ಸಶಸ್ತ್ರ ಪಡೆಗಳಿಗೆ ನೇಮಕಾತಿ ಮಾಡಲು ರೂಪಿಸಲಾದ ಅಗ್ನಿಪಥ್ ಯೋಜನೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಇತ್ತೀಚೆಗೆ ಕೇಂದ್ರ ಸರ್ಕಾರದಿಂದ ಕ್ರೋಢೀಕೃತ ಪ್ರತಿಕ್ರಿಯೆ ಕೇಳಿದೆ.
ಅಗ್ನಿಪಥ್ ಯೋಜನೆ ಮತ್ತು ಸಶಸ್ತ್ರ ಪಡೆಗಳ ನೇಮಕಾತಿಗೆ ಸಂಬಂಧಿಸಿದ ಒಟ್ಟು ಅರ್ಜಿಗಳ ವಿಚಾರಣೆಯನ್ನು ಗುರುವಾರ ನಡೆಸಿದ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೋಣಿಯಂ ಪ್ರಸಾದ್ ಅವರಿದ್ದ ವಿಭಾಗೀಯ ಪೀಠವು ಯೋಜನೆ ಜಾರಿಯಾಗದಂತೆ ತಡೆ ನೀಡಲು ನಿರಾಕರಿಸಿತು. ಇದೇ ವೇಳೆ, ಅಗ್ನಿಪಥ್ ಯೋಜನೆ ಪರಿಚಯಿಸುವುದಕ್ಕೂ ಮೊದಲು ಚಾಲನೆ ನೀಡಲಾಗಿದ್ದ ನೇಮಕಾತಿ ಪ್ರಕ್ರಿಯೆಗಳ ಕುರಿತಾಗಿ ಪ್ರಶ್ನಿಸಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರತಿಕ್ರಿಯೆ ಸಲ್ಲಿಸುವಂತೆಯೂ ಪೀಠ ಸರ್ಕಾರಕ್ಕೆ ಸೂಚಿಸಿತು.
ತಮ್ಮ ನೇಮಕಾತಿಯನ್ನು 2019ರ ಅಧಿಸೂಚನೆಯ ಪ್ರಕಾರ ಮಾಡಬೇಕು ಎಂದು ಒತ್ತಾಯಿಸಿ ಭಾರತೀಯ ವಾಯುಪಡೆಗೆ (IAF) ಆಯ್ಕೆಯಾದ ಏರ್‌ಮೆನ್‌ಗಳು ಸಲ್ಲಿಸಿರುವ ಅರ್ಜಿಯಲ್ಲದೆ, ಅಧಿಕಾರಿ ಶ್ರೇಣಿಗಿಂತ ಕೆಳಗಿರುವ ಸಿಬ್ಬಂದಿ ಆಯ್ಕೆ ಮಾನದಂಡಕ್ಕೆ (PBORs) ಸಂಬಂಧಿಸಿದ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೂ ಪೀಠದ ಮುಂದಿದೆ.
ಇದಲ್ಲದೆ, ಅಗ್ನಿಪಥ್ ಯೋಜನಯಿಂದಾಗಿ ರದ್ದಾದ ರಕ್ಷಣಾ ಪಡೆಗಳಲ್ಲಿನ ಎಲ್ಲಾ ನೇಮಕಾತಿ ಪ್ರಕ್ರಿಯೆಗಳನ್ನು ಪುನರಾರಂಭಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೂಡ ಸಲ್ಲಿಸಲಾಗಿದೆ. ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಮತ್ತು ಲಿಖಿತ ಪರೀಕ್ಷೆಗೆ ಪ್ರವೇಶ ಪತ್ರವನ್ನು ಪಡೆದ ಆದರೆ ಅಗ್ನಿಪಥ್ ಯೋಜನೆ ಜಾರಿಗೊಳಿಸಿದ ಕಾರಣಕ್ಕಾಗಿ ನೇಮಕಾತಿ ಪ್ರಕ್ರಿಯೆ ರದ್ದುಗೊಂಡ ಅಭ್ಯರ್ಥಿಯೊಬ್ಬರು ಈ ಅರ್ಜಿ ಸಲ್ಲಿಸಿದ್ದಾರೆ.
ನಾಲ್ಕು ವರ್ಷಗಳ ಮಟ್ಟಿಗೆ ಯುವಕರನ್ನು ಸೇನೆಗೆ ಸೇರಿಸಿಕೊಳ್ಳುವ ಅಗ್ನಿಪಥ್ ಯೋಜನೆ ಬಳಿಕ ಶೇ 25ರಷ್ಟು ಮಂದಿಯನ್ನು ಮಾತ್ರ ಭಾರತೀಯ ಸೇನೆಯಲ್ಲಿ ಮುಂದುವರೆಸಿ ಉಳಿದವರಿಗೆ ಉದ್ಯೋಗ ನಿರಾಕರಿಸುತ್ತದೆ. ಯೋಜನೆ ಜಾರಿ ತಂದದ್ದು ವ್ಯಾಪಕ ಹಿಂಸಾತ್ಮಕ ಪ್ರತಿಭಟನೆಗಳಿಗೆ ನಾಂದಿ ಹಾಡಿತ್ತು. ಇದು ವಿವಿಧ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸುವಂತೆ ಪ್ರೇರೇಪಿಸಿತು. ಯೋಜನೆಗೆ ಸಂಬಂಧಿಸಿದಂತೆ ತನ್ನ ಮುಂದೆ ಪಟ್ಟಿ ಮಾಡಿದ್ದ ಅರ್ಜಿಗಳು ಸೇರಿದಂತೆ ದೇಶದಾದ್ಯಂತ ವಿವಿಧ ಹೈಕೋರ್ಟ್‌ಗಳಲ್ಲಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಕಳೆದ ಜುಲೈನಲ್ಲಿ ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸಿತ್ತು.