
“ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಅಡಿ ಬಂಧಿಸಲ್ಪಟ್ಟಿರುವ ಐಶ್ವರ್ಯಾ ಗೌಡ ಅವರ ಬಂಧನದ ಆಧಾರಗಳನ್ನು ಲಿಖಿತವಾಗಿ ಆಕೆಯ ಕುಟುಂಬ, ಸ್ನೇಹಿತರು ಅಥವಾ ಆಕೆ ನಾಮನಿರ್ದೇಶಿಸಿರುವವರಿಗೆ ನೀಡಿಲ್ಲದಿರುವುದು ಕಾನೂನಿನ ಉಲ್ಲಂಘನೆಯಾಗಿರುವುದರಿಂದ ತಕ್ಷಣ ಆಕೆಯನ್ನು ಬಿಡುಗಡೆ ಮಾಡಬೇಕು” ಎಂದು ಆಕೆಯ ಪರ ಹಿರಿಯ ವಕೀಲ ಸಂದೇಶ್ ಚೌಟ ಮಂಗಳವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ಬಲವಾಗಿ ವಾದಿಸಿದರು.
ಪಿಎಂಎಲ್‌ಎ ಅಡಿ ದಾಖಲಿಸಿರುವ ಪ್ರಕರಣ ರದ್ದುಪಡಿಸಿ, ತಕ್ಷಣ ಬಿಡುಗಡೆ ಕೋರಿ ಐಶ್ವರ್ಯಾ ಗೌಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ರಾಚಯ್ಯ ಅವರ ರಜಾಕಾಲೀನ ಏಕಸದಸ್ಯ ಪೀಠ ನಡೆಸಿತು.
ಐಶ್ವರ್ಯಾ ಪ್ರತಿನಿಧಿಸಿದ್ದ ಸಂದೇಶ್ ಚೌಟ ಅವರು “ಏಪ್ರಿಲ್ 24ರಂದು ಐಶ್ವರ್ಯಾರನ್ನು ಬಂಧಿಸಲಾಗಿದ್ದು, ಈ ಸಂಬಂಧ ಒದಗಿಸಿರುವ ಐದು ದಾಖಲೆಗಳಲ್ಲಿ ಆಕೆಯನ್ನು ಎಲ್ಲಿ ಹಾಜರುಪಡಿಸಲಾಗುತ್ತದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿಲ್ಲ. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಐಶ್ವರ್ಯಾಗೆ ಎರಡು ವರ್ಷದ ಮಗುವಿದ್ದು, ಮಧ್ಯಂತರ ಜಾಮೀನಿನ ಮೇಲೆ ಅವರನ್ನು ಬಿಡುಗಡೆ ಮಾಡಬೇಕು” ಎಂದು ಮನವಿ ಮಾಡಿದರು.
“ಲಿಖಿತವಾಗಿ ಬಂಧನ ವಿಚಾರವನ್ನು ಬಂಧಿತ ವ್ಯಕ್ತಿಗಲ್ಲದೇ ಅವರ ಸ್ನೇಹಿತರು ಕುಟುಂಬಸ್ಥರು ಅಥವಾ ಆರೋಪಿ ನಾಮನಿರ್ದೇಶಿಸಿದ ವ್ಯಕ್ತಿಗೆ ತಿಳಿಸಬೇಕು ಎಂದು ಹೇಳಲಾಗಿದೆ. ಬಂಧನದ ಆಧಾರಗಳನ್ನು ನೀಡಬೇಕು. ಹೀಗೆ ಮಾಡುವುದರಿಂದ ಪೊಲೀಸ್ ಕಸ್ಟಡಿಯ ವಿರುದ್ಧ ತನ್ನ ಬಂಧನ ಸಮರ್ಥಿಸಲು ಆರೋಪಿಗೆ ಸಾಧ್ಯವಾಗುತ್ತದೆ. ಲಿಖಿತವಾಗಿ ಬಂಧನ ಆದೇಶವನ್ನು ಸ್ನೇಹಿತರು ಮತ್ತು ಕುಟುಂಬಸ್ಥರು ಅಥವಾ ಅವರ ನಾಮ ನಿರ್ದೇಶಿತರಿಗೆ ನೀಡಿಲ್ಲ. ಇ ಡಿ ಒದಗಿಸಿರುವ ಐದು ದಾಖಲೆಗಳಲ್ಲಿಯೂ ಐಶ್ವರ್ಯಾ ಗೌಡರನ್ನು ಎಲ್ಲಿ ಹಾಜರುಪಡಿಸಲಾಗುತ್ತದೆ ಎಂಬುದನ್ನು ತಿಳಿಸಿಲ್ಲ. ಹೀಗಾಗಿ, ಆಕೆಯನ್ನು ಎಲ್ಲಿ ಹಾಜರುಪಡಿಸಲಾಗುತ್ತದೆ ಎಂಬುದು ತಿಳಿಯದಿದ್ದಾಗ ಅವರನ್ನು ಸಮರ್ಥಿಸಿಕೊಳ್ಳುವ ಪ್ರಶ್ನೆ ಎಲ್ಲಿ ಉದ್ಭವಿಸುತ್ತದೆ” ಎಂದರು.
“ಐಶ್ವರ್ಯಾ ವಿರುದ್ದ ಮಾರ್ಚ್ 31ರಂದು ಇಸಿಐಆರ್ ದಾಖಲಿಸಲಾಗಿದೆ. ಏಪ್ರಿಲ್ 24ರಂದು ಐಶ್ವರ್ಯಾ ಮನೆಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಅಪರಾಧ ಪ್ರಕ್ರಿಯೆ ಇಲ್ಲದಿದ್ದರೂ ಕಾನೂನಿಗೆ ವಿರುದ್ಧವಾಗಿ ಐಶ್ವರ್ಯಾ ಹೇಳಿಕೆ ದಾಖಲಿಸಲಾಗಿದೆ. ಪಿಎಂಎಲ್‌ಎ 19 ಅಡಿ ಬಂಧನ ಪ್ರಕ್ರಿಯೆ ನಡೆಸಲಾಗಿದೆ. ಐಶ್ವರ್ಯಾ ಬಂಧನವನ್ನು ಪತಿ ಹರೀಶ್‌ಗೆ ಫೋನ್ ಮೂಲಕ ತಿಳಿಸಲಾಗಿದೆ. ಆದರೆ, ಕಾನೂನಿನ ಪ್ರಕಾರ ಬಂಧನದ ಆದೇಶ ಒದಗಿಸಬೇಕು. ಚೆಕ್ ಹಾಳೆಗಳು ಮತ್ತು ತೆರಿಗೆ ಬಿಲ್ ಸೇರಿ 267 ಬಿಡಿ ಹಾಳೆಗಳನ್ನು ಜಫ್ತಿ ಮಾಡಲಾಗಿದೆ. ಒಂದು ಸ್ಪೈರಲ್ ಪ್ಯಾಡ್ ವಶಕ್ಕೆ ಪಡೆಯಲಾಗಿದೆ. ಇಷ್ಟು ಹೊರತುಪಡಿಸಿ ಬೇರೆನನ್ನೂ ಜಫ್ತಿ ಮಾಡಲಾಗಿಲ್ಲ” ಎಂದರು.
“ಏಪ್ರಿಲ್ 24ರ ರಾತ್ರಿ 8 ಗಂಟೆ ಸುಮಾರಿಗೆ ನ್ಯಾಯಾಧೀಶರ ಗೃಹ ಕಚೇರಿಯಲ್ಲಿ ಆಕೆಯನ್ನು ಹಾಜರುಪಡಿಸಿ, 14 ದಿನ ಪೊಲೀಸ್ ಕಸ್ಟಡಿ ಪಡೆಯಲಾಗಿದೆ. ಲಿಖಿತವಾಗಿ ಬಂಧನದ ಆಧಾರ ತಿಳಿಸದಿರುವುದು ಸಿಆರ್‌ಪಿಸಿ 50ಎ ಉಲ್ಲಂಘನೆಯಾಗಿರುವುದರಿಂದ ತಕ್ಷಣ ಅವರನ್ನು ಬಿಡುಗಡೆ ಮಾಡಬೇಕು” ಎಂದು ಕೋರಿದರು.
ವಂಚನೆ ಮತ್ತು ನಂಬಿಕೆ ದ್ರೋಹದ ಆರೋಪದ ಮೇಲೆ ಐಶ್ವರ್ಯಾ ವಿರುದ್ಧ ರಾಜ್ಯದ ವಿವಿಧ ಠಾಣೆಗಳಲ್ಲಿ ಏಳು ಎಫ್‌ಐಆರ್ ದಾಖಲಿಸಲಾಗಿದೆ. ಇವುಗಳಲ್ಲಿ ಬಹುತೇಕ ತಡೆಯಾಜ್ಞೆ ಅಥವಾ ಬಲವಂತದ ಕ್ರಮಕೈಗೊಳ್ಳದಂತೆ ಆದೇಶ ಮಾಡಲಾಗಿದೆ ಎಂದೂ ಚೌಟ ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಜಾರಿ ನಿರ್ದೇಶನಾಲಯ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಅರವಿಂದ್ ಕಾಮತ್ ಅವರು ಆಕ್ಷೇಪಣೆ ಸಲ್ಲಿಸಲು ಅವಕಾಶ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮೇ 22ಕ್ಕೆ ಮುಂದೂಡಲಾಗಿದೆ.