ಪ್ರಭುತ್ವವಾಗಲೀ, ವ್ಯಕ್ತಿಗಳಾಗಲೀ ಕಲೆಯ ಹೆಸರಿನಲ್ಲಿ ಸಮುದಾಯಗಳ ಅವಹೇಳನ ಮಾಡುವುದು ಸಂವಿಧಾನ ವಿರೋಧಿ: ಸುಪ್ರೀಂ

ಉನ್ನತ ಸಾಂವಿಧಾನಿಕ ಹುದ್ದೆಗಳಲ್ಲಿ ಇರುವ ಸಾರ್ವಜನಿಕ ವ್ಯಕ್ತಿಗಳು ಸಂವಿಧಾನವನ್ನು ಕಾಪಾಡುವ ಪ್ರಮಾಣವಚನ ಸ್ವೀಕರಿಸಿರುವುದರಿಂದ ಅವರಿಗೆ ಹೆಚ್ಚುವರಿ ಹೊಣೆಗಾರಿಕೆ ಇದೆ ಎಂದು ಹೇಳಿದ ಪೀಠ
Justice Ujjal Bhuyan
Justice Ujjal Bhuyan
Published on

ಗಣರಾಜ್ಯವಾಗಿ ರೂಪುಗೊಂಡು 75 ವರ್ಷಗಳು ಕಳೆದಿರುವ ಸಂದರ್ಭದಲ್ಲಿ ಕಲೆ, ಸಾಹಿತ್ಯ, ವಿಡಂಬನೆ, ಹಾಸ್ಯ ಕಲೆ, ಅಥವಾ ಸಿನಿಮಾದಂತಹ ಸೃಜನಾತ್ಮಕ ಅಭಿವ್ಯಕ್ತಿಗಳನ್ನು ಅಯಾಚಿತವಾಗಿ ಸಾಮುದಾಯಿಕ ದ್ವೇಷಕ್ಕೆ ಕಾರಣವೆಂದು ಪರಿಗಣಿಸುವುದು ಸಾಧುವಲ್ಲ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಹೇಳಿದೆ.

ಪರಿಪಕ್ವ ಪ್ರಜಾಸತ್ತಾತ್ಮಕ ವ್ಯವಸ್ಥೆ ತನ್ನ ಮೂಲಭೂತ ಮೌಲ್ಯಗಳ ಮೇಲೆ ವಿಶ್ವಾಸ ಹೊಂದಿರಬೇಕು; ಸೃಜನಾತ್ಮಕ ಅಭಿವ್ಯಕ್ತಿಯನ್ನು ಅನುಮಾನದಿಂದ ನೋಡುವುದು ಸರಿಯಲ್ಲ ಎಂದು ʼಘೂಸ್‌ಕೋರ್ ಪಂಡಿತ್" ಚಿತ್ರದ ಶೀರ್ಷಿಕೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಬಿ ವಿ ನಾಗರತ್ನ ಅವರೊಂದಿಗೆ ವಿಚಾರಣೆ ನಡೆಸಿದ  ನ್ಯಾಯಮೂರ್ತಿ ಉಜ್ಜಲ್‌ ಭುಯಾನ್‌ ಅವರು ಈ ವಿಚಾರ ತಿಳಿಸಿದರು.  

Also Read
ಪೌರತ್ವಕ್ಕೂ ಮುನ್ನವೇ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ವಿವಾದ: ರಾಜಕೀಯ ಪ್ರೇರಿತ, ದುರುದ್ದೇಶಪೂರಿತ ಎಂದ ಸೋನಿಯಾ

ಧರ್ಮ, ಭಾಷೆ, ಜಾತಿ ಅಥವಾ ಪ್ರಾಂತ್ಯದ ಆಧಾರದ ಮೇಲೆ ಯಾವುದೇ ಸಮುದಾಯವನ್ನು ಅವಹೇಳನ ಮಾಡುವುದು ಸಂವಿಧಾನ ವಿರೋಧಿ. ಪ್ರಭುತ್ವವಾಗಲೀ, ಪ್ರಭುತ್ವೇತರ ವ್ಯಕ್ತಿಗಳಾಗಲಿ ಭಾಷಣ, ಮೀಮ್ಸ್‌, ವ್ಯಂಗ್ಯಚಿತ್ರ, ದೃಶ್ಯಕಲೆ ಮುಂತಾದ ಮಾಧ್ಯಮಗಳ ಮೂಲಕ ಸಮುದಾಯಗಳನ್ನು ಅವಹೇಳನಮಾಡುವುದಕ್ಕೆ ಅನುಮತಿ ಇಲ್ಲ ಎಂದು ನ್ಯಾಯಾಲಯ ಇದೇ ವೇಳೆ ಸ್ಪಷ್ಟಪಡಿಸಿತು.

