ದೆಹಲಿ ಮುಖ್ಯಮಂತ್ರಿಯ ದೀರ್ಘಕಾಲದ ಗೈರು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧ: ದೆಹಲಿ ಹೈಕೋರ್ಟ್

ಮುಖ್ಯಮಂತ್ರಿಗಳು ಲಭ್ಯವಿಲ್ಲ ಎಂಬ ಕಾರಣಕ್ಕೆ ಪಠ್ಯಪುಸ್ತಕಗಳನ್ನು ಪಡೆಯುವ ಚಿಕ್ಕ ಮಕ್ಕಳ ಮೂಲಭೂತ ಹಕ್ಕನ್ನು ದಮನಿಸಲಾಗದು ಎಂದ ನ್ಯಾಯಾಲಯ.
Arvind Kejriwal and Delhi High Court
Arvind Kejriwal and Delhi High Court

ವಿದ್ಯಾರ್ಥಿಗಳಿಗೆ ಶಾಲಾ ಪಠ್ಯಪುಸ್ತಕಗಳನ್ನು ವಿತರಿಸದೆ ಇರುವುದಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನ ಕಾರಣವಾಗಬಾರದು ಎಂದು ಸೋಮವಾರ ತಿಳಿಸಿರುವ ದೆಹಲಿ ಹೈಕೋರ್ಟ್‌ ಪಠ್ಯಪುಸ್ತಕ ವಿತರಣೆಗೆ ಸಂಬಂಧಿಸಿದ ವೆಚ್ಚ ಭರಿಸಲು ದೆಹಲಿ ಪಾಲಿಕೆ ಆಯುಕ್ತರಿಗೆ ಅವಕಾಶ ಕಲ್ಪಿಸಿತು [ಸೋಷಿಯಲ್‌ ಜ್ಯೂರಿಸ್ಟ್‌ ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ].

ಮುಖ್ಯಮಂತ್ರಿಗಳು ಲಭ್ಯವಿಲ್ಲ ಎಂಬ ಕಾರಣಕ್ಕೆ ಪಠ್ಯಪುಸ್ತಕಗಳನ್ನು ಪಡೆಯುವ ಚಿಕ್ಕ ಮಕ್ಕಳ ಮೂಲಭೂತ ಹಕ್ಕನ್ನು ದಮನಿಸಲಾಗದು ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್‌ಮೀತ್ ಪ್ರೀತಮ್ ಸಿಂಗ್ ಅರೋರಾ ಅವರಿದ್ದ ವಿಭಾಗೀಯ ಪೀಠ ತಿಳಿಸಿತು.

"ಮುಖ್ಯಮಂತ್ರಿಯ ಅಲಭ್ಯತೆ ಅಥವಾ ಸ್ಥಾಯಿ ಸಮಿತಿ ರಚಿಸದಿರುವುದಾಗಲಿ, ಲೆಫ್ಟಿನೆಂಟ್‌ ಗವರ್ನರ್‌ ಅವರು ದೆಹಲಿ ಮುಖ್ಯಮಂತ್ರಿ ಹುದ್ದೆಗೆ ನೇಮಕ ಮಾಡುವುದಕ್ಕೆ ಸಂಬಂಧಿಸಿದ ವ್ಯಾಜ್ಯಗಳು ಇಲ್ಲವೇ ಸಕ್ಷಮ ನ್ಯಾಯಾಲಯ ತೀರ್ಪು ನೀಡದಿರುವುದಾಗಲಿ ಅಥವಾ ದೆಹಲಿ ಪಾಲಿಕೆ ಕಾಯಿದೆಯ ಕೆಲ ಸೆಕ್ಷನ್‌ಗಳನ್ನು ಪಾಲಿಸದೇ ಇರುವುದಾಗಲಿ ಇದಾವುದೂ ಶಾಲೆಗೆ ತೆರಳುವ ಮಕ್ಕಳು ತಮ್ಮ ಉಚಿತ ಪಠ್ಯ ಪುಸ್ತಕ, ಲೇಖನ ಸಾಮಗ್ರಿ, ಸಮವಸ್ತ್ರಗಳನ್ನು ಕೂಡಲೇ ಪಡೆಯಲು ಅಡ್ಡಿಯಾಗಬಾರದು” ಎಂದು ನ್ಯಾಯಾಲಯ ವಿವರಿಸಿತು.  

