ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಎಜಿ ಮತ್ತು ಎಸ್‌ಜಿ; ನ್ಯಾಯಾಲಯ ಕಾರ್ಯಗಳಲ್ಲಿ ಸಿಜೆಐ ಭಾಗಿ

ಅಯೋಧ್ಯೆ ತೀರ್ಪು ನೀಡಿದ್ದ ಪೀಠದ ಭಾಗವಾಗಿದ್ದವರಲ್ಲಿ ನ್ಯಾ. ಅಶೋಕ್‌ ಭೂಷಣ್‌ ಒಬ್ಬರಷ್ಟೇ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ. ಅವರು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ ಪ್ರಸ್ತುತ ಅಧ್ಯಕ್ಷರು.
ಸಿಜೆಐ ಡಿ.ವೈ.ಚಂದ್ರಚೂಡ್ ಮತ್ತು ಸುಪ್ರೀಂ ಕೋರ್ಟ್
ಸಿಜೆಐ ಡಿ.ವೈ.ಚಂದ್ರಚೂಡ್ ಮತ್ತು ಸುಪ್ರೀಂ ಕೋರ್ಟ್

ಬಾಬರಿ ಮಸೀದಿ- ರಾಮ ಜನ್ಮಭೂಮಿ ತೀರ್ಪಿನ ಭಾಗವಾಗಿದ್ದ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರ ಉದ್ಘಾಟನೆಯ ದಿನವಾದ ನಾಳೆ (ಸೋಮವಾರ ಜನವರಿ 22) ನಿಯಮಿತ ನ್ಯಾಯಾಲಯ ಕಾರ್ಯಗಳಲ್ಲಿ ಭಾಗಿಯಾಗಲಿದ್ದಾರೆ.

ಸೋಮವಾರ ಸುಪ್ರೀಂ ಕೋರ್ಟ್‌ಗೆ ನಿಯಮಿತ ಕೆಲಸದ ದಿನವಾಗಿರುವುದರಿಂದ 2019ರಲ್ಲಿ ಅಯೋಧ್ಯೆ ತೀರ್ಪು ನೀಡಿದವರಲ್ಲಿ ಒಬ್ಬರಾದ ಅವರು ಸಮಾರಂಭದಲ್ಲಿ ಭಾಗವಹಿಸುತ್ತಿಲ್ಲ.

ಅಧಿಕೃತ ಕಾರ್ಯ ನಿಮಿತ್ತ ಅಯೋಧ್ಯೆ ಪೀಠದ ಭಾಗವಾಗಿದ್ದ ಮಾಜಿ ಸಿಜೆಐಗಳಾದ ರಂಜನ್ ಗೊಗೊಯ್, ಎಸ್ ಎ ಬೊಬ್ಡೆ ಹಾಗೂ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅಬ್ದುಲ್ ನಜೀರ್ (ಆಂಧ್ರಪ್ರದೇಶದ ಹಾಲಿ ರಾಜ್ಯಪಾಲರು) ಕೂಡ ಸಮಾರಂಭದಲ್ಲಿ ಭಾಗವಹಿಸುತ್ತಿಲ್ಲ.

ಅಯೋಧ್ಯೆ ತೀರ್ಪು ನೀಡಿದ್ದ ಪೀಠದ ಭಾಗವಾಗಿದ್ದವರಲ್ಲಿ ನ್ಯಾ. ಅಶೋಕ್‌ ಭೂಷಣ್‌ ಒಬ್ಬರಷ್ಟೇ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ. ಅವರು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ ಪ್ರಸ್ತುತ ಅಧ್ಯಕ್ಷರು. "ನಿನ್ನೆ ನನ್ನ (ಪ್ರಯಾಣದ) ಟಿಕೆಟ್‌ಗಳನ್ನು ಕಾಯ್ದಿರಿಸಿದ್ದೆ. ನಾನು ಹಾಜರಾಗುತ್ತೇನೆ" ಎಂದು ನ್ಯಾ. ಭೂಷಣ್ ʼಬಾರ್ ಅಂಡ್‌ ಬೆಂಚ್‌ʼಗೆ ತಿಳಿಸಿದರು.

