ಮಹಿಳೆ ಮೇಲೆ ಮೂತ್ರ ವಿಸರ್ಜನೆ ಪ್ರಕರಣ: ಮೇಲ್ಮನವಿ ಸಮಿತಿ ರಚಿಸುವಂತೆ ಡಿಜಿಸಿಎಗೆ ಸೂಚಿಸಿದ ದೆಹಲಿ ಹೈಕೋರ್ಟ್

ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ತಾನು ಬಯಸಿದ್ದರೂ ಮೇಲ್ಮನವಿ ಸಮಿತಿ ಅಸ್ತಿತ್ವದಲ್ಲಿಲ್ಲ ಎಂದು ಶಂಕರ್ ಮಿಶ್ರಾ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
Air India
Air India
Published on

ತನ್ನನ್ನು ʼಅಶಿಸ್ತಿನ ಪ್ರಯಾಣಿಕʼ ಎಂದು ಗುರುತಿಸಿ ನಾಲ್ಕು ತಿಂಗಳವರೆಗೆ ವಿಮಾನಯಾನ ನಿರ್ಬಂಧಿಸಿದ್ದ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ (ಡಿಜಿಸಿಎ) ಆದೇಶ ಪ್ರಶ್ನಿಸಿ ಏರ್‌ ಇಂಡಿಯಾ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣದ ಆರೋಪಿ ಶಂಕರ್ ಮಿಶ್ರಾ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಗೆ ಎರಡು ವಾರಗಳಲ್ಲಿ ಮೇಲ್ಮನವಿ ಸಮಿತಿ ರಚಿಸುವಂತೆ  ಡಿಜಿಸಿಎಗೆ ದೆಹಲಿ ಹೈಕೋರ್ಟ್‌ ಗುರುವಾರ ಸೂಚಿಸಿದೆ.

ಮೇಲ್ಮನವಿ ಸಮಿತಿಗೆ ಸದ್ಯಕ್ಕೆ ಅಧ್ಯಕ್ಷರು ಇಲ್ಲ ಎಂದು ನ್ಯಾಯಾಲಯಕ್ಕೆ ಡಿಜಿಸಿಎ ತಿಳಿಸಿತು. ಆಗ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರು ಎರಡು ವಾರಗಳಲ್ಲಿ ಮೆಲ್ಮನವಿ ಸಮಿತಿ ರಚಿಸುವಂತೆ ಡಿಜಿಸಿಎಗೆ ನಿರ್ದೇಶಿಸಿ ಆದೇಶಿಸಿದರು.

ಮೇಲ್ಮನವಿ ಸಮಿತಿಯು ಈ ವರ್ಷದ ಫೆಬ್ರವರಿ 9ರವರೆಗೆ ಅಧ್ಯಕ್ಷರು (ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರು) ರಾಜೀನಾಮೆ ನೀಡುವವರೆಗೆ ಕಾರ್ಯನಿರ್ವಹಿಸಿತ್ತು  ಎಂದು ವಕೀಲರು ಹೇಳಿದರು.

ಆದ್ದರಿಂದ ಎರಡು ವಾರಗಳಲ್ಲಿ ಮೇಲ್ಮನವಿ ಸಮಿತಿ ರಚಿಸುವಂತೆ ಮತ್ತು ಏಪ್ರಿಲ್ 20ರಂದು ಮಿಶ್ರಾ ಪ್ರಕರಣದ ಮೊದಲ ವಿಚಾರಣೆ ನಡೆಸುವಂತೆ ನ್ಯಾ. ಪ್ರತಿಭಾ ಡಿಜಿಸಿಎಗೆ ಸೂಚಿಸಿದರು. ಅಲ್ಲದೆ ಆ ಸಮಯಕ್ಕೆ  ಮೇಲ್ಮನವಿ ಸಲ್ಲಿಸುವಂತೆ ಪೀಠ ಮಿಶ್ರಾ ಅವರಿಗೆ ಸೂಚಿಸಿತು.

ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ತಾನು ಬಯಸಿದ್ದರೂ ಮೇಲ್ಮನವಿ ಸಮಿತಿ ಅಸ್ತಿತ್ವದಲ್ಲಿಲ್ಲ ಎಂದು ಶಂಕರ್ ಮಿಶ್ರಾ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

Kannada Bar & Bench
kannada.barandbench.com