ಪ್ರಸಕ್ತ ಸಾಲಿನ ಅಖಿಲ ಭಾರತ ವಕೀಲರ ಪರೀಕ್ಷೆಯನ್ನು (ಎಐಬಿಇ XVIII) ಡಿಸೆಂಬರ್ 3ರ ಬದಲಿಗೆ ಡಿಸೆಂಬರ್ 10ರಂದು ನಡೆಸಲು ಭಾರತೀಯ ವಕೀಲರ ಪರಿಷತ್ (ಬಿಸಿಐ) ನಿರ್ಧರಿಸಿದ್ದು ಈ ಕುರಿತು ಅಧಿಸೂಚನೆ ಹೊರಡಿಸಿದೆ.
ಪರೀಕ್ಷೆಯು ಡಿ.10 ರಂದು ನಡೆಯಲಿದ್ದು ಪರೀಕ್ಷೆಗೆ ನೋಂದಾಯಿಸುವ ಕೊನೆಯ ದಿನಾಂಕವನ್ನು ನವೆಂಬರ್ 16ರವರೆಗೆ ವಿಸ್ತರಿಸಿರುವುದಾಗಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯ ಸ್ನಾತಕೋತ್ತರ ಪ್ರವೇಶ ಪರೀಕ್ಷೆ (ಸಿಎಲ್‌ಎಟಿ- ಪಿಜಿ) ಮತ್ತು ಮಧ್ಯಪ್ರದೇಶ ನ್ಯಾಯಾಂಗ ಸೇವಾ ಪ್ರವೇಶಾತಿ ಪರೀಕ್ಷೆಗಳು ಇರುವುದರಿಂದ ಪರೀಕ್ಷಾ ದಿನವನ್ನು ಮುಂದೂಡಲಾಗಿದೆ ಎಂದು ಬಿಸಿಐ ವಿವರಿಸಿದೆ.
ಈ ಪರೀಕ್ಷೆ ನಡೆಯುವ ಸಂದರ್ಭದಲ್ಲೇ ಬೇರೆ ಪರೀಕ್ಷೆಗಳೂ ಇರುವುದರಿಂದ ಸಮಸ್ಯೆ ಉಂಟಾಗುತ್ತದೆ ಎಂದು ಅನೇಕ ಅಭ್ಯರ್ಥಿಗಳು ಬಿಸಿಐಗೆ ಪತ್ರ ಬರೆದಿದ್ದರು. "ಅಖಿಲ ಭಾರತ ವಕೀಲರ ಪರೀಕ್ಷೆ, ಸಿಎಲ್‌ಎಟಿ ಪಿಜಿ ಮತ್ತು ಮಧ್ಯಪ್ರದೇಶ ನ್ಯಾಯಾಂಗ ಸೇವಾ ಪ್ರವೇಶಾತಿ ಪರೀಕ್ಷೆಗಳ ಮಹತ್ವ ಗಮನಿಸಿ ಈ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು ಅಭ್ಯರ್ಥಿಗಳಿಗೆ ನ್ಯಾಯಯುತ ಅವಕಾಶವನ್ನು ಒದಗಿಸಲು ಬಿಸಿಐ ಬದ್ಧವಾಗಿದೆ” ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.
ಎಐಬಿಇ XVIII ಪರೀಕ್ಷೆ ಈ ಮೊದಲು ಅಕ್ಟೋಬರ್ 29ರಂದು ನಡೆಯಬೇಕಿತ್ತು. ಪರೀಕ್ಷಾ ದಿನವನ್ನು ಭಾರತೀಯ ವಕೀಲರ ಪರಿಷತ್ ಮುಂದೂಡಿರುವುದು ಇದು ನಾಲ್ಕನೇ ಬಾರಿ.