ಅಗ್ನಿಪಥ್‌ ಯೋಜನೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಕೆ

ಸಂಸತ್‌ ಒಪ್ಪಿಗೆ ಪಡೆಯದೇ ಮತ್ತು ಗೆಜೆಟ್‌ ಅಧಿಸೂಚನೆ ಹೊರಡಿಸದೆಯೇ ಅಗ್ನಿಪಥ್‌ ಯೋಜನೆಯನ್ನು ದೇಶದ ಮೇಲೆ ಹೇರಲಾಗಿದೆ ಎಂದು ಮನವಿಯಲ್ಲಿ ಆಕ್ಷೇಪಿಸಲಾಗಿದೆ.
Agnipath Scheme
Agnipath Scheme

ಯುವಕರನ್ನು ನಾಲ್ಕು ವರ್ಷಗಳ ಕಾಲ ಸೇನೆಗೆ ನೇಮಿಸಿಕೊಳ್ಳುವ ಪ್ರಸ್ತಾವ ಹೊಂದಿರುವ ಅಗ್ನಿಪಥ್‌ ಯೋಜನೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಸಲಾಗಿದೆ.

ಕೇಂದ್ರ ರಕ್ಷಣಾ ಇಲಾಖೆಯು ಯೋಜನೆ ಘೋಷಿಸಿ, 2022ರ ಜೂನ್‌ 14ರಂದು ಹೊರಡಿಸಿದ ಅಧಿಸೂಚನೆಯನ್ನು ವಜಾ ಮಾಡುವಂತೆ ಕೋರಿ ವಕೀಲ ಎಂ ಎಲ್‌ ಶರ್ಮಾ ಮನವಿ ಸಲ್ಲಿಸಿದ್ದಾರೆ.

ಅಗ್ನಿವೀರ್‌ ಯೋಜನೆಯ ಪ್ರಕಾರ ನಾಲ್ಕು ವರ್ಷಗಳ ಬಳಿಕ ಆಯ್ಕೆಯಾದ ಅಭ್ಯರ್ಥಿಗಳ ಪೈಕಿ ಶೇ. 25ರಷ್ಟು ಮಂದಿಯನ್ನು ಮಾತ್ರ ಭಾರತೀಯ ಸೇನೆಯಲ್ಲಿ ಮುಂದುವರಿಸಲಾಗುತ್ತದೆ. ಉಳಿದವರನ್ನು ಸಶಸ್ತ್ರ ಪಡೆಗಳಿಂದ ನಿವೃತ್ತಿಗೊಳಿಸಲಾಗುತ್ತದೆ. ಇಲ್ಲವೇ ಉದ್ಯೋಗ ನಿರಾಕರಿಸಲಾಗುತ್ತದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

“ನೇಮಕಾತಿಯಾದ ನಾಲ್ಕು ವರ್ಷಗಳಲ್ಲಿ ವೇತನ ಮತ್ತು ಸವಲತ್ತುಗಳನ್ನು ಕಲ್ಪಿಸಲಾಗುತ್ತದೆ. ನಾಲ್ಕು ವರ್ಷಗಳ ಬಳಿಕ ಉದ್ಯೋಗ ನಿರಾಕರಿಸದರೆ ಅವರಿಗೆ ಯಾವುದೇ ನಿವೃತ್ತಿ ವೇತನ ಇತ್ಯಾದಿ ಸಿಗುವುದಿಲ್ಲ” ಎಂದು ಹೇಳಲಾಗಿದೆ.

ದೇಶಾದ್ಯಂತ ಯೋಜನೆ ವಿರೋಧಿಸಿ ವ್ಯಾಪಕ ಪ್ರತಿಭಟನೆ ನಡೆಯುತ್ತಿದ್ದು, ಸಂಸತ್‌ ಒಪ್ಪಿಗೆ ಮತ್ತು ಗೆಜೆಟ್‌ ಅಧಿಸೂಚನೆ ಹೊರಡಿಸದೆಯೇ ದೇಶದ ಮೇಲೆ ಹೇರಲಾಗಿದೆ ಎಂದು ಶರ್ಮಾ ಮನವಿಯಲ್ಲಿ ವಿವರಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com