ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಚೆಗೆ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ತಪ್ಪಾಗಿ ವ್ಯಾಖ್ಯಾನಿಸಿರುವ ಹಿನ್ನೆಲೆಯಲ್ಲಿ ನಿಮ್ಮ ಹೇಳಿಕೆಯನ್ನು ಹಿಂಪಡೆಯಿರಿ ಎಂದು ಒತ್ತಾಯಿಸಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರಿಗೆ 'ನ್ಯಾಯಕ್ಕಾಗಿ ಅಖಿಲ ಭಾರತ ವಕೀಲರ ಸಂಘ' (ಎಐಎಲ್‌ಎಜೆ) ಗುರುವಾರ ನೋಟಿಸ್ ಜಾರಿ ಮಾಡಿದೆ.
“ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಹಿಜಾಬ್ ಅಥವಾ ಇನ್ನಾವುದೇ ಧಾರ್ಮಿಕ ಭಾವ ಬಿಂಬಿಸುವ ಉಡುಪು ಧರಿಸಿರುವ ವಿದ್ಯಾರ್ಥಿಗಳನ್ನು ಪರೀಕ್ಷಾ ಕೊಠಡಿಗೆ ಪ್ರವೇಶಿಸಿದಂತೆ ನಾವು ನಿರ್ಬಂಧ ವಿಧಿಸಿದ್ದೇವೆ. ಕ್ಯಾಂಪಸ್‌ಗೆ ಹಿಜಾಬ್ ಧರಿಸಿ ಅವರು ಬರಬಹುದಾಗಿದ್ದು, ಪರೀಕ್ಷಾ ಕೊಠಡಿಗೆ ತೆರಳುವುದಕ್ಕೂ ಮುನ್ನ ಅವರು ಅದನ್ನು ತೆಗೆದಿಡಬೇಕು. ಅಹಂ ತೊರೆದು, ಪರೀಕ್ಷೆ ಬರೆಯಿರಿ. ಬಹುತೇಕ ವಿದ್ಯಾರ್ಥಿಗಳು ಹೈಕೋರ್ಟ್ ತೀರ್ಪು ಮತ್ತು ಸರ್ಕಾರದ ಅಧಿಸೂಚನೆಯನ್ನು ಪಾಲಿಸುತ್ತಿದ್ದಾರೆ” ಎಂದು ನೀವು (ಸಚಿವ ಬಿ ಸಿ ನಾಗೇಶ್) ನೀಡಿರುವ ಹೇಳಿಕೆ ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದು ನೋಟಿಸ್‌ನಲ್ಲಿ ವಿವರಿಸಲಾಗಿದೆ.
“ಸರ್ಕಾರ ಅಥವಾ ಖಾಸಗಿ ಶಾಲೆಗಳು ಸೂಚಿಸುವ ಸಮವಸ್ತ್ರವನ್ನು ವಿದ್ಯಾರ್ಥಿಗಳು ಧರಿಸಬೇಕು ಎಂದು 2022ರ ಮಾರ್ಚ್ 25ರಂದು ಸರ್ಕಾರ ಮಾಡಿರುವ ಆದೇಶಕ್ಕೆ ನಿಮ್ಮ ಹೇಳಿಕೆ ವಿರುದ್ಧವಾಗಿದೆ. ನಿಮ್ಮ ಹೇಳಿಕೆಯು ಮಾರ್ಚ್ 15ರಂದು (WP 2347/2022) ಹಿಜಾಬ್ ಪ್ರಕರಣದಲ್ಲಿ ಹೈಕೋರ್ಟ್ ನೀಡಿರುವ ತೀರ್ಪಿಗೂ ವಿರುದ್ಧವಾಗಿದೆ” ಎಂದು ನೋಟಿಸ್‌ನಲ್ಲಿ ವಿವರಿಸಲಾಗಿದೆ.
“ತೀರ್ಪಿನಲ್ಲಿ ಸಂಪೂರ್ಣವಾಗಿ ಹಿಜಾಬ್ ನಿಷೇಧಿಸಿಲ್ಲ. 05.02.2022ರಂದು ಸರ್ಕಾರ ಹೊರಡಿಸಿರುವ ಆದೇಶವನ್ನು ನ್ಯಾಯಾಲಯ ಎತ್ತಿ ಹಿಡಿದಿದೆ. ಆ ಆದೇಶದಲ್ಲಿ ಕಾನೂನಿನ ಪ್ರಕಾರ ಸರ್ಕಾರ ಅಥವಾ ಖಾಸಗಿ ಶಾಲೆಗಳು ಸೂಚಿಸುವ ಸಮವಸ್ತ್ರ ನೀತಿಯನ್ನು ಪಾಲಿಸಬೇಕು ಎಂದು ಸರ್ಕಾರ ಹೇಳಿದೆ” ಎಂದು ವಿವರಿಸಲಾಗಿದೆ.