ಸಂವಿಧಾನ ಶಿಲ್ಪಿ ಡಾ. ಬಿ ಆರ್‌ ಅಂಬೇಡ್ಕರ್‌ ಅವರ ಸೌಹಾರ್ದತೆಯ ತತ್ವವನ್ನು ಉಲ್ಲೇಖಿಸಿದ ಅದು ಸಮಾಜದಲ್ಲಿ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಏಳಿಗೆಯನ್ನು ಬೆಳೆಸುವ ಅಗತ್ಯವಿದೆ ಎಂಬುದಾಗಿ ತಿಳಿಸಿತು. 

ಉನ್ನತ ಸಂವಿಧಾನಿಕ ಹುದ್ದೆಗಳಲ್ಲಿ ಇರುವ ಸಾರ್ವಜನಿಕ ವ್ಯಕ್ತಿಗಳು ಸಂವಿಧಾನವನ್ನು ಕಾಪಾಡುವ ಪ್ರಮಾಣವಚನ ಸ್ವೀಕರಿಸಿರುವುದರಿಂದ ಅವರಿಗೆ ಹೆಚ್ಚುವರಿ ಹೊಣೆಗಾರಿಕೆ ಇದೆ  ಎಂದ ಅದು ಸಂವಿಧಾನದ 19(1)(ಎ) ವಿಧಿಯಡಿ ಒದಗಿಸಲಾದ ವಾಕ್‌ ಮತ್ತು  ಇರುವ ಅಭಿವ್ಯಕ್ತಿಯ ಸ್ವಾತಂತ್ರ್ಯ ಮೂಲಭೂತ ಹಕ್ಕಾಗಿದೆ.  ವಿಧಿ 19(2)ರ ಅಡಿಯಲ್ಲಿ ಇರುವ ನಿರ್ಬಂಧಗಳನ್ನು ಸಮಂಜಸ ರೀತಿಯಲ್ಲಿ ಅನ್ವಯಿಸಬೇಕು. ಅವು ದಮನಕಾರಿಯಾಗಬಾರದು ಎಂದಿತು.

Also Read
ಕಾನೂನು, ಸುವ್ಯವಸ್ಥೆಗೆ ಧಕ್ಕೆ ಮಾಡುವವರಿಗೆ ಆಡಳಿತ ಮಣಿಯಕೂಡದು: ಹೈಕೋರ್ಟ್‌

ಪ್ರತಿಭಟನೆ, ಮೆರವಣಿಗೆ ಅಥವಾ ಹಿಂಸೆಯ ಬೆದರಿಕೆಯ ಆಧಾರದ ಮೇಲೆ ವಾಕ್‌ ಸ್ವಾತಂತ್ರ್ಯವನ್ನು ಕುಂಠಿತಗೊಳಿಸುವಂತಿಲ್ಲ. ಹಾಗೆ ಮಾಡುವುದರಿಂದ ಕಾನೂನಾತ್ಮಕ ಆಡಳಿತಕ್ಕೆ ಧಕ್ಕೆ ಒದಗುತ್ತದೆ ಎಂದ ಅದು ಪೊಲೀಸರು ಅಥವಾ ಕಾರ್ಯಾಂಗ ಮೂಲಭೂತ ಹಕ್ಕುಗಳನ್ನು ಕಾಪಾಡಲು ವಿಫಲವಾದರೆ ಮಧ್ಯಪ್ರವೇಶಿಸುವುದು ನ್ಯಾಯಾಲಯದ ಕರ್ತವ್ಯವಾಗುತ್ತದೆ ಎಂಬುದಾಗಿ ತಿಳಿಸಿತು.

ನಿರ್ದೇಶಕ-ನಿರ್ಮಾಪಕರು ಶೀರ್ಷಿಕೆಯನ್ನು ಹಿಂಪಡೆಯುವುದಾಗಿ ಪ್ರಮಾಣಪತ್ರ ಸಲ್ಲಿಸಿದ ಬಳಿಕ, ನ್ಯಾಯಾಲಯ ಪ್ರಕರಣವನ್ನು ವಜಾಗೊಳಿಸಿತು.

Kannada Bar & Bench
kannada.barandbench.com