ಈ ಹಿನ್ನೆಲೆಯಲ್ಲಿ ಅದು ಪಾಲಿಕೆ ಅನುಸರಿಸಬೇಕಾದ ಕ್ರಮಗಳ ಕುರಿತು ಕೆಲ ನಿರ್ದೇಶನಗಳನ್ನು ನೀಡಿತು.

ಪಾಲಿಕೆಯ ಸ್ಥಾಯಿ ಸಮಿತಿಗೆ ಹಣಕಾಸು ವಿಚಾರದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವಿದೆಯಾದರೂ ಸ್ಥಾಯಿ ಸಮಿತಿಯ ರಚನೆ ವ್ಯಾಜ್ಯ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ ಎಂದು ದೆಹಲಿ ಸರ್ಕಾರ ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿತ್ತು.

ಪಾಲಿಕ ಆಯುಕ್ತರ ಹಣಕಾಸು ನಿರ್ಧಾರಗಳ ವಿಚಾರವಾಗಿ ಮುಖ್ಯಮಂತ್ರಿ ಅನುಮೋದನೆಯ ಅಗತ್ಯವಿದ್ದು  ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಸಿಎಂ ಜೈಲಿನಲ್ಲಿರುವ ಕಾರಣ, ಅನುಮೋದನೆ ಪಡೆಯಲು ಸಾಧ್ಯವಾಗಿಲ್ಲ ಎಂದು ಹೇಳಿತ್ತು

ಆದರೆ, ಈ ವಾದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಾಲಯ, ಮುಖ್ಯಮಂತ್ರಿಯೊಬ್ಬರು ಇಷ್ಟು ದಿನ ಗೈರಾದರೆ ಅದು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಹೇಳಿತು.

"ಮುಖ್ಯಮಂತ್ರಿಯ ಗೈರು ದೆಹಲಿ ಸರ್ಕಾರ ಸ್ಥಗಿತಗೊಂಡಿದೆ ಎಂದು ಒಪ್ಪಿಕೊಳ್ಳುವುದಕ್ಕೆ ಸಮನಾಗುತ್ತದೆ. ಯಾವುದೇ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ, ದೆಹಲಿಯಂತಹ ಮಹತ್ವದ ರಾಜಧಾನಿಯಲ್ಲಿ ಔಪಚಾರಿಕ ಹುದ್ದೆಯಲ್ಲ. ಯಾವುದೇ ಬಿಕ್ಕಟ್ಟು ಅಥವಾ ಪ್ರವಾಹ, ಬೆಂಕಿ, ರೋಗ ಮುಂತಾದ ನೈಸರ್ಗಿಕ ವಿಕೋಪಗಳನ್ನು ಆ ಹುದ್ದೆಯಲ್ಲಿರುವವರು ವರ್ಚುವಲ್‌ ವಿಧಾನದಲ್ಲಾದರೂ ಅನುಕ್ಷಣವೂ ಲಭ್ಯವಿರಬೇಕಾದಂತಹ ಸ್ಥಾನ ಅದಾಗಿದೆ. ಈ ಹುದ್ದೆಯನ್ನು ಹೊಂದಿರುವ ಯಾವುದೇ ವ್ಯಕ್ತಿ ದೀರ್ಘಾವಧಿ ಅಥವಾ ಅನಿಶ್ಚಿತ ಅಜ್ಞಾತ ಅಥವಾ ಗೈರುಹಾಜರಾಗಿರಬಾರದು ಎಂದು ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಾರ್ವಜನಿಕ ಹಿತಾಸಕ್ತಿಯು ಬಯಸುತ್ತದೆ” ಎಂದು ನ್ಯಾಯಾಲಯ ಹೇಳಿದೆ.

ಸೋಶಿಯಲ್ ಜ್ಯೂರಿಸ್ಟ್ ಎಂಬ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಕುರಿತಂತೆ ಈ ಆದೇಶ ನೀಡಲಾಗಿದೆ.

Kannada Bar & Bench
kannada.barandbench.com