾರಿಯೂ ಅಂತಾರಾಷ್ಟ್ರೀಯ ಮಧ್ಯಸ್ಥಿಕೆಯ ಕಾರಣ ಹೇಳುತ್ತಿದ್ದೀರಿ. ನಿಮ್ಮ ಬಳಿ ವಕೀಲರ ತಂಡವೇ ಇದೆ. ಆದಾಗ್ಯೂ, ನೀವು ವಿಸ್ತೃತ ಪೀಠಕ್ಕೆ ಪ್ರಕರಣವನ್ನು ಉಲ್ಲೇಖಿಸಲು ಕೋರಿ ಮಧ್ಯರಾತ್ರಿ ಅರ್ಜಿಗಳನ್ನು ಸಲ್ಲಿಸುತ್ತೀರಿ!" ಎಂದು ಸಿಜೆಐ ನ್ಯಾಯಾಲಯದಲ್ಲಿ ತಮ್ಮ ತೀವ್ರ ಅಸಮಾಧಾನ ದಾಖಲಿಸಿದ್ದರು.

ಅಟಾರ್ನಿ ಜನರಲ್‌ ಅವರ ಗೈರುಹಾಜರಿಯ ಬಗ್ಗೆ ಅವರ ಕಚೇರಿಯು ಅಧಿಕೃತ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಎಜಿ ಅವರು ನ್ಯಾಯಾಲಯದ ನಿಯಮಿತ ಕೆಲಸದಿಂದ ಗೈರುಹಾಜರಾಗಿರುವುದಕ್ಕೆ ಭಾರತ ಸರ್ಕಾರ ಮತ್ತು ರಿಲಯನ್ಸ್ ನಡುವಿನ ಬಹು-ಶತಕೋಟಿ ಡಾಲರ್ ಮೌಲ್ಯದ ಮಧ್ಯಸ್ಥಿಕೆ ಪ್ರಕರಣದಲ್ಲಿ ತೊಡಗಿಸಿಕೊಂಡಿರುವುದು ಕಾರಣವಾಗಿದೆ ಎಂದು ಸ್ಪಷ್ಟಪಡಿಸಿದೆ.

ಭಾರತ ಸರ್ಕಾರ ಮತ್ತು ರಿಲಯನ್ಸ್‌ ನಡುವಿನ ಈ ವಿವಾದವು ಹೈಡ್ರೋಕಾರ್ಬನ್ ಉತ್ಪಾದನಾ ಹಂಚಿಕೆ ಒಪ್ಪಂದಕ್ಕೆ ಸಂಬಂಧಿಸಿದೆ. ಇದರಲ್ಲಿ ಸರ್ಕಾರವು ಸಾರ್ವಜನಿಕ ವಿಶ್ವಾಸದ ತತ್ವವನ್ನು ರಿಲಯನ್ಸ್‌ ಉಲ್ಲಂಘಿಸಿದೆ ಎಂದು ಆರೋಪಿಸಿದೆ. ಈ ವಿಷಯದ ಪ್ರಾಮುಖ್ಯತೆ ಹಾಗೂ ರಾಷ್ಟ್ರೀಯ ಆಸ್ತಿಯ ಮೇಲೆ ಅದರ ನೇರ ಪ್ರಭಾವವನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರದ ಪರವಾಗಿ ವಿಚಾರಣೆಗಳನ್ನು ನಡೆಸುವ ಮತ್ತು ಪ್ರಕರಣವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಎಜಿ ಅವರಿಗೆ ವೈಯಕ್ತಿಕವಾಗಿ ವಹಿಸಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಮಧ್ಯಸ್ಥಿಕೆ ಪ್ರಕರಣವು 2011 ರಿಂದ ಬಾಕಿ ಇದ್ದು ಈಗ ಅಂತಿಮ ವಾದಗಳ ಹಂತವನ್ನು ತಲುಪಿದೆ. ಹಾಗಾಗಿ ಎಜಿ ಅವರ ನಿರಂತರ ಉಪಸ್ಥಿತಿಯ ಅಗತ್ಯವಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ವಿಷಯದಲ್ಲಿನ ಅವರ ಪಾಲ್ಗೊಳ್ಳುವಿಕೆಯು ಅವರನ್ನು ದಿನನಿತ್ಯದ ನ್ಯಾಯಾಲಯದ ಕಲಾಪಗಳಲ್ಲಿ ತೊಡಗಿಕೊಳ್ಳುವುದರಿಂದ ಕಳೆದ ವಾರದಿಂದ ದೂರವಿಟ್ಟಿದೆ ಎಂದು ಪ್ರಕಟಣೆ ತಿಳಿಸಿದೆ.

