ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ: ಆರೋಪಿಯ ವಿರೋಧದ ನಡುವೆ ವಿಚಾರಣೆ ಮುಂದೂಡಿದ ದೆಹಲಿ ನ್ಯಾಯಾಲಯ

ನ್ಯಾಯಾಲಯಕ್ಕೆ ಪ್ರಕರಣ ಮುಂದೂಡುವತ್ತ ಒಲವು ಇದ್ದರೆ ದಯವಿಟ್ಟು ಮಧ್ಯಂತರ ಜಾಮೀನು ನೀಡಬೇಕು. ಇದು ನ್ಯಾಯಸಮ್ಮತವಲ್ಲ. ತನಿಖಾಧಿಕಾರಿ ಹಾಜರಿಲ್ಲ ಎನ್ನುವುದು ಪ್ರಕರಣ ಮುಂದೂಡುವುದಕ್ಕೆ ಕಾರಣವಾಗಬಾರದು ಎಂದು ಮಿಶ್ರಾ ಪರ ವಕೀಲರು ವಾದಿಸಿದರು.
Air India
Air India

ಕಳೆದ ನವೆಂಬರ್‌ನಲ್ಲಿ ನ್ಯೂಯಾರ್ಕ್‌ನಿಂದ ದೆಹಲಿಗೆ ಬರುತ್ತಿದ್ದ ಏರ್‌ ಇಂಡಿಯಾ ವಿಮಾನದ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜಿಸಿದ ಘಟನೆಗೆ ಸಂಬಂಧಿಸಿದಂತೆ ಆರೋಪಿ ಶಂಕರ್‌ ಮಿಶ್ರಾ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ದೆಹಲಿ ನ್ಯಾಯಾಲಯ ಶುಕ್ರವಾರ ಮುಂದೂಡಿದೆ.

ಜಾಮೀನು ಅರ್ಜಿಯ ಪ್ರತಿಯನ್ನು ತನಗೆ ನೀಡಿಲ್ಲಎಂದು ದೂರುದಾರರ ಪರ ವಾದ ಮಂಡಿಸಿದ ವಕೀಲ ಅಂಕುರ್‌ ಮಹೀಂದ್ರೋ ಹೇಳಿದ ಬಳಿಕ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹರ್‌ಜ್ಯೋತ್‌ ಸಿಂಗ್ ಭಲ್ಲಾ ಅವರು ಪ್ರಕರಣವನ್ನು ಜನವರಿ 30 ಸೋಮವಾರಕ್ಕೆ ಮುಂದೂಡಿದರು. ಇದೇ ವೇಳೆ ತನಿಖಾಧಿಕಾರಿ ವಿಚಾರಣೆಗೆ ಹಾಜರಾಗಿಲ್ಲ ಎಂಬ ವಿಚಾರವನ್ನು ನ್ಯಾಯಾಲಯ ಗಮನಿಸಿತು.

Also Read
ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಪ್ರಕರಣ: ಶಂಕರ್ ಮಿಶ್ರಾ ಜಾಮೀನು ಮನವಿ ತಿರಸ್ಕರಿಸಿದ ದೆಹಲಿ ನ್ಯಾಯಾಲಯ

ಆದರೆ ಆರೋಪಿ ಮಿಶ್ರಾ ಪರ ವಾದ ಮಂಡಿಸಿದ ಹಿರಿಯ ವಕೀಲ ರಮೇಶ್‌ ಗುಪ್ತಾ ವಿಚಾರಣೆ ಮುಂದೂಡುವದಕ್ಕೆ ವಿರೋಧ ವ್ಯಕ್ತಪಡಿಸಿದರು. ನ್ಯಾಯಾಲಯಕ್ಕೆ ಪ್ರಕರಣ ಮುಂದೂಡುವತ್ತ ಒಲವು ಇದ್ದರೆ ದಯವಿಟ್ಟು ಮಧ್ಯಂತರ ಜಾಮೀನು ನೀಡಬೇಕು. ಇದು ನ್ಯಾಯಸಮ್ಮತವಲ್ಲ... ತನಿಖಾಧಿಕಾರಿ ಹಾಜರಿಲ್ಲ ಎನ್ನುವುದು ಪ್ರಕರಣ ಮುಂದೂಡುವುದಕ್ಕೆ ಕಾರಣವಾಗಬಾರದು ಎಂದು ಮಿಶ್ರಾ ಪರ ವಕೀಲರು ವಾದಿಸಿದರು. ವಾದಗಳನ್ನು ಆಲಿಸಿದ ನ್ಯಾಯಾಲಯ ಬರುವ ಸೋಮವಾರ ವಿಚಾರಣೆ ನಡೆಸುವುದಾಗಿ ತಿಳಿಸಿತು.  

ಮೆಟ್ರೊಪಾಲಿಟನ್‌ ನ್ಯಾಯಾಲಯವು ಆರೋಪಿ ಮಿಶ್ರಾಗೆ ಜನವರಿ 11ರಂದು ಜಾಮೀನು ನಿರಾಕರಿಸಿತ್ತು. ಆರೋಪಿಯು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.

Related Stories

No stories found.
Kannada Bar & Bench
kannada.barandbench.com