ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ತನ್ನನ್ನು ಬಿಡುಗಡೆಗೊಳಿಸುವಂತೆ ಕೋರಿ ಕ್ರಿಶ್ಚಿಯನ್ ಜೇಮ್ಸ್ ಮಿಶೆಲ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯ ಇತ್ತೀಚೆಗೆ ತಿರಸ್ಕರಿಸಿದೆ.
ಮೈಕೆಲ್ 3,600 ಕೋಟಿ ರೂ.ಗಳ ಹಗರಣದಲ್ಲಿ ಮಧ್ಯವರ್ತಿ ಎಂದು ಆರೋಪಿಸಲಾಗಿದ್ದು ಪ್ರಕರಣದಲ್ಲಿ ಗರಿಷ್ಠ ಅವಧಿಯ ಬಂಧನದಲ್ಲಿರುವುದರಿಂದ ತನ್ನನ್ನು ಬಿಡುಗಡೆ ಮಾಡುವಂತೆ ಅವರು ಕೋರಿದ್ದರು.
ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯದ ವಿಶೇಷ ಸಿಬಿಐ ನ್ಯಾಯಾಧೀಶ ಸಂಜೀವ್ ಅಗರ್‌ವಾಲ್ ಅವರು ವಿಚಾರಣಾರ್ಹತೆಯನ್ನು ಹೊಂದಿಲ್ಲ ಎಂದು ಮಿಶೆಲ್ ಅವರ ಮನವಿಯನ್ನು ಫೆಬ್ರವರಿ 23 ರಂದು ತಿರಸ್ಕರಿಸಿದ್ದಾರೆ.
ಸಿಬಿಐ ಜೇಮ್ಸ್ ವಿರುದ್ಧ ಐಪಿಸಿ ಸೆಕ್ಷನ್ 467ರಡಿ (ಫೋರ್ಜರಿ) ಕೂಡ ಪ್ರಕರಣ ದಾಖಲಿಸಿಕೊಂಡಿದ್ದು ಅಪರಾಧ ಜೀವಾವಧಿ ಶಿಕ್ಷೆಯನ್ನು ಒಳಗೊಂಡಿರುವುದರಿಂದ ತಾನು ಗರಿಷ್ಠ ಶಿಕ್ಷೆ ಅನುಭವಿಸಿದ್ದೇನೆ ಎಂಬ ಮನವಿಯನ್ನು ಪರಿಗಣಿಸಲಾಗದು ಎಂದು ನ್ಯಾಯಾಲಯ ನುಡಿದಿದೆ.
ಸಿಆರ್‌ಪಿಸಿಯ ಯಾವ ಸೆಕ್ಷನ್ ಅಡಿ, ಕಸ್ಟಡಿಯಿಂದ ಬಿಡುಗಡೆಗಾಗಿ ಅರ್ಜಿ ಸಲ್ಲಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಸಿಆರ್‌ಪಿಸಿಯ ಅಧ್ಯಾಯ XXXIII ರ ಅಡಿ ಮಾತ್ರ ಜೇಮ್ಸ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದು. ಆದರೆ ಅವರ ವಕೀಲರು ಜಾಮೀನು ನೀಡಲು ಕೋರದೆ ಬಿಡುಗಡೆ ಮಾಡಲು ಕೋರಿದ್ದಾರೆ ಎಂದು ನ್ಯಾಯಾಧೀಶ ಅಗರ್‌ವಾಲ್ ಹೇಳಿದರು.
ಬ್ರಿಟಿಷ್ ಪ್ರಜೆಯಾಗಿರುವ ಮಿಶೆಲ್, ಭಾರತ ಸರ್ಕಾರ ವಿವಿಐಪಿ ಹೆಲಿಕಾಪ್ಟರ್ ಖರೀದಿಯಲ್ಲಿ ಪಡೆದ 42.27 ದಶಲಕ್ಷ ಯುರೋಗಳ ಅಕ್ರಮ ಕಮಿಷನ್ / ಕಿಕ್‌ಬ್ಯಾಕ್ ಕಾನೂನುಬದ್ಧಗೊಳಿಸಲು ಆಂಗ್ಲೋ ಇಟಾಲಿಯನ್ ಹೆಲಿಕಾಪ್ಟರ್ ತಯಾರಿಕಾ ಕಂಪೆನಿ ಅಗಸ್ಟಾ ವೆಸ್ಟ್‌ಲ್ಯಾಂಡ್ ಜೊತೆ ಹನ್ನೆರಡು ಒಪ್ಪಂದಗಳನ್ನು ಮಾಡಿಕೊಂಡಿದ್ದರು ಎಂದು ಆರೋಪಿಸಲಾಗಿತ್ತು.
2018ರ ಡಿಸೆಂಬರ್‌ನಲ್ಲಿ ಅವರನ್ನು ಭಾರತಕ್ಕೆ ಹಸ್ತಾಂತರಿಸಿದ ಬಳಿಕ ಅವರು ಬಂಧನದಲ್ಲಿದ್ದಾರೆ.
[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]