ಎಜಿ ಅವರು ನೀಡಿರುವ ಕಾರಣದ ಬಗ್ಗೆ ಕಾನೂನು ವಲಯದಲ್ಲಿ ಸಮಾಧಾನವೇನೂ ಮೂಡಿಲ್ಲ. ಮಾಜಿ ಅಡ್ವೊಕೇಟ್‌ ಜನರಲ್‌ ಮುಕುಲ್ ರೋಹಟ್ಗಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಅಂತಾರಾಷ್ಟ್ರೀಯ ಮಧ್ಯಸ್ಥಿಕೆಯು ಎಷ್ಟೇ ಮಹತ್ವದ್ದಾಗಿದ್ದರೂ, ಸುಪ್ರೀಂ ಕೋರ್ಟ್ ಮುಂದೆ ಬಾಕಿ ಇರುವ ಸಾಂವಿಧಾನಿಕ ಪ್ರಕರಣಕ್ಕಿಂತ ಮಹತ್ವದ್ದಲ್ಲ. "ಅದು ವಾಣಿಜ್ಯ ವಿಷಯವಾಗಿದ್ದು, ಕಡಿಮೆ ಮಹತ್ವದ್ದಾಗಿದೆ" ಎಂದು ಹೇಳಿದರು.

ಮುಂದುವರೆದು ರೋಹಟ್ಗಿ ಅವರು, ಅಟಾರ್ನಿ ಜನರಲ್ ಅವರ ಸಾಂವಿಧಾನಿಕ ಪಾತ್ರದ ಬಗ್ಗೆ ಮತ್ತು ಒಂದಕ್ಕೊಂದು ಅಡ್ಡಿಯಾಗದಂತೆ ಕೆಲಸಗಳ ನಿರ್ವಹಣೆಯನ್ನು ನಿಭಾಯಿಸುವ ಮುಂಗಾಣ್ಕೆಯ ಬಗ್ಗೆ ವಿವರಿಸುತ್ತಾ, ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಅಸಮಾಧಾನವು "ಅರ್ಥವಾಗುವಂಥದ್ದಾಗಿದೆ" ಎಂದರು.

"ನಾನು ವೈಯಕ್ತಿಕವಾಗಿ ಎಂದಿಗೂ ವಿಚಾರಣೆಯನ್ನು ಮಧ್ಯದಲ್ಲಿಯೇ ಬಿಟ್ಟು ಅಂತಾರಾಷ್ಟ್ರೀಯ ಮಧ್ಯಸ್ಥಿಕೆಗೆ ಹೋಗುತ್ತಿರಲಿಲ್ಲ. ಒಂದೊಮ್ಮೆ ಎರಡೂ ಒಂದಕ್ಕೊಂದು ಅಡ್ಡಿಯಾಗುವಂತಿದ್ದರೆ ಅಂತಹ ಸಂಘರ್ಷ ತಪ್ಪಿಸಲು ಮುಂಚಿತವಾಗಿಯೇ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ" ಎಂದು ಅವರು ಹೇಳಿದರು.

ಇದೇ ವೇಳೆ ರೋಹಟ್ಗಿ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಿಕಸ್‌ ಕ್ಯೂರಿಯ ಅಗತ್ಯವಿಲ್ಲ ಎನ್ನುವ ನ್ಯಾಯಪೀಠದ ತೀರ್ಮಾನಕ್ಕೂ ತಮ್ಮ ಸಹಮತ ವ್ಯಕ್ತಪಡಿಸಿದರು. ಭಾರತ ಸರ್ಕಾರವೇ ವಕೀಲರ ಗುಂಪನ್ನು ಹೊಂದಿರುವಾಗ ಅಮಿಕಸ್‌ ಕ್ಯೂರಿಯ ಅಗತ್ಯವಿಲ್ಲ ಎಂದರು.

Kannada Bar & Bench
kannada.barandbench.com