.jpeg?w=480&auto=format%2Ccompress&fit=max)
.jpeg?w=480&auto=format%2Ccompress&fit=max)
ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಮೊತ್ತದ ಹಗರಣವನ್ನು ಸಿಬಿಐ ತನಿಖೆಗೆ ವರ್ಗಾವಣೆ ಮಾಡುವಂತೆ ಕೋರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ, ಸಿಬಿಐ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ನೋಟಿಸ್ ಜಾರಿಗೊಳಿಸಲು ಕರ್ನಾಟಕ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಯೂನಿಯನ್ ಬ್ಯಾಂಕ್ ಪರ ಹಾಜರಾಗಿದ್ದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು “ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ತನಿಖೆಯನ್ನು ಸಿಬಿಐಗೆ ವಹಿಸಿದೆ. ಇದೇ ಹಾದಿಯನ್ನು ತುಳಿಯುವ ಮೂಲಕ ರಾಜ್ಯ ಸರ್ಕಾರವು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು” ಎಂದು ಕೋರಿದರು.
ಮುಂದುವರಿದು, “ಯಾವುದೇ ಪ್ರಕರಣದಲ್ಲಿ ₹50 ಕೋಟಿಗಿಂತಲೂ ಹೆಚ್ಚಿನ ಮೊತ್ತದ ಹಗರಣ ಕಂಡುಬಂದರೆ ಅದನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ಸ್ಥಳೀಯ ಪೊಲೀಸರೇ ತನಿಖೆ ನಡೆಸುತ್ತಿದ್ದಾರೆ. ಬ್ಯಾಂಕ್‌ಗಳ ಬದ್ಧತೆ/ಪ್ರಾಮಾಣಿಕತೆ ಕಾಯ್ದುಕೊಳ್ಳುವುದು ಭಾರತೀಯ ರಿಸರ್ವ್ ಬ್ಯಾಂಕ್ ಕರ್ತವ್ಯವಾಗಿದೆ. ಬ್ಯಾಂಕ್ ಹಗರಣಗಳ ತನಿಖೆಗೆ ಅಂತರರಾಷ್ಟ್ರೀಯ ಪ್ರಾಮುಖ್ಯತೆ ಇದೆ. ರಾಜ್ಯ ಸರ್ಕಾರ, ಸ್ಥಳೀಯ ಪೊಲೀಸರು ಇಂತಹ ಹಗರಣಗಳ ತನಿಖೆ ನಡೆಸಬಾರದು. ಹಾಗಾಗಿ, ಇದನ್ನು ಸಿಬಿಐಗೆ ವಹಿಸಬೇಕು" ಎಂದು ಕೋರಿದರು.
“ದೇಶದ ಬ್ಯಾಂಕ್‌ಗಳ ಪ್ರಾಮಾಣಿಕತೆ ಬಗ್ಗೆ ಹೆಚ್ಚು ಆತಂಕಿತರಾಗಿದ್ದೇವೆ. ಇಲ್ಲಿ ಸಂಸದೀಯ ಉದ್ದೇಶ (ಪಾರ್ಲಿಮೆಂಟರಿ ಇಂಟೆಂಟ್) ಮತ್ತು ಕೇಂದ್ರದ ಉದ್ದೇಶಕ್ಕೆ ಬದ್ಧವಾಗಬೇಕು. ಆರ್‌ಐಬಿ ನಿರ್ದೇಶನದಂತೆ ಯೂನಿಯನ್ ಬ್ಯಾಂಕ್ ಪ್ರಕರಣವನ್ನು ಸಿಬಿಐಗೆ ನೀಡಿದೆ. ದೇಶಾದ್ಯಂತ ಸಾವಿರಾರು ಸರ್ಕಾರಿ ಬ್ಯಾಂಕ್‌ಗಳಿದ್ದು, ಯಾವುದೇ ಹಗರಣ ಹೊರಬಂದ ತಕ್ಷಣ ಅವು ಸ್ಥಳೀಯ ತನಿಖಾ ಸಂಸ್ಥೆ ಮುಂದೆ ವಿಚಾರಣೆಗೆ ಕೋರುವುದಿಲ್ಲ. ತನಿಖಾ ಮಟ್ಟ, ಸಮರ್ಥತೆ, ಲಭ್ಯವಿರುವ ವ್ಯವಸ್ಥೆ ಮತ್ತು ನಿಷ್ಪಕ್ಷಪಾತತೆ ದೃಷ್ಟಿಯಿಂದ ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂದು ಆರ್‌ಬಿಐ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿದೆ. ಈ ನೆಲೆಯಲ್ಲಿ ಸಂಸದೀಯ ಉದ್ದೇಶ ಮತ್ತು ಆರ್‌ಬಿಐ ಬ್ಯಾಂಕ್‌ಗಳಿಗೆ ನೀಡಿರುವ ನಿರ್ದೇಶನಕ್ಕೆ ಸ್ಥಳೀಯ ತನಿಖಾ ಸಂಸ್ಥೆ ತಲೆಬಾಗಬೇಕು. ಬ್ಯಾಂಕ್‌ನಲ್ಲಿ ಸಣ್ಣ ಸಮಸ್ಯೆಯಾದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಣಾಮ ಉಂಟಾಗುತ್ತದೆ. ಬ್ಯಾಂಕ್‌ನಲ್ಲಿ ಹೂಡಿಕೆ, ಎಫ್‌ಡಿಐ ಎಲ್ಲದಕ್ಕೂ ಸಮಸ್ಯೆಯಾಗುತ್ತದೆ” ಎಂದರು.
“ಬೇರೆ ವಿಚಾರಗಳು ಹೊರಬರುತ್ತಿವೆ. ಆದರೆ, ಅಟಾರ್ನಿ ಜನರಲ್ ಹುದ್ದೆಯಲ್ಲಿರುವ ನಾನು ಅವುಗಳ ಬಗ್ಗೆ ಮಾತನಾಡಬಾರದು. ಸಾಧ್ಯವಾದಷ್ಟು ಮಟ್ಟಕ್ಕೆ ನಾನು ತಟಸ್ಥವಾಗಿರುತ್ತೇನೆ” ಎಂದರು.
ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ಯೂನಿಯನ್ ಬ್ಯಾಂಕ್ ಕೋರಿಕೆಯಂತೆ ಸಿಬಿಐ ತನಿಖೆ ನಡೆಸುತ್ತಿದೆ. ಸಿಬಿಐ ಇದುವರೆಗೆ ನಡೆಸಿರುವ ತನಿಖೆಯ ದಾಖಲೆಗಳು ಮತ್ತು ಎಸ್‌ಐಟಿ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಡಲು ಆದೇಶಿಸಬೇಕು. ಎರಡು ವಾರಗಳಲ್ಲಿ ವಿಸ್ತೃತವಾದ ಆಕ್ಷೇಪಣೆ ಸಲ್ಲಿಸಲಾಗುವುದು” ಎಂದರು.
ಉಭಯ ಪಕ್ಷಕಾರರ ವಾದ ಆಲಿಸಿದ ನ್ಯಾಯಾಲಯವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಆಗಸ್ಟ್ 7ಕ್ಕೆ ಮುಂದೂಡಿತು.