ಏರ್ ಇಂಡಿಯಾ ಬಂಡವಾಳ ಹಿಂತೆಗೆತ ಪ್ರಕ್ರಿಯೆಯನ್ನು ಪ್ರಶ್ನಿಸಿ ರಾಜ್ಯಸಭಾ ಸದಸ್ಯ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಗುರುವಾರ, ಜನವರಿ 6ರಂದು ಆದೇಶ ಪ್ರಕಟಿಸಲಿದೆ.
ಪಕ್ಷಕಾರರು ನಾಳೆಯ ಒಳಗಾಗಿ ತಮ್ಮ ಟಿಪ್ಪಣಿಗಳನ್ನು ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್, ನ್ಯಾ. ಜ್ಯೋತಿ ಸಿಂಗ್ ಅವರಿದ್ದ ಪೀಠ ಸೂಚಿಸಿತು. ನಾವು ನಾಡಿದ್ದು (ಗುರುವಾರ) ಆದೇಶ ನೀಡುತ್ತೇವೆ. ನಾಳೆಯೊಳಗೆ ನಮಗೆ ಟಿಪ್ಪಣಿಗಳು ಲಭಿಸಬೇಕು ಎಂದು ಪೀಠ ಹೇಳಿತು.
ಏರ್ ಇಂಡಿಯಾದ ಬಂಡವಾಳ ಹಿಂತೆಗೆತ ರದ್ದುಪಡಿಸಬೇಕು ಜೊತೆಗೆ ಈ ಉದ್ದೇಶಕ್ಕಾಗಿ ನೀಡಿರುವ ಯಾವುದೇ ಬಗೆಯ ಅನುಮತಿಯನ್ನು ಹಿಂಪಡೆಯಬೇಕು ಎಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸ್ವಾಮಿ ಅವರು ಈ ಹಿಂದೆ ಹೈಕೋರ್ಟ್ ಮೊರೆ ಹೋಗಿದ್ದರು.
ಖಾಸಗೀಕರಣ ಪ್ರಕ್ರಿಯೆಯಲ್ಲಿ ಪ್ರತಿವಾದಿಗಳ ಪಾತ್ರದ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯದ ಮುಂದೆ ವಿವರವಾದ ವರದಿಯನ್ನು ಸಲ್ಲಿಸುವಂತೆ ಮನವಿ ಮಾಡಲಾಗಿತ್ತು.
ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಸರ್ಕಾರಿ ಕಂಪೆನಿ ಎಐಎಸ್‌ಎಟಿಎಸ್‌ನ ಅರ್ಧದಷ್ಟು ಪಾಲಿನೊಂದಿಗೆ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಶೇ 100ರಷ್ಟು ಈಕ್ವಿಟಿ ಷೇರು ಪಡೆಯುವುದಕ್ಕಾಗಿ ಟಾಟಾ ಸನ್ಸ್ ಮಾಡಿದ ಅತ್ಯಧಿಕ ಬಿಡ್ ಅನ್ನು ಕೇಂದ್ರ ಅಂಗೀಕರಿಸಿತ್ತು.
ಅದೇ ತಿಂಗಳು, ₹18,000 ಕೋಟಿಗೆ ಏರ್ ಇಂಡಿಯಾ ಮಾರಾಟ ಮಾಡಲೆಂದು ಸರ್ಕಾರ ಟಾಟಾದೊಂದಿಗೆ ಷೇರು ಖರೀದಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಟಾಟಾ ₹ 2,700 ಕೋಟಿ ನಗದು ಪಾವತಿಸುವುದರೊಂದಿಗೆ ಏರ್ ಇಂಡಿಯಾ ಹೊಂದಿರುವ ರೂ. ₹ 13,500 ಕೋಟಿ ಸಾಲವನ್ನು ತಾನು ಹೊರಲಿದೆ. ಕಳೆದು ಎರಡು ದಶಕಗಳಲ್ಲಿ ಏರ್ ಇಂಡಿಯಾ ಬಗೆಯ ಬಂಡವಾಳ ಹಿಂತೆಗೆತ ಪ್ರಕ್ರಿಯೆ ನಡೆದಿರುವುದು ಇದೇ ಮೊದಲು.
