

ದೆಹಲಿಯಲ್ಲಿ ನಡೆದ ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಅರೆಬೆತ್ತಲೆ ಪ್ರತಿಭಟನೆಗೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಶನಿವಾರ ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಅಧ್ಯಕ್ಷ ಉದಯ್ ಭಾನು ಚಿಬ್ ಅವರಿಗೆ ಜಾಮೀನು ನೀಡಿದೆ.
ಪಟಿಯಾಲ ಹೌಸ್ ನ್ಯಾಯಾಲಯದ ನ್ಯಾಯಾಧೀಶರು ಈ ಆದೇಶವನ್ನು ಹೊರಡಿಸಿದ್ದಾರೆ. ಆದೇಶದ ವಿವರವಾದ ಪ್ರತಿಯನ್ನು ನಿರೀಕ್ಷಿಸಲಾಗಿದೆ. ದೆಹಲಿ ಪೊಲೀಸರು ಚಿಬ್ ಅವರನ್ನು ಏಳು ದಿನಗಳವರೆಗೆ ಕಸ್ಟಡಿಗೆ ಕೋರಿದ್ದರು. ಆದರೆ, ನ್ಯಾಯಾಲಯವು ಚಿಬ್ ಕಸ್ಟಡಿ ಅವಧಿಯನ್ನು ವಿಸ್ತರಿಸಲು ಯಾವುದೇ ಸಮಂಜಸ ಕಾರಣವಿಲ್ಲ ಎಂದಿತು. ಅಂತಿಮವಾಗಿ ನ್ಯಾಯಾಧೀಶರು ಚಿಬ್ ಜಾಮೀನು ಅರ್ಜಿಯನ್ನು ಪುರಸ್ಕರಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಆದೇಶಿಸಿದರು.
ಫೆಬ್ರವರಿ 23 ರಂದು ಚಿಬ್ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದ ಪೊಲೀಸರು ಮರುದಿನ ಬೆಳಿಗ್ಗೆ ಅವರನ್ನು ಬಂಧಿಸಿದ್ದರು. ನಂತರ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು, ನ್ಯಾಯಾಲಯವು ಅವರನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು.
ದೆಹಲಿ ಭಾರತ್ ಮಂಟಪದಲ್ಲಿ ಫೆಬ್ರವರಿ 20 ರಂದು ನಡೆದ ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಯೊಳಗೆ ಐವೈಸಿ ಸದಸ್ಯರು ಶರ್ಟ್ ಧರಿಸದೆ ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದರು.
ಭಾರತ- ಅಮೆರಿಕ ನಡುವಿನ ವಾಣಿಜ್ಯ ಒಪ್ಪಂದವನ್ನು ತರಾತುರಿಯಲ್ಲಿ ಮಾಡಿಕೊಂಡಿರುವ ಪ್ರಧಾನಿ ಮೋದಿ ರಾಜಿಯಾಗಿದ್ದಾರೆ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದ್ದರು. "ಪ್ರಧಾನಿ ರಾಜಿ ಮಾಡಿಕೊಂಡಿದ್ದಾರೆ" ಎನ್ನುವ ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಟೀಕೆಗಳನ್ನು ಹೊಂದಿರುವ ಟಿ-ಶರ್ಟ್‌ಗಳನ್ನು ಪ್ರದರ್ಶಿಸಲು ಅವರು ತಮ್ಮ ಅಂಗಿಗಳನ್ನು ತೆಗೆದಿದ್ದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಲ್ಲಿಯವರೆಗೆ ಹದಿನಾಲ್ಕು ಜನರನ್ನು ಬಂಧಿಸಿದ್ದಾರೆ. ಭದ್ರತೆಯನ್ನು ಉಲ್ಲಂಘಿಸಿದ್ದಾರೆ ಮತ್ತು ಸ್ಥಳದಲ್ಲಿ "ರಾಷ್ಟ್ರ ವಿರೋಧಿ" ಘೋಷಣೆಗಳನ್ನು ಕೂಗಿದ್ದಾರೆ ಎಂದು ಅವರ ವಿರುದ್ಧ ಆರೋಪಿಸಲಾಗಿದೆ.