ಬೆಂಗಳೂರು ಕೇಂದ್ರಿತ ಐಶ್ವರ್ಯಾ ಅನಂತಕುಮಾರ್ ಮತ್ತು ಪಾರ್ಟ್ನರ್ಸ್ ಸಂಸ್ಥೆಯು ಬೆಂಗಳೂರಿನಲ್ಲಿ ವ್ಯಾಜ್ಯ ಪರಿಹಾರ ಕಾನೂನು ಸೇವೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಲೂಥ್ರಾ ಮತ್ತು ಲೂಥ್ರಾ ಭಾರತೀಯ ಕಾನೂನು ಕಚೇರಿಯ ಜೊತೆ ವಿಲೀನಗೊಂಡಿದೆ.
ಐಶ್ವರ್ಯಾ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ, ಬೆಂಗಳೂರಿನ ಎನ್‌ಸಿಎಲ್‌ಟಿ ಮತ್ತು ಈ ವ್ಯಾಪ್ತಿಯ ಬೇರೆ ನ್ಯಾಯಾಲಯಗಳಲ್ಲಿ 12 ವರ್ಷ ವಕೀಲೆಯಾಗಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿದ್ದಾರೆ.
ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ, ಕರ್ನಾಟಕ ಕೊಳಚೆ ಪ್ರದೇಶ ಅಭಿವೃದ್ಧಿ ನಿಗಮ, ಬೆಂಗಳೂರಿ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸೇರಿದಂತೆ ಮಹತ್ವದ ಸಂಕೀರ್ಣ ದಾವೆಗಳನ್ನು ಐಶ್ವರ್ಯಾ ಮುನ್ನಡೆಸಿದ್ದಾರೆ.
ಸಿಂಬಿಯೋಸಿಸ್ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ 2012ರಲ್ಲಿ ಪದವಿ ಪೂರ್ಣಗೊಳಿಸಿರುವ ಐಶ್ವರ್ಯಾ, ಈ ಹಿಂದೆ ಜೆ ಸಾಗರ್ ಅಸೋಸಿಯೇಟ್ಸ್‌ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಐಶ್ವರ್ಯಾ ಅವರು ಮಾಜಿ ಕೇಂದ್ರ ಸಚಿವ ಬಿಜೆಪಿಯ ರಾಷ್ಟ್ರೀಯ ಮುಖಂಡರಾಗಿದ್ದ ದಿವಂಗತ ಅನಂತ್ ಕುಮಾರ್ ಅವರ ಪುತ್ರಿ.
ವಿಲೀನ ಪ್ರಕ್ರಿಯೆ ಬಗ್ಗೆ ಪ್ರತಿಕ್ರಿಯಿಸಿರುವ ಲೂಥ್ರಾ ಅಂಡ್ ಲೂಥ್ರಾ ವ್ಯವಸ್ಥಾಪಕ ಪಾಲುದಾರ ಹ್ಯಾರಿ ಚಾವ್ಲಾ ಅವರು “ಈ ವಿಲೀನದೊಂದಿಗೆ ಹಾಗೂ ಚೆನ್ನೈನಲ್ಲಿ ಕಚೇರಿ ತೆರೆದಿರುವುದು ಮತ್ತು ಹೈದರಾಬಾದ್‌ನಲ್ಲಿ ಹೊಸ ತಂಡವನ್ನು ಹೊಂದುವ ಮೂಲಕ ಲೂಥ್ರಾ ಅಂಡ್ ಲೂಥ್ರಾ ಕಾನೂನು ಕಚೇರಿಯು ದಕ್ಷಿಣ ಭಾರತದಲ್ಲಿ ಗುರುತರವಾದ ಉಪಸ್ಥಿತಿಯನ್ನು ಹೊಂದಿದಂತಾಗಿದೆ, ಇದು ಈ ಭಾಗದಲ್ಲಿ ಸಂಸ್ಥೆಯು ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿಕೊಳ್ಳಲು ನಾಂದಿಯಾಗಿದೆ” ಎಂದು ಹೇಳಿದ್ದಾರೆ.