

ಪತ್ರಕರ್ತೆಯರನ್ನು ಗುರಿಯಾಗಿಸಿಕೊಂಡು ಸುಳ್ಳು ಸುದ್ದಿ ಹರಡಲು ಅವರ ಘನತೆ ಗೌಪ್ಯತೆ ಮತ್ತು ಸಾರ್ವಜನಿಕ ನಂಬಿಕೆಗೆ ಧಕ್ಕೆ ತರಲು ಕೃತಕ ಬುದ್ಧಿಮತ್ತೆ (ಎಐ) ಮತ್ತು, ಡಿಜಿಟಲ್ ಪರಿಕರಗಳನ್ನು ಅಸ್ತ್ರವಾಗಿ ಬಳಸುವುದು ಹೆಚ್ಚುತ್ತಿದೆ ಎಂದು ಸುಪ್ರೀಂ ಕೋರ್ಟ್ ಎರಡನೇ ಅತಿ ಹಿರಿಯ ನ್ಯಾಯಮೂರ್ತಿ ಸೂರ್ಯ ಕಾಂತ್ ಆತಂಕ ವ್ಯಕ್ತಪಡಿಸಿದ್ದಾರೆ.
ನವದೆಹಲಿಯಲ್ಲಿ ನಡೆದ ಭಾರತೀಯ ಮಹಿಳಾ ಪತ್ರಿಕಾ ದಳದ (ಐಡಬ್ಲ್ಯೂಪಿಸಿ) 31ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಸುಪ್ರೀಂ ಕೋರ್ಟ್ ಭಾವಿ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಮಹಿಳಾ ಪತ್ರಕರ್ತರು ಎದುರಿಸುತ್ತಿರುವ ಅಪಾಯಗಳನ್ನು ಡೀಪ್‌ಫೇಕ್ ತಂತ್ರಜ್ಞಾನ ಮತ್ತು ನಕಲಿ ಚಿತ್ರಗಳು ಹೆಚ್ಚಿಸಿವೆ ಎಂದರು.
ನ್ಯಾ. ಕಾಂತ್ ಅವರ ಭಾಷಣದ ಪ್ರಮುಖಾಂಶಗಳು
ಕೃತಕ ಬುದ್ಧಿಮತ್ತೆಯ ಸಾಧನಗಳು ನಿಸ್ಸಂದೇಹವಾಗಿ ಸಂಶೋಧನೆಗೆ ವೇಗ ನೀಡುತ್ತವೆಯಾದರೂ ನಿರಂಕುಶ ಬಳಕೆ ಪತ್ರಕರ್ತರ ಗೌಪ್ಯತೆ ಘನತೆ ಹಾಗೂ ಸುರಕ್ಷತೆಗೆ ಅಪಾಯ ತಂದೊಡ್ಡುತ್ತಿವೆ.
ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು ಹೆಚ್ಚು ಟ್ರೋಲ್‌ಗೆ ತುತ್ತಾಗುತ್ತಿದ್ದು ಆನ್‌ಲೈನ್ ನಿಂದನೆಗೆ ಒಳಗಾಗುತ್ತಿದ್ದಾರೆ.
ದುಷ್ಕರ್ಮಿಗಳು ಪತ್ರಕರ್ತೆಯರ ಖಾಸಗಿ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು ಅಪರಾಧಿಕ ವಸ್ತುವಿಷಯವನ್ನು ರೂಪಿಸುತ್ತಿದ್ದಾರೆ.
ಇಂತಹ ಡಿಜಿಟಲ್ ದಾಳಿಗಳು ವೈಯಕ್ತಿಕ ಗೌರವ, ಸುರಕ್ಷತೆ ಮತ್ತು ವೃತ್ತಿಪರ ವಿಶ್ವಾಸಾರ್ಹತೆಯನ್ನು ಹಾಳು ಮಾಡುತ್ತಿವೆ.
ಒಮ್ಮೆ ಇಂತಹ ನಕಲಿ ವಸ್ತು ವಿಷಯಗಳು ಅಂತರ್ಜಾಲದಲ್ಲಿ ಹರಡಿದರೆ, ಅವನ್ನು ತೆಗೆದುಹಾಕುವುದು ಬಹಳ. ಹಾನಿ ದೀರ್ಘಕಾಲ ಉಳಿಯುತ್ತದೆ.
ಪ್ರಜಾಪ್ರಭುತ್ವ ಅಂತಹ ಹಾನಿಯನ್ನು ಆನ್‌ಲೈನ್ ಜೀವನದ ಅನಿವಾರ್ಯ ಭಾಗವೆಂದು ಸಾಮಾನ್ಯೀಕರಿಸಲು ಮತ್ತು ಅಂಗೀಕರಿಸಲು ಸಾಧ್ಯವಿಲ್ಲ.
ಮಾಧ್ಯಮ ಸೇರಿದಂತೆ ಎಲ್ಲಾ ವಲಯಗಳಲ್ಲಿ ನೈತಿಕ ಜವಾಬ್ದಾರಿಯಿಂದ ಸಾಂವಿಧಾನಿಕ ಸ್ವಾತಂತ್ರ್ಯಗಳನ್ನು ಬೆಂಬಲಿಸಬೇಕು.
ಮಹಿಳಾ ಪತ್ರಕರ್ತರು ಮತ್ತು ತಿರುಚಿದ ನಿರೂಪಣೆಗೆ ಬಲಿಯಾದವರನ್ನು ರಕ್ಷಿಸಲು ಬಲವಾದ, ಏಕರೂಪದ ನಿಯಮಗಳನ್ನು ಮಾಧ್ಯಮ ಸಂಸ್ಥೆಗಳು ಮತ್ತು ನಿಯಂತ್ರಕ ಸಂಸ್ಥೆಗಳು ಜಾರಿಗೆ ತರಬೇಕು.
ಐ ಡಬ್ಲ್ಯೂ ಪಿ ಸಿಯಂತಹ ಸಂಸ್ಥೆಗಳು ಪತ್ರಕರ್ತೆಯರಿಗೆ ಡಿಜಿಟಲ್ ಸುರಕ್ಷತಾ ತರಬೇತಿ ನೀಡಬೇಕು.
ಮಹಿಳಾ ಪತ್ರಕರ್ತರಿಗೆ ಕಾನೂನು ಇಲ್ಲವೇ ಮಾನಸಿಕ ಬೆಂಬಲ ವ್ಯವಸ್ಥೆ ದೊರೆಯಬೇಕು.