ನ್ಯಾಯಮೂರ್ತಿ ಅಶೋಕ್ ಭೂಷಣ್
ನ್ಯಾಯಮೂರ್ತಿ ಅಶೋಕ್ ಭೂಷಣ್

ಅಲಿಗಢ ವಿಶ್ವವಿದ್ಯಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರು ಜನವರಿ 23ರಂದು (ಮಂಗಳವಾರ) ಸುಪ್ರೀಂ ಕೋರ್ಟ್‌ನ ಏಳು ನ್ಯಾಯಮೂರ್ತಿಗಳ ಪೀಠದೆದುರು ಕೇಂದ್ರದ ಪರವಾಗಿ ಹಾಜರಾಗಬೇಕಿರುವುದರಿಂದ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ.

ರಾಮ ಮಂದಿರ ಕಾರ್ಯಕ್ರಮಕ್ಕೆ ಆಹ್ವಾನಿಸಲಾದ ಕೆಲವೇ ಅತಿಗಣ್ಯ ಅತಿಥಿಗಳಲ್ಲಿ ಎಸ್‌ಜಿ ಮೆಹ್ತಾ ಒಬ್ಬರು. ಆದರೆ ಸಮಾರಂಭದಲ್ಲಿ ಭಾಗವಹಿಸಿದರೆ ಮಂಗಳವಾರ ಸಮಯಕ್ಕೆ ಸರಿಯಾಗಿ ನ್ಯಾಯಾಲಯಕ್ಕೆ ಬರಲು ಸಾಧ್ಯವಾಗುವುದಿಲ್ಲ ಎಂದು ದೇಶದ ಉನ್ನತ ಕಾನೂನು ಅಧಿಕಾರಿಯಾದ ಅವರು ʼಬಾರ್‌ ಅಂಡ್‌ ಬೆಂಚ್‌ʼಗೆ ತಿಳಿಸಿದರು.

"ನಾನು ನ್ಯಾಯಾಲಯದಲ್ಲಿ ಏಳು ನ್ಯಾಯಮೂರ್ತಿಗಳ ಪೀಠದೆದುರು ಖುದ್ದಾಗಿ ಹಾಜರಾಗದಿದ್ದರೆ ಅದು ಖಂಡಿತವಾಗಿಯೂ ಅಗೌರವದ ಸಂಕೇತವಾಗುತ್ತದೆ. ಜೊತೆಗೆ, ನಾಳೆ ರಾತ್ರಿ ದೆಹಲಿಗೆ ಹಿಂತಿರುಗಲು ಯಾವುದೇ ವಿಮಾನಗಳಿಲ್ಲ. ಹೀಗಾಗಿ, ಜನವರಿ 23ರಂದು ಮಧ್ಯಾಹ್ನ 3 ಗಂಟೆಗೆ ನಾನು ನ್ಯಾಯಾಲಯಕ್ಕೆ ಹಾಜರಾಗದೆ ಯಾವುದೇ ಮಾರ್ಗವಿಲ್ಲ" ಎಂದು ಎಸ್ ಜಿ ಮೆಹ್ತಾ ಹೇಳಿದರು.

ಭಾರತದ ಅಟಾರ್ನಿ ಜನರಲ್ ಹಾಗೂ ದೇಶದ ಅತ್ಯುನ್ನತ ಕಾನೂನು ಅಧಿಕಾರಿ ಆರ್ ವೆಂಕಟರಮಣಿ ಕೂಡ ಅಧಿಕೃತ ಕೆಲಸದ ಹಿನ್ನೆಲೆಯಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗುತ್ತಿಲ್ಲ.

Related Stories

No stories found.
Kannada Bar & Bench
kannada.barandbench.com