“ನಿಮ್ಮ ಬೇಜವಾಬ್ದಾರಿಯುತ ಮತ್ತು ಹಾದಿ ತಪ್ಪಿಸುವ ಹೇಳಿಕೆಯಿಂದ ಭಾರಿ ಮತ್ತು ಅನಗತ್ಯ ಸಮಸ್ಯೆಯಾಗಿದೆ. 29.03.2022ರಂದು ಹಿಜಾಬ್ ಧರಿಸಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಅನುಮತಿಸಿದ ಕಾರಣಕ್ಕೆ ಗದಗದಲ್ಲಿ ಏಳು ಮಂದಿ ಶಿಕ್ಷಕರನ್ನು ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ. ʼಅಮಾನತು ಮಾಡಲಾದ ಶಿಕ್ಷಕರು ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಬಾಲಕಿಯರಿಗೆ ಸೋಮವಾರ ಅನುಮತಿಸಿದ್ದಾರೆ. ಇದು ಹೈಕೋರ್ಟ್ ಆದೇಶದ ಉಲ್ಲಂಘನೆಯಾಗಿದ್ದು, ನಾವು ಅವರನ್ನು ಅಮಾನತು ಮಾಡಿದ್ದೇವೆʼ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹೇಳಿರುವುದಾಗಿ ವರದಿಯಾಗಿದೆ” ಎಂದು ನೋಟಿಸ್‌ನಲ್ಲಿ ವಿವರಿಸಲಾಗಿದೆ.
“ಸರ್ಕಾರದ ಆದೇಶ ಮತ್ತು ಹೈಕೋರ್ಟ್ ತೀರ್ಪನ್ನು ತಪ್ಪಾಗಿ ವ್ಯಾಖ್ಯಾನಿಸಿರುವುದರಿಂದ ಮೂಲಭೂತ ಹಕ್ಕಿನ ಭಾಗವಾದ ಶಿಕ್ಷಣ ಪಡೆಯುವ ಅಪ್ರಾಪ್ತ ಮುಸ್ಲಿಮ್ ಬಾಲಕಿಯರೆಡೆಗೆ ಅಪಾರ ಪೂರ್ವಗ್ರಹ ಉಂಟಾಗಿದೆ. ನಿಮ್ಮ ಹೇಳಿಕೆಯು ಆಕ್ಷೇಪಾರ್ಹವಾದ ಆದೇಶದ ವ್ಯಾಪ್ತಿ ಮೀರಿದ್ದು, ಇದರಿಂದ ಮುಸ್ಲಿಮ್ ಹೆಣ್ಣು ಮಕ್ಕಳ ಹಕ್ಕಿನ ಉಲ್ಲಂಘನೆಯಾಗಿದೆ” ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ಹೈಕೋರ್ಟ್ ತೀರ್ಪು ಮತ್ತು ಸರ್ಕಾರದ ಆದೇಶದ ಕುರಿತು ನೀಡಿರುವ ಆಕ್ಷೇಪಾರ್ಹವಾದ ಹೇಳಿಕೆಯನ್ನು ತಕ್ಷಣ ಹಿಂಪಡೆದು, ಸ್ಪಷ್ಟನೆ ನೀಡುವಂತೆ ಆಗ್ರಹಿಸಲಾಗಿದೆ. ಇಲ್ಲವಾದಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ನಾಗೇಶ್ ಅವರನ್ನು ಎಚ್ಚರಿಸಲಾಗಿದೆ.
ಸಮವಸ್ತ್ರ ಸೂಚಿಸಿರುವ ಸಂಸ್ಥೆಯ ಆ ನಿರ್ದಿಷ್ಟ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ ತನ್ನ ಆದೇಶ ಅನ್ವಯವಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ ಎಂದು ಎಐಎಲ್‌ಎಜೆ ನೋಟಿಸ್‌ನಲ್ಲಿ ವಿವರಿಸಿದೆ.