ಇಂದು ವಿಚಾರಣೆ ವೇಳೆ ಖುದ್ದು ವಾದ ಮಂಡಿಸಿದ ಸುಬ್ರಮಣಿಯನ್ ಸ್ವಾಮಿ “ಹರಾಜು ಪ್ರಕ್ರಿಯೆ ಅಸಾಂವಿಧಾನಿಕ, ದುರುದ್ದೇಶಪೂರ್ವಕ, ಭ್ರಷ್ಟತೆಯಿಂದ ಕೂಡಿದ್ದು ಟಾಟಾ ಪರವಾಗಿ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ” ಎಂದು ವಾದಿಸಿದರು.
“ಸ್ಪೈಸ್‌ಜೆಟ್ ಮಾಲೀಕರ ನೇತೃತ್ವದ ಒಕ್ಕೂಟವೊಂದು ಬೇರೆ ಬಿಡ್‌ದಾರನಾಗಿತ್ತು. ತಾನು ಇಲ್ಲದಿದ್ದರೆ ಹರಾಜು ಪ್ರಕ್ರಿಯೆ ಮುಂದುವರೆಯುತ್ತಿರಲಿಲ್ಲ, ಹರಾಜಿನಲ್ಲಿ ಪಾಲ್ಗೊಂಡಿರುವುದು ಸಂತಸದ ಸಂಗತಿ ಎಂದು ಈ ಒಕ್ಕೂಟ ಹೇಳಿದ ಸುದ್ದಿಯೊಂದು ಪತ್ರಿಕೆಯಲ್ಲಿ ಪ್ರಕಟವಾಗಿದೆ. ಮದ್ರಾಸ್ ಹೈಕೋರ್ಟ್‌ನಲ್ಲಿ ಸ್ಪೈಸ್‌ಜೆಟ್ ವಿರುದ್ಧ ದಿವಾಳಿತನದ ಪ್ರಕರಣದ ವಿಚಾರಣೆ ಬಾಕಿ ಇದ್ದು ಅದು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅರ್ಹವಲ್ಲ ಎಂಬ ಸ್ಪಷ್ಟ ಮಾತುಗಳಿವೆ. ಇದರರ್ಥ ಒಬ್ಬ ಬಿಡ್‌ದಾರ ಮಾತ್ರ ಹರಾಜು ಪ್ರಕ್ರಿಯೆಯಲ್ಲಿದ್ದು (ಈ ರೀತಿಯ) ಬಿಡ್ ನಡೆಯಲು ಸಾಧ್ಯವಿಲ್ಲ” ಎಂದು ಆಕ್ಷೇಪಿಸಿದರು.
ಆದರೆ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ಬಂಡವಾಳ ಹಿಂತೆಗೆತ ಪ್ರಕ್ರಿಯೆ ಕೇಂದ್ರ ಸರ್ಕಾರದ ನೀತಿ ನಿರ್ಧಾರದ ಭಾಗವಾಗಿದ್ದು ಏರ್ ಇಂಡಿಯಾ ನಷ್ಟದಲ್ಲಿ ಸಾಗುತ್ತಿದೆ ಎಂಬುದನ್ನು ಪರಿಗಣಿಸಿ ನಡೆದಿದೆ. ಒಪ್ಪಂದದ ಬಗ್ಗೆ ಗುಟ್ಟೇನೂ ಉಳಿದಿಲ್ಲ ಮತ್ತು ಸಂವಿಧಾನದ 226 ನೇ ವಿಧಿಯ ಅಡಿ ಪ್ರಕರಣವನ್ನು ನ್ಯಾಯಾಲಯಕ್ಕೆ ಒಯ್ಯಲಾಗದು ಎಂದರು.
ಸ್ವಾಮಿ ಅವರ ವಾದಕ್ಕೆ ಪ್ರತಿಕ್ರಿಯೆಯಾಗಿ ಅವರು ಸ್ಪೈಸ್‌ಜೆಟ್ ಎಂದಿಗೂ ಬಿಡ್‌ನಲ್ಲಿ ಭಾಗವಹಿಸಿದ ಒಕ್ಕೂಟದ ಭಾಗವಾಗಿರಲಿಲ್ಲ ಎಂದು ತಿಳಿಸಿದರು. “ಎರಡನೇ ಸಂಗತಿ ಸ್ಪೈಸ್ ಜೆಟ್ ಮದ್ರಾಸ್ ಹೈಕೋರ್ಟ್‌ನಲ್ಲಿ ಕೆಲವು ವಿಚಾರಣೆಗಳನ್ನು ಎದುರಿಸುತ್ತಿದೆ ಎಂಬುದು. ಆದರೆ ಸ್ಪೈಸ್‌ಜೆಟ್ ಎಂದಿಗೂ ಒಕ್ಕೂಟದ ಭಾಗವಾಗಿರಲಿಲ್ಲ. ಅದರ ಮಾಲೀಕ ಅಜಯ್ ಸಿಂಗ್ ಬಿಡ್‌ನಲ್ಲಿ ಭಾಗಿಯಾಗಿದ್ದರು” ಎಂಬುದಾಗಿ ವಿವರಿಸಿದರು.
ಈಗಿನ ಬಂಡವಾಳ ಹಿಂಪಡೆಯುವಿಕೆಗೂ ಮತ್ತೊಂದು ವಿಮಾನಯಾನ ಸಂಸ್ಥೆ ಏರ್ ಏಷ್ಯಾದ ವಿರುದ್ಧದ ವಿಚಾರಣೆ ಬಾಕಿ ಇರುವುದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ವಾದಿಸಿದರು.
“6ನೇ ಪ್ರತಿವಾದಿ ಏರ್ ಇಂಡಿಯಾವನ್ನು ಸ್ವಾಧೀನಪಡಿಸಿಕೊಂಡ ಟಲೇಸ್ ಪ್ರೈವೇಟ್ ಲಿಮಿಟೆಡ್. ಇದು ಟಾಟಾ ಸನ್ಸ್ ಒಡೆತನದಲ್ಲಿದ್ದು ಏರ್ ಏಷ್ಯಾದೊಂದಿಗೆ ಸಂಬಂಧ ಹೊಂದಿಲ್ಲ. ಏರ್ ಏಷ್ಯಾ ಈ ಹಿಂದೆ ಎದುರಿಸಿದ್ದೆಲ್ಲವೂ ಇಲ್ಲಿ ಸಂಪೂರ್ಣ ಅಪ್ರಸ್ತುತ” ಎಂದರು.
ಟಾಟಾ ಪರ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ, “ಹರಾಜು ಗೆದ್ದಿರುವ ಬಿಡ್‌ದಾರರು 100% ಭಾರತೀಯ ಕಂಪನಿಯಾಗಿದ್ದು 100% ಭಾರತೀಯರ ಮಾಲೀಕತ್ವದಲ್ಲಿದೆ” ಎಂದರು.
"2017 ರಿಂದ, ಸರ್ಕಾರ ಏರ್ ಇಂಡಿಯಾ ಮಾರಾಟ ಮಾಡಲು ತೊಂದರೆಗಳನ್ನು ಎದುರಿಸುತ್ತಿದೆ. ಈ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ. ಯಾವುದೇ ವಿವರಗಳನ್ನು ಒದಗಿಸಿಲ್ಲ. ಭ್ರಷ್ಟಾಚಾರ ನಡೆದಿದೆ ಎಂದು ಅವರು (ಅರ್ಜಿದಾರರಾದ ಸ್ವಾಮಿ) ಪುನರಾವರ್ತಿಸಬಹುದಾದರೂ ಯಾವುದೇ ವಿವರಗಳನ್ನು ಕೊಟ್ಟಿಲ್ಲ" ಎಂದು ಅವರು ವಿವರಿಸಿದರು.
ಆಗ ತಾವು ಬಂಡವಾಳ ಹಿಂತೆಗೆತದ ವಿರುದ್ಧವಿಲ್ಲ, ನಾನು ಯಾವಾಗಲೂ ಮುಕ್ತ ಮಾರುಕಟ್ಟೆಯ ಪರವಾಗಿದ್ದೇನೆ ಎಂದ ಸುಬ್ರಮಣಿಯನ್ ಸ್ವಾಮಿ ಅವರು ಟಾಟಾ ಪರವಾಗಿ ನಡೆದಿರುವ ಹರಾಜು ಪ್ರಕ್ರಿಯೆ ಬಗ್ಗೆ ತಮ್ಮ ಆಕ್ಷೇಪವಿದೆ ಎಂದರು. ಈ ಹಂತದಲ್ಲಿ ನ್ಯಾಯಾಲಯ ಗುರುವಾರದಂದು ಆದೇಶ ಪ್ರಕಟಿಸುವುದಾಗಿ ತಿಳಿಸಿತು.