ಮುಂಬರುವ ಮಹಾರಾಷ್ಟ್ರ ಚುನಾವಣೆ ವೇಳೆ ಗಡಿಯಾರದ ಚಿಹ್ನೆಯ ಬಳಕೆಗೆ ಸಂಬಂಧಿಸಿದಂತೆ ಹೊಸದಾಗಿ ಮರಾಠಿಯಲ್ಲಿ ಹಕ್ಕುತ್ಯಾಗಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸುವುದಾಗಿ ಎನ್‌ಸಿಪಿ ಅಜಿತ್ ಪವಾರ್ ಬಣ ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ [ಶರದ್ ಪವಾರ್ ಮತ್ತು ಅಜಿತ್ ಅನಂತರಾವ್ ಪವಾರ್ ಇನ್ನಿತರರ ನಡುವಣ ಪ್ರಕರಣ].
ಎನ್‌ಸಿಪಿಯ ಗಡಿಯಾರ ಚಿಹ್ನೆ ಇರುವ ಯಾವುದೇ ಚುನಾವಣಾ ಜಾಹೀರಾತುಗಳಲ್ಲಿ ಚಿಹ್ನೆ ಹಂಚಿಕೆ ವಿವಾದ ಇನ್ನೂ ನ್ಯಾಯಾಲಯದ ಅಂಗಳದಲ್ಲಿದೆ ಎಂಬುದನ್ನು ಸಾರುವಂತಹ ಹಕ್ಕುತ್ಯಾಗ ಪ್ರದರ್ಶಿಸುವಂತೆ ಸುಪ್ರೀಂ ಕೋರ್ಟ್ ಈ ಹಿಂದೆ ಅಜಿತ್ ಬಣಕ್ಕೆ ಆದೇಶಿಸಿತ್ತು.
ವ್ಯಾಪಕ ಪ್ರಚಾರದೊಂದಿಗೆ ಅಜಿತ್ ಬಣ 36 ಗಂಟೆಗಳ ಒಳಗೆ ಮರಾಠಿಯಲ್ಲಿ ಹೊಸ ಹಕ್ಕುತ್ಯಾಗಗಳನ್ನು ಪ್ರಕಟಿಸಬೇಕು ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ , ದೀಪಂಕರ್ ದತ್ತಾ ಹಾಗೂ ಉಜ್ಜಲ್ ಭುಯಾನ್ ಅವರಿದ್ದ ಪೀಠ ಇಂದು ತಿಳಿಸಿತು.
ಶರದ್ ಪವಾರ್ ಹಾಗೂ ಗಡಿಯಾರದ ಮೇಲೆ ಅವಲಂಬಿತವಾಗಿ ಅಜಿತ್ ಪವಾರ್ ಬಣ ಚುನಾವಣಾ ಪ್ರಚಾರ ನಡೆಸುತ್ತಿರುವ ವಿಧಾನದ ಬಗ್ಗೆ ಶರದ್ ಪವಾರ್ ಬಣದ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ವಿಚಾರಣೆ ವೇಳೆ ನ್ಯಾಯಾಲಯದ ಗಮನಸೆಳೆದರು. ಶರದ್ ಪವಾರ್ ತಮ್ಮ ದೇವರು ಎಂದು ಅಜಿತ್ ಪವಾರ್ ಬಣ ಪದೇ ಪದೇ ಪ್ರಚಾರಗಳಲ್ಲಿ ಹೇಳಿಕೆಗಳನ್ನು ನೀಡುವ ಮೂಲಕ, ಪ್ರಸಾರ ಮಾಡುವ ಮೂಲಕ ನ್ಯಾಯಾಲಯದ ಆದೇಶಗಳನ್ನು ಮತ್ತೆ ಮತ್ತೆ ಉಲ್ಲಂಘಿಸಿದೆ ಎಂದು ವಾದಿಸಿದರು.
ವಾದವನ್ನು ಆಲಿಸಿದ ನ್ಯಾಯಾಲಯವು ತಾನು ನೀಡಿರುವ ಆದೇಶದ ಪಾಲನೆಯಾಗಿದೆ ಎಂದು ಎಲ್ಲರಿಗೂ ತಿಳಿಯುವಂತೆ ನೋಡಿಕೊಳ್ಳಬೇಕು ಎಂದು ಅಜಿತ್ ಪವಾರ್ ಬಣಕ್ಕೆ ತಾಕೀತು ಮಾಡಿತು.
ಮುಂಬರುವ ಮಹಾರಾಷ್ಟ್ರ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಜಿತ್ ಪವಾರ್ ಬಣಕ್ಕೆ ಹೊಸ ಚಿಹ್ನೆ ನೀಡುವಂತೆ ಕೋರಿ ಶರದ್ ಪವಾರ್ ಬಣ ಸಲ್ಲಿಸಿದ್ದ ಮಧ್ಯಂತರ ಅರ್ಜಿಗೆ ಸಂಬಂಧಿಸಿದಂತೆ ಪ್ರತಿ- ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯ ಇಂದು ಅಜಿತ್ ಪವಾರ್ ಬಣಕ್ಕೆ ಸೂಚಿಸಿತು. ಹಿರಿಯ ವಕೀಲ ಬಲ್ಬೀರ್ ಸಿಂಗ್ ಅವರು ಅಜಿತ್ ಪವಾರ್ ಬಣವನ್ನು ಪ್ರತಿನಿಧಿಸಿದ್ದರು.
ಯಾವುದೇ ಹಕ್ಕು ತ್ಯಾಗ ಇಲ್ಲದೆ ಗಡಿಯಾರ ಚಿಹ್ನೆ ಬಳಸಿಕೊಂಡು ಅಜಿತ್ ಪವಾರ್ ಮತದಾರರ ಮನಸ್ಸಿನಲ್ಲಿ 'ದೊಡ್ಡ ಪ್ರಮಾಣದ ಗೊಂದಲ' ಮೂಡಿಸಿದ್ದಾರೆ ಎಂದು ಶರದ್ ಪವಾರ್ ಬಣ ದೂರಿತ